ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಆಯೋಗ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಸಲ್ಲಿಸಿದ ವರದಿ ಅವೈಜ್ಞಾನಿಕವಾಗಿದ್ದು ಅದನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳ ಮೀಸಲಾತಿ ರಕ್ಷಣಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಯಿಂದ ಗುರುವಾರ ಕರೆ ನೀಡಿರುವ ಹಿನ್ನೆಲೆ ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಕಾರ್ಯಕರ್ತರು ಕೈಯಲ್ಲಿ ನೀಲಿ ಧ್ವಜ, ಹಿಡಿದು ಗಮನ ಸೆಳೆದಿದ್ದು, ಸಂಪೂರ್ಣ ನೀಲಿಮಯ ಕಂಡಿತು.
ನಗರದ ಜಗತ್ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯ ನಕಲು ಪ್ರತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರು ಮಾತನಾಡಿ, ʼನಾಗಮೋಹನ್‌ದಾಸ್ ವರದಿ ದುರುದ್ದೇಶ ಹಾಗೂ ಅವೈಜ್ಞಾನಿಕವಾಗಿ ಏಕಪಕ್ಷೀಯವಾಗಿ ಮಾಹಿತಿ ಕಲೆ ಹಾಕಲಾಗಿದೆ. ಸರ್ಕಾರದ ನಿಬಂಧನೆಗಳನ್ನು ಉಲ್ಲಂಘಿಸಿ, ಅಧಿಕಾರದ ವ್ಯಾಪ್ತಿ ಮೀರಿ ಮಾಡಿರುವ ಶಿಫಾರಸ್ಸುಗಳಿರುವ ನಾಗಮೋಹನ್‌ದಾಸ್ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುತ್ತದೆ. ಬಲಗೈ ಸಮುದಾಯಕ್ಕೆ ಸೇರಿದ ವಿವಿಧ ಜಾತಿಗಳ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇಂತಹ ಹಲವು ಲೋಪದೋಷಗಳು ಈ ವರದಿಯಲ್ಲಿವೆ. ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದ್ದು, ಇದನ್ನು ನಾವು ಸಹಿಸುವುದಿಲ್ಲ. ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸದೆ, ತಿರಸ್ಕರಿಸಲು ನಿರ್ಣಯ ಕೈಗೊಳ್ಳಬೇಕು. ನಮ್ಮ ಪಾಲು ನಮಗೆ ದಕ್ಕುವ ತನಕ ಹೋರಾಟ ನಿರಂತರವಾಗಿರುತ್ತದೆʼ ಎಂದು ಎಚ್ಚರಿಸಿದರು.
ʼಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರ್ಪಡೆಗೊಳ್ಳುವ ಜಾತಿಗಳನ್ನು ನಮೂದಿಸಿ ಸರ್ಕಾರ ಆದೇಶ ಹೊರಡಿಸಬೇಕು. ಎಡ್ಗರ್ ಥರ್ಸಟನ್ ಹಾಗೂ ಕೆ.ರಂಗಾಚಾರಿ ಸಂಶೋಧನೆ ಮಾಡಿ ಬರೆದಿರುವ ‘ಕಾಸ್ಟ್ ಅಂಡ್ ಟ್ರೈಬ್ಸ್ ಸದರ್ನ್ ಇಂಡಿಯಾ’ ಆಧರಿಸಿ ಬಲಗೈ ಸಮುದಾಯಗಳನ್ನು ಗುರುತಿಸಿ, ಜನಸಂಖ್ಯೆ ಒಟ್ಟುಗೂಡಿಸಿ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಬೇಕು. ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಿಲ್ಲ. ಆದಕಾರಣ ಸಂಗ್ರಹಿಸಿರುವ ಮಾಹಿತಿ ದೃಢೀಕರಣಕ್ಕೆ 15 ದಿನಗಳ ಕಾಲಾವಕಾಶ ಕೊಟ್ಟು ತಂತ್ರಾಂಶದ ಮೂಲಕ ಆಕ್ಷೇಪಣೆಗಳನ್ನು ಸ್ವೀಕರಿಸಬೇಕು. ಬಳಿಕ ಮೀಸಲಾತಿ ಮರು ಹಂಚಿಕೆ ಮಾಡಬೇಕುʼ ಎಂದು ಆಗ್ರಹಿಸಿದರು.
ʼಆಯೋಗವು ದುರುದ್ದೇಶದಿಂದ ಪರೈಯ್ಯ ಪರಯನ್ ಸಮುದಾಯವನ್ನು ಎಡಗೈ ಗುಂಪಿಗೆ ಸೇರಿಸಿರುವುದನ್ನು ರದ್ದುಪಡಿಸಿ, ಬಲಗೈ ಗುಂಪಿಗೆ ಸೇರಿಸಬೇಕು. ಜಾತಿಗಳೇ ಇಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಗಳಿಗೆ ನಿಗದಿಪಡಿಸಿರುವ ಶೇ 1ರಷ್ಟು ಮೀಸಲಾತಿ ರದ್ದುಪಡಿಸಿ ಆಯಾ ಜಾತಿಗಳಿಗೆ ಮರು ಹಂಚಿಕೆ ಮಾಡಬೇಕು. ಎಂಟು ಲಕ್ಷ ಮಕ್ಕಳು ಗಣತಿಯಿಂದ ಹೊರಗುಳಿದಿದ್ದಾರೆ. ಅವರನ್ನು ಸಮೀಕ್ಷೆಗೆ ಒಳಪಡಿಸಬೇಕು. ಹೊಲೆಯ ಮತ್ತು ಹೊಲೆಯ ಸಂಬಂಧಿತ ಪ್ರವರ್ಗ(ಸಿ) ಗುಂಪಿಗೆ ಸೇರಬೇಕಿರುವ ಜಾತಿಗಳನ್ನು ಪ್ರವರ್ಗ–ಎ,ಬಿ,ಇ ವರ್ಗಗಳಿಗೆ ಉದ್ದೇಶಪೂರ್ವಕವಾಗಿ ಸೇರಿಸಿ ಅನ್ಯಾಯ ಮಾಡಲಾಗಿದೆ. ಸದರಿ ಜಾತಿಗಳನ್ನು ʼಸಿʼ ಗುಂಪಿಗೆ ಸೇರಿಸಬೇಕುʼ ಎಂದು ಒತ್ತಾಯಿಸಿದರು.
ಪಟ್ಟಿಯಲ್ಲಿರುವ 49 ಮೂಲ ಉಪಜಾತಿಗಳು ಪರಿಶಿಷ್ಟ ಜಾತಿಯ ಬಲಗೈ, ಛಲವಾದಿ, ಹೊಲೆಯ ಸಂಬಂಧಿತ ಜಾತಿಗಳು ಒಂದೇ ಆಗಿದ್ದು, ಒಂದೇ ಗುಂಪಿಗೆ ಸೇರಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಲಗೈ ಗುಂಪಿನ ಜಾತಿಗಳು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಅಧಿಕಾರಕ್ಕೆ ತಂದಿವೆ. ಹೀಗಾಗಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಶೇ50 ಕ್ಕಿಂತ ಕಡಿಮೆ ಸಮೀಕ್ಷೆಯಾಗಿದ್ದು, ಅದನ್ನು ಮರುಸಮೀಕ್ಷೆ ನಡೆಸಬೇಕು ಸೇರಿ ಒಟ್ಟು 11 ಬೇಡಿಕೆಗಳ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಇದನ್ನೂ ಓದಿ : ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸಪ್ಪ ಅಪ್ಪ ವಿಧಿವಶ
ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಮರಿಯಪ್ಪ ಹಳ್ಳಿ, ಅರ್ಜುನ ಭದ್ರೆ, ಬಸಣ್ಣ ಸಿಂಗೆ, ಗುಂಡಪ್ಪ ಲಂಡನಕರ, ಹಣಮಂತ ಬೋಧನಕರ, ದಿನೇಶ ದೊಡ್ಡಮನಿ, ಪ್ರಕಾಶ ಮೂಲಭಾರತಿ, ಮಲ್ಲಪ್ಪ ಹೊಸಮನಿ,ದೇವೆಂದ್ರ ಸಿನ್ನೂರ, ಎ.ಬಿ.ಹೊಸಮನಿ, ವಿಶಾಲದರ್ಗಿ, ಗಣೇಶ ವಳಕೇರಿ, ಭೀಮರಾವ ಟಿ.ಟಿ., ಮಹಾಂತಪ್ಪ ಸಂಗಾವಿ, ಅರ್ಜುನ ಗೊಬ್ಬರ, ರಮೇಶ ಪಟ್ಟೇದಾರ, ಅಂಬಾರಾಯ ಅಷ್ಟಗಿ, ಬಾಬು ಒಂಟಿ, ರಾಜು ಜಾನೆ, ಚಂದ್ರಶೇಖರ ಹರನಾಳ,ಮಹಾಂತೇಶ ಬಡದಾಳ, ಶ್ರೀನಿವಾಸ ಖೇಳಗಿ, ಧರ್ಮಣ್ಣಾ ಇಟಗಾ, ವಿಠೋಬಾ ಎಂ.ಕೆ., ಮರೆಪ್ಪ ಮೇತ್ರೆ, ಅಶ್ವಿನ ಸಂಕಾ, ಸಂತೋಷ ಹಾದಿಮನಿ, ಅಶ್ವಿನಿ ಮದನಕರ್, ರಮೇಶ್ ರಾಗಿ, ಅರುಣ ಭರಣಿ, ಮೈಲಾರಿ ದೊಡ್ಡಮನಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.