ಸ್ವಾತಂತ್ರ್ಯ ದಿನ ವಿಶೇಷ | ಕುಗ್ಗುತ್ತಿರುವ ಪ್ರಜಾಪ್ರಭುತ್ವದ ನಡುವೆ ನಾಗರಿಕ ಜಾಗೃತಿಯ ಆಶಾಕಿರಣ

Date:

Advertisements

ನಮ್ಮ ಸಂವಿಧಾನ ಇನ್ನೂ ನಮ್ಮ ಕೈಯಲ್ಲಿದೆ, ಅದನ್ನು ರಕ್ಷಿಸುವುದು ಮತ್ತು ಜೀವಂತವಾಗಿಡುವುದು ನಮ್ಮ ಜವಾಬ್ದಾರಿ. ಇಂದು ನಾವು ಎಚ್ಚರಗೊಂಡರೆ ಮಾತ್ರ ನಾವೊಂದು ಬಲಿಷ್ಠ ಪ್ರಜಾಪ್ರಭುತ್ವ ಆಗುವ ದಿಸೆಯಲ್ಲಿ ನಡೆಯಬಹುದು. ಕೇವಲ ಅತಿದೊಡ್ಡ ಪ್ರಜಾಪ್ರಭುತ್ವ ಎಂದೆನಿಸಿಕೊಳ್ಳುವುದರಲ್ಲಿ ನಮ್ಮ ಹೆಗ್ಗಳಿಕೆ ಇಲ್ಲ. ಬದಲಿಗೆ ಅತ್ಯಂತ ನ್ಯಾಯಸಮ್ಮತ, ಸಮಾನತಾಪೂರ್ಣ ಮತ್ತು ಎಲ್ಲರಿಗೂ ಧ್ವನಿ, ಹಕ್ಕು, ಸ್ವಾತಂತ್ರ್ಯ, ಗೌರವ, ಸಮತೆ, ಸುರಕ್ಷೆ, ಅವಕಾಶ ನೀಡುವ ಪ್ರಜಾಪ್ರಭುತ್ವವಾಗುವುದು ನಮ್ಮ ಗುರಿಯಾಗಬೇಕು.

78 ವರ್ಷಗಳಿಂದ ತನ್ನದೇ ಪ್ರಜೆಗಳ ಆಡಳಿತ, ನೀತಿರಚನೆ, ನಿರ್ಧಾರ, ನಿಲುವು, ನಿಯಮಾವಳಿ ಕಂಡಿರುವ ಈ ರಾಷ್ಟ್ರದಲ್ಲಿ, 78ರ ಸ್ವಾತಂತ್ರ್ಯ ಸಂಭ್ರಮದ ಜೊತೆ ಜೊತೆಗೆ ನಾವು ಗಳಿಸಿದ್ದೆಷ್ಟು, ಉಳಿಸಿದೆಷ್ಟು, ಭರಿಸಿದೆಷ್ಟು, ಕಳೆದು ಕೊಂಡದ್ದೆಷ್ಟು, ಕಳೆದುಕೊಂಡವರೆಷ್ಟು, ಗಳಿಸಿಕೊಂಡವರೆಷ್ಟು – ಯಾರಿಗೆ, ಎಲ್ಲಿಗೆ, ಯಾವ ನಿಟ್ಟಿನಲ್ಲಿ, ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ಒಂದು ಸಂಭ್ರಮ ಎನ್ನುವ ಅಧ್ಯಯನ, ವಿಮರ್ಶೆ ಅತೀ ಅಗತ್ಯ. ಇದು ನಮ್ಮ ಬಂದ ದಾರಿಯನ್ನಷ್ಟೇ ಅಲ್ಲ, ಇನ್ನು ಹೋಗಬೇಕಾದ ದಾರಿಯ ಬಗ್ಗೆಯೂ ಒಂದಿಷ್ಟು ಮಾರ್ಗದರ್ಶನ ನೀಡಬಲ್ಲದು. ಹಾಗೆಯೇ ಕಾಲ ಕಾಲಕ್ಕೆ ಈ ವಿಮರ್ಶೆ ಆಗಲೇಬೇಕು. ಇಂತಹ ವಿಮರ್ಶೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅವಿಭಾಜ್ಯ ಅಂಗ ಕೂಡ. ಪ್ರಜಾಪ್ರಭುತ್ವ ‘ಒಂದು ಸಲ ಅಳವಡಿಸಿದರೆ ಸಾಕು ಮತ್ತೆ ಹಿಂತಿರುಗಿ ನೋಡಬೇಕೆಂದು ಇಲ್ಲ’ ಎನ್ನುವ ಒಂದು ವ್ಯವಸ್ಥೆ ಅಲ್ಲ.

ಸ್ವಾತಂತ್ರ್ಯ ದಿನವು ತ್ರಿವರ್ಣದ ಧ್ವಜವನ್ನು ಎತ್ತಿ ಹಿಡಿಯುವ, ಕೇಸರಿ, ಬಿಳಿ ಹಸಿರು ಬಣ್ಣದ ಉಡುಪು ತೊಟ್ಟು, ಎಲ್ಲರಿಗೂ ವಾಟ್ಸಪ್ಪ್ ಮೆಸೇಜ್ ಕಳುಹಿಸುವ, ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ – ಒಂದು ಆಚರಣೆಯ ದಿನಕ್ಕೆ ಸೀಮಿತವಲ್ಲ; ಅದು ನಮ್ಮ ಸಂವಿಧಾನಾತ್ಮಕ ಮೌಲ್ಯಗಳನ್ನು ಹೇಗೆ ಪಾಲಿಸುತ್ತಿದ್ದೇವೆ ಎಂಬ ಆತ್ಮಪರಿಶೀಲನೆಯ ದಿನವೂ ಆದರೆ ಮಾತ್ರ, ನಮ್ಮ ಸ್ವಾತಂತ್ರ್ಯಕ್ಕೆ ಒಂದು ಮಹತ್ವ. ಕಳೆದ ದಶಕದಲ್ಲಿ ಭಾರತದಲ್ಲಿನ ಪ್ರಜಾಸ್ವಾಮ್ಯದ ಗುಣಮಟ್ಟ, ಚುನಾವಣಾ ಪಾರದರ್ಶಕತೆ, ಮತಗಳ್ಳತನ, ಚುನಾವಣಾ ಬಾಂಡುಗಳು, ಅಲ್ಪಸಂಖ್ಯಾತರ ಹಕ್ಕುಗಳು, ಭಾಷಾ–ಸಾಂಸ್ಕೃತಿಕ ಬಹುತ್ವ, ಒಕ್ಕೂಟ ಪದ್ಧತಿ (ಫೆಡರಲಿಸಂ), ಮಹಿಳಾ ಭದ್ರತೆ, ಅಂತರ್ಜಾತಿ/ಅಂತರಧರ್ಮ ಮದುವೆಗಳ ವಿರುದ್ಧ ಕಾಣಿಸಿಕೊಂಡ ಅಪರಾಧಗಳು, ಮಾಧ್ಯಮ–ಡಿಜಿಟಲ್ ಸ್ವಾತಂತ್ರ್ಯ, ಹಾಗೂ ವಿದೇಶಾಂಗ ನೀತಿಯ ಅಸ್ಥಿರತೆ – ಇವೆಲ್ಲವೂ ಒಂದು ದೊಡ್ಡ ಚರ್ಚೆಯ ವಿಷಯವಾಗಿವೆ. ಈ ಅಂಶಗಳು ನಮ್ಮ ಪ್ರಜಾಪ್ರಭುತ್ವವನ್ನು ಹಾಗೂ ನಮ್ಮ ಸ್ವಾತಂತ್ರ್ಯವನ್ನು ಕ್ಷೀಣಿಸುವಲ್ಲಿ, ಮೊಟಕುಗೊಳಿಸುವಲ್ಲಿ ಅತೀ ಹೆಚ್ಚಿನ ಪಾತ್ರವನ್ನು ವಹಿಸಿವೆ. ಇದೇ ಸಮಯದಲ್ಲಿ ಒಂದಿಷ್ಟು ಕೇಸುಗಳಲ್ಲಿ ನ್ಯಾಯಾಂಗದ ಕ್ರಿಯಾಶೀಲತೆ, ನಾಗರಿಕ ಸಮಾಜದ ಜಾಗೃತಿ ಮತ್ತು ಕೆಲವು ರಾಜ್ಯ ಮಟ್ಟದ ಕಠಿಣ ಕ್ರಮಗಳು ‘ಈ ದೇಶದಲ್ಲಿ ವ್ಯವಸ್ಥೆ ಕೆಲಸ ಮಾಡಬಲ್ಲದು’ ಎಂಬ ಆಶಯವನ್ನು ಜೀವಂತವಾಗಿಡುತ್ತಿವೆ ಎನ್ನುವುದೂ ಸತ್ಯ.

Advertisements

ಅಂತರರಾಷ್ಟ್ರೀಯವಾಗಿ ಭಾರತದಲ್ಲಿ ಪ್ರಜಾಸ್ವಾಮ್ಯದ ಗುಣಮಟ್ಟ ಕುಸಿಯುತ್ತಿರುವುದರ ಬಗ್ಗೆ ಹಲವಾರು ಸಂಸ್ಥೆಗಳ ಆಳವಾದ ವರದಿಗಳು ಇತ್ತೀಚಿನ ವರ್ಷಗಳಲ್ಲಿ ಪ್ರಕಟವಾಗಿವೆ. V-Dem Democracy Report 2025 ಭಾರತವನ್ನು “electoral autocracy” (‘ಮತದಾನ/ಚುನಾವಣಾ ಹಕ್ಕು’ ಇರುವ ಆದರೆ ಆಳವಾಗಿ ಆಧಿಪತ್ಯವುಳ್ಳ ವ್ಯವಸ್ಥೆ) ಎಂದು ವರ್ಗೀಕರಿಸಲಾಗಿದೆ. Freedom House ಎನ್ನುವ ಇನ್ನೊಂದು ಜಾಗತಿಕ ಸಮೀಕ್ಷಾ ಸಂಸ್ಥೆ ಹೊರಡಿಸಿರುವ “Freedom in the World 2025” ವರದಿ ಭಾರತವನ್ನು “Partly Free (ಭಾಗಷಃ ಸ್ವತಂತ್ರ)” ಎಂದು ಗುರುತಿಸಿ, ಭಾರತದಲ್ಲಿ ರಾಜಕೀಯ ಹಕ್ಕು–ನಾಗರಿಕ ಸ್ವಾತಂತ್ರ್ಯಗಳ ಅಂಕೆ ಕಡಿಮೆಯೇ ಉಳಿದಿದೆ ಎಂದು ಹೇಳುತ್ತದೆ. V-Dem ಪ್ರಕಟಿಸಿರುವ ಪತ್ರಿಕಾ ಸ್ವಾತಂತ್ರ್ಯದ ಅಂಕಿ ಅಂಶಗಳ ಪ್ರಕಾರ ‘RSF World Press Freedom Index 2025’ ಪಟ್ಟಿಯಲ್ಲಿ ಭಾರತ 159ನೇ ಸ್ಥಾನದಲ್ಲಿ ಇದೆ – ಇದು “ಗಂಭೀರ ಸ್ಥಿತಿ” (red zone) ಎಂದೇ ಪರಿಗಣಿಸಬಹುದು. ಒಂದು ದಶಕದಿಂದ ಈ ಎಲ್ಲ ಸಮೀಕ್ಷೆಗಳಲ್ಲಿ ಬರಬರುತ್ತ, ವರ್ಷ ವರ್ಷಕ್ಕೂ ಈ ಎಲ್ಲ ಅಂಕಿ ಅಂಶಗಳಲ್ಲಿ ಭಾರತದ ಶ್ರೇಣಿ ಕಡಿಮೆ ಇರುವುದು ಈ ದೇಶದ ಪ್ರತಿಯೋರ್ವ ಪ್ರಜೆ ವಿಚಾರ ಮಾಡಬೇಕಾದ ಅಂಶ.

Democracy vb 32

ಈ ಮೇಲಿನ ಅಂಕಿ ಅಂಶಗಳು ಯಾವುದೇ ‘ಒಂದು ಸೀಮಿತ ಘಟನೆ’ಯಿಂದ ಉಂಟಾಗಿರುವ ಕುಸಿತವಲ್ಲ; ರಾಜ್ಯ–ಮಾಧ್ಯಮ ಸಂಬಂಧ, ಹೆಚ್ಚುತ್ತಿರುವ ಅಪರಾಧ, ಉಲ್ಭಣಗೊಳ್ಳುತ್ತಿರುವ ಶ್ರೀಮಂತ ಬಡವರ ನಡುವಿನ ಅಂತರ, ಹೆಚ್ಚುತ್ತಿರುವ ಕೋಮು ಆಧಾರಿತ ದ್ವೇಷ ಭಾಷಣಗಳು, ತನಿಖಾ ಸಂಸ್ಥೆಗಳ ರಾಜಕೀಯೀಕರಣ (politicalisation of institutions), ಅಭಿವ್ಯಕ್ತಿ/ಸಂವಾದದ ಕುಂಠಿತ, ಡಿಜಿಟಲ್ ನಿರ್ಬಂಧಗಳು (internet shutdowns) ಹೀಗೆ ಹಲವು ನಿರ್ಬಂಧ ನೀತಿಗಳ, ಹೇರಿಕೆಗಳ ಒಟ್ಟು ಪರಿಣಾಮ. ಇವೆಲ್ಲವೂ ಹೇಳುವ ಸರಳ ಸಾರಾಂಶ ಒಂದು ಪ್ರಜಾ ಪ್ರಭುತ್ವ ಎಂದೆನಿಸಲು, ಪ್ರಜೆಗಳು ಬರಿಯ “ಮತದಾನ ಮಾಡುವ ಹಕ್ಕು”, ಹೊಂದಿದ್ದರೆ ಸಾಕಾಗುವುದಿಲ್ಲ; ಬದಲಿಗೆ ಇದರ ಜೊತೆಜೊತೆಗೆ ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವಾಯತ್ತತೆ, ಸಾಮಾಜಿಕ ಸಾಮರಸ್ಯ, ಪ್ರಜಾ ಸ್ವಾತಂತ್ರ್ಯ, ನಾಗರಿಕ–ಪತ್ರಿಕಾ ಸ್ವಾತಂತ್ರ್ಯ ಮತ್ತು ಕಾನೂನು ಆಳ್ವಿಕೆ (rule of law) ಇವೆಲ್ಲವೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ, ಪ್ರಜಾಪ್ರಭುತ್ವ ಎನ್ನುವುದು “ಕಾಗದದ ಮೇಲಿನ ಅಕ್ಷರ”ವಾಗಿ ಉಳಿಯುತ್ತದೆ. ಇಂತಹ ಆಢಂಬರ ಪ್ರಜಾಪ್ರಭುತ್ವದಿಂದ ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ.

ಸ್ವಾತಂತ್ರ್ಯವನ್ನು/ಪ್ರಜಾಪ್ರಭುತ್ವವನ್ನು ಕೇವಲ “ಮತ ಹಾಕುವ ಹಕ್ಕು” ಎಂದು ಮಾತ್ರ ಅರ್ಥೈಸಿದರೆ ಅದು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಮಾಡುವ ಅತೀ ದೊಡ್ಡ ಅನ್ಯಾಯ. ಜನರ ಮತ ನಿಜವಾದ ಜನಾಭಿಪ್ರಾಯವೋ, ಅಥವಾ ಹಣ, ಪ್ರಚಾರಯಂತ್ರ, ಮತ್ತು ಡೇಟಾ-ನಿಯಂತ್ರಣಗಳಿಂದ ಪ್ರೇರೇಪಿತ ಅಭಿಪ್ರಾಯವೋ ಎಂಬ ಪ್ರಶ್ನೆ ಕೂಡ ನಾವು ಕೇಳಬೇಕಾಗುತ್ತೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ದೇಶಾದ್ಯಂತ ಚುನಾವಣಾ ಆಯೋಗವು ₹10,000 ಕೋಟಿಗೂ ಅಧಿಕ ಮದ್ಯ, ನಗದು, ಮಾದಕವಸ್ತುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಘೋಷಿಸಿತ್ತು. ಇದರಲ್ಲಿ ದೊಡ್ಡ ಪ್ರಮಾಣ “ಮತ ಖರೀದಿ”ಗೆ ಸಂಬಂಧಿಸಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ನಮ್ಮ ಹಿಂದಿನ ಚುನಾವಣೆಯ ಹೋಲಿಕೆಯಲ್ಲಿ ಇದು ಗಮನಾರ್ಹ ಏರಿಕೆ. ಇದು “ಮತದಾನ ಹಕ್ಕು” ಎನ್ನುವ ಪರಿಕಲ್ಪನೆಯನ್ನು ಅರ್ಥಹೀನಗೊಳಿಸುವಲ್ಲಿ ಅತೀ ನೇರ ದಾಳಿ.

ಪ್ರಜಾಪ್ರಭುತ್ವದ ಉನ್ನತಿಗೆ ಇನ್ನೊಂದು ಪೂರಕ ಅಂಶ : ಜನರಿಗೆ ವ್ಯವಸ್ಥೆಯ ಮೇಲಿರುವ ನಂಬಿಕೆ, ವಿಶ್ವಾಸ. ಜನರು ಸರ್ಕಾರದ ಮೇಲೆ, ಸಂಸ್ಥೆಯ ಮೇಲೆ, ವ್ಯವಸ್ಥೆಯ ಮೇಲೆ, ಇರುವ ಕಾನೂನಿನ ಮೇಲೆ ವಿಶ್ವಾಸವನ್ನು ಕಳೆದುಕೊಂಡರೆ, ಜನರು ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವುದಿಲ್ಲ. ಹಾಗೆಯೇ, ಇದು ಅರಾಜಕತೆಗೂ ದಾರಿ ಮಾಡಿ ಕೊಡುವುದು. ಇತ್ತೀಚಿಗಿನ ಮತಗಳ್ಳತನ, ಚುನಾವಣಾ ಬಾಂಡ್ ಹಗರಣಗಳು ಜನರಿಗೆ ಪ್ರಜಾಪ್ರಭುತ್ವದಲ್ಲಿ ಇರುವ ವಿಶ್ವಾಸವನ್ನು ಮತ್ತಷ್ಟು ಕಡಿಮೆಯಾಗಿಸುವುದರಲ್ಲಿ ಸಂಶಯವಿಲ್ಲ. ನಾವು ಎಷ್ಟೇ ಓಟು ಹಾಕಿದರೂ, ಬರುವವರೇ ಬರುವುದು, ನಾವು ಎಷ್ಟೇ ಸಲ ಮತದಾನ ಚಲಾಯಿಸಿದರೂ, ಏನೂ ಬದಲಾಗಲ್ಲ ಎನ್ನುವ ನಂಬಿಕೆ ಆಳವಾಗಿ ಪ್ರಜೆಗಳಲ್ಲಿ ಬೇರೂರಿದರೆ – ಸಾಮಾನ್ಯ ಮತದಾರರು ಮತಗಟ್ಟೆಯನ್ನು ನಿರ್ಲಕ್ಷಿಸಲು ಶುರು ಮಾಡುತ್ತಾರೆ. ಇಂತಹ ನಿರ್ಲಕ್ಷ್ಯ ಪ್ರಜಾಪ್ರಭುತ್ವಕ್ಕೆ ಮಾರಕ.

ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಧರ್ಮ, ಭಾಷೆ, ಆಹಾರ ಪದ್ಧತಿ, ಸಂಸ್ಕೃತಿ, ಜೀವನಮೌಲ್ಯಗಳ ಸಮಾನ ಹಕ್ಕು ನೀಡಿದರೂ, ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಹೆಚ್ಚುತ್ತಿರುವ ದಾಳಿ ದೇಶದ ಸಾಮಾಜಿಕ ಸಾಮರಸ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ದಕ್ಕೆಗೊಳಿಸುತ್ತಿದೆ. NCRB 2022ರ ಅಂಕಿಗಳ ಪ್ರಕಾರ, ಸಮುದಾಯಗಳ ನಡುವೆ ವೈಷಮ್ಯ ಹುಟ್ಟಿಸುವ IPC 153A ಸರಣಿಯ ಪ್ರಕರಣಗಳು 1,804ಕ್ಕೆ ತಲುಪಿವೆ. ಹಿಂದಿನ ದಶಕದ ಹೋಲಿಕೆಯಲ್ಲಿ ಇದು ನಿರಂತರ ಏರಿಕೆಯನ್ನು ತೋರಿಸುತ್ತದೆ. ಇದು ಕೇವಲ ಕಾನೂನು-ಸಂಖ್ಯೆಗಳ ವಿಷಯವಲ್ಲ; ಇದು ಸಮಾಜದ ಒಳಹರಿವು, ಭದ್ರತೆ, ಮತ್ತು ಭವಿಷ್ಯದ ಮೇಲಿನ ಭರವಸೆಯ ವಿಷಯ. ಹಾಗೆಯೇ ಸಾಮಾಜಿಕ ಸಾಮರಸ್ಯ ಇಲ್ಲದಿರುವ ಸಮಾಜದಲ್ಲಿ ಪ್ರಜಾಪ್ರಭುತ್ವ ನಿಜಕ್ಕೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಜನರು ಒಂದು ದೇಶದ, ರಾಜ್ಯದ, ನಾಡಿನ, ತಮ್ಮ ಊರಿನ ಸಮಸ್ಯೆಯ ಬಗ್ಗೆ ನಿಜವಾಗಿ ಕಳಕಳಿಯಿಂದ ವಿಚಾರಿಸಿ, ಅದಕ್ಕೆ ತಕ್ಕುನಾದ ಪ್ರತಿನಿಧಿಯನ್ನು ಆಯ್ಕೆಮಾಡಬೇಕಾದರೆ, ಮೊದಲು ಆ ಸಮಾಜದಲ್ಲಿ ಸಾಮರಸ್ಯ ಇರಬೇಕು.

ಅಂತರರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ವರದಿಗಳು, “ಬುಲ್ಡೋಜರ್ ರಾಜ್ಯ” ಎಂದು ಕುಖ್ಯಾತಿ ಪಡೆದಿರುವ ನ್ಯಾಯಸಮ್ಮತವಲ್ಲದ ‘ಮನೆ – ಕಟ್ಟಡ ಧ್ವಂಸ’ಗಳು ಹಲವೆಡೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ “ಸಮೂಹ ಶಿಕ್ಷೆ” ರೂಪದಲ್ಲಿ ಭಾರತದಲ್ಲಿ ಜಾರಿಯಾಗಿದೆ ಎಂದು ಎಚ್ಚರಿಸುತ್ತವೆ. Amnesty International (2022) ಈ ಕ್ರಿಯೆಗಳನ್ನು ಕಾನೂನು ಪ್ರಕ್ರಿಯೆಗೆ ವಿರುದ್ಧವಾದ ಹಾಗೂ ಸಮಾನ ನ್ಯಾಯ ತತ್ವಕ್ಕೆ ಧಕ್ಕೆ ತರುವ ಕ್ರಮವೆಂದು ವಿವರಿಸಿದೆ. ಆದರೂ ಕೂಡ ನಮ್ಮದೇ ರಾಷ್ಟ್ರದಲ್ಲಿ ಇದರ ಬಗ್ಗೆ ಹೆಚ್ಚಿನ ಮಟ್ಟದ ವಿರೋಧ ಇಲ್ಲದೆ ಇರುವುದು ಆತಂಕದ ವಿಷಯ. ಇನ್ನೊಂದೆಡೆ ನಮ್ಮ ಅಮೂಲ್ಯವಾದ ಮಾಹಿತಿ ಸ್ವಾತಂತ್ರ್ಯದ ಹಕ್ಕು ಕುಂದುತ್ತಿದೆ. ಸರ್ಕಾರದ ಭ್ರಷ್ಟಾಚಾರವು ಬೆಳಕಿಗೆ ಬರಬಾರದು ಎನ್ನುವ ನಿಟ್ಟಿನಲ್ಲಿ, ನಮಗಿರುವ ಮಾಹಿತಿ ಹಕ್ಕನ್ನು ಕೂಡ ಇಂದು ಕುಂಠಿತಗೊಳಿಸಲಾಗುತ್ತಿದೆ. ಭಾರತದಂತಹ ದೇಶದಲ್ಲಿ – RTI ಕೇವಲ ಕಾಗದದ ಹಕ್ಕಾಗಿರದೆ, ಪ್ರಜಾಪ್ರಭುತ್ವದ ಉಸಿರಾಟವನ್ನೇ ಜೀವಂತವಾಗಿಡುವ ಸಾಧನವಾಗಿದೆ. ಇಂದಿನ ಸರ್ಕಾರ ಅದನ್ನು ದುರ್ಬಲಗೊಳಿಸುತ್ತಿರುವುದು ಪ್ರಜಾಪ್ರಭುತ್ವದ ಶ್ವಾಸನಾಳವನ್ನು ಹಿಸುಕಿದಂತೆ.

indiaflag

ನಮ್ಮಲ್ಲಿರುವ ಮುಖ್ಯ ವಾಹಿನಿ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮ ವಾತಾವರಣವೂ ಈ ಪ್ರವೃತ್ತಿಗೆ ಬಲ ನೀಡುತ್ತಿದೆ. 2025ರ RSF World Press Freedom Index (ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಇಂಡೆಕ್ಸ್) ನಲ್ಲಿ ಭಾರತ 159ನೇ ಸ್ಥಾನದಲ್ಲಿದೆ. ಪತ್ರಕರ್ತರ ಮೇಲೆ ಹಿಂಸೆ, ಮಾಧ್ಯಮ ವಾಹಿನಿಗಳ ಮಾಲೀಕತ್ವದ ಕೇಂದ್ರೀಕರಣ ಮತ್ತು ರಾಜಕೀಯಕರಣ (politicisation), ಮತ್ತು ಆನ್‌ಲೈನ್ ಅಪಮಾನ/ಹಿಂಸೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಈ ಸಮೀಕ್ಷೆ ಉಲ್ಲೇಖಿಸುತ್ತದೆ. Internet Shutdowns ವಿಷಯದಲ್ಲಿ, ಭಾರತ 2024ರಲ್ಲಿ 84 shut down ಗಳನ್ನು ಕಂಡಿದೆ. ಪ್ರಪಂಚದ ಗಣತಾಂತ್ರಿಕ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಬ್ಲ್ಯಾಕ್‌ಔಟ್ ನಮ್ಮ ದೇಶದಲ್ಲೇ ನಡೆದಿದೆ. Freedom on the Net 2024 ವರದಿಯೂ ಕೂಡ, ಭಾರತದಲ್ಲಿ ‘ಇಂಟರ್ನೆಟ್ ಸ್ವಾತಂತ್ರ್ಯ’ ಇನ್ನೂ ಒತ್ತಡದಲ್ಲೇ ಇದೆ/ಅಥವಾ ಸ್ವತಂತ್ರವಾಗಿಲ್ಲ ಎಂದು ಹೇಳುತ್ತದೆ.

ಇನ್ನೊಂದೆಡೆ ಒಕ್ಕೂಟ ವ್ಯವಸ್ಥೆ ಕೂಡ ಒತ್ತಡಕ್ಕೆ ಒಳಗಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಒಕ್ಕೊಟ ವ್ಯವಸ್ಥೆಯನ್ನು ಶಿಥಿಲಗೊಳಿಸಲಾಗುತ್ತಿದೆ. ಇದಕ್ಕೊಂದು ನಿದರ್ಶನ: ಒಕ್ಕೂಟ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ. “ಮೂರು ಭಾಷಾ ತತ್ವ”ದ ಆಶಯಗಳೊಂದಿಗೆ ಈ ನೀತಿ ಜಾರಿಗೆ ಬಂದ ರೀತಿ ಪ್ರಾದೇಶಿಕ ಅಸಮಾನತೆ ಹುಟ್ಟಿಸುವ ಸಾಧ್ಯತೆ ಇದೆ ಎಂಬ ವಾದಗಳು ರಾಷ್ಟ್ರದ ವಿವಿಧ ಭಾಗಗಳಲ್ಲಿ ಕೇಳಿಬಂದಿರುವುದನ್ನು ಕೂಡ ನಾವು ನೋಡಿದ್ದೇವೆ.

ಧರ್ಮಾಭಿಮಾನವನ್ನು ರಾಜಕೀಯ ದಾಳವಾಗಿ ಬಳಸುವ ಪ್ರವೃತ್ತಿ, ತನಿಖಾ ಸ್ವಾಯತ್ತತೆಯ ಮೇಲಿನ ಅನುಮಾನ, ಜನರ ನಡುವೆ ಧರ್ಮ ಮತ್ತು ಕೋಮು ಆಧಾರಿತ ವೈಷ್ಯಮ್ಯದ ವಾತಾವರಣದ ವ್ಯವಸ್ಥಿತ ನಿರ್ಮಾಣ ಮತ್ತು ಮಾಧ್ಯಮ ನಿರ್ಬಂಧಗಳು, ವೈಷ್ಯಮ್ಯ ಪೂರಿತ ರಾಜಕೀಯ ಹೇಳಿಕೆಕಾಳು, ದ್ವೇಷ ಭಾಷಣಗಳು, ಇವೆಲ್ಲ ಸೇರಿ ಭಾರತದ “ಬಹುತ್ವ”ಕ್ಕೆ ಮೋಡ ಕವಿದಂತಾಗಿದೆ. ನಮ್ಮ ಈ ದೇಶದ, ನಮ್ಮ ನಾಗರೀಕತೆಯ ನಾಡಿಯೇ ಬಹುತ್ವ ಮತ್ತು ಬಹುತ್ವದಲ್ಲಿ ಏಕತ್ವ – ಈ ಮೌಲ್ಯವೇ, ಈ ಅಡಿಪಾಯವೇ ನಶಿಸಿದರೆ, ಪ್ರಜಾಪ್ರಭುತ್ವ ಕೇವಲ ಒಂದು ಮಠದ, ಒಂದು ಧರ್ಮದ, ಒಂದು ಭಾಷೆಯ, ಒಂದು ರಾಜಕೀಯ ಪಕ್ಷದ ಆಶಯಕ್ಕೆ ಸೀಮಿತವಾಗುತ್ತದೆ. ಹಾಗೆಯೇ ಸ್ವಾಯತ್ತ ಸಂಸ್ಥೆಗಳ ನಿಜವಾದ ಶಕ್ತಿ ತಮ್ಮ ತೀರ್ಮಾನಗಳನ್ನು ಯಾರು ಮೆಚ್ಚುತ್ತಾರೆ ಎಂಬುದರಿಂದ ಅಲ್ಲ, ಬದಲಿಗೆ ತಮ್ಮ ತೀರ್ಮಾನಗಳು ಎಷ್ಟು ನ್ಯಾಯಯುತ ಎಂಬುದರಿಂದ ಅಳೆಯಲ್ಪಡಬೇಕು. ಅದು ಕುಂದಿದರೆ, ಸಂವಿಧಾನದಲ್ಲಿರುವ “ಸ್ವಾತಂತ್ರ್ಯ” ಕೇವಲ ಮುದ್ರಿತ ಪದಗಳ ಸಾಲುಗಳಾಗಿ ಉಳಿಯುತ್ತದೆ.

ಮತ್ತೊಂದೆಡೆ ದಮನಿತರ, ತಳ ಸಮುದಾಯದವರ, ದುರ್ಬಲರ, ಸಹಾಯಕ್ಕೆ ಒದಗುತಿದ್ದ ಎಷ್ಟೋ NGO, ನಾಗರಿಕ ಸಮಾಜ ಸಂಘಟನೆಗಳ ಪರವಾನಗಿ ರದ್ದುಗಳು ಮೂಲತಃ ಪ್ರಜಾಪ್ರಭುತ್ವ ತತ್ವದ ಅಸ್ತಿತ್ವವನ್ನು ದುರ್ಬಲಗೊಳಿಸುತ್ತಿವೆ. ಇಂದು ‘ಉಳ್ಳವನೇ ಒಡೆಯ’ ಅನ್ನುವ ಹಂತಕ್ಕೆ ನಾವು ತಲುಪಿದ್ದೇವೆ. ಕೃಷಿಕರು, ಮಹಿಳೆಯರು, ದಮನಿತರು, ಸಂತ್ರಸ್ತರು ದೊಡ್ಡ ಮಟ್ಟದ ಹೋರಾಟ ನಡೆಸದೆ, ರೋಡಿಗಿಳಿಯದೆ, ಕೋರ್ಟು ಕಚೇರಿ ಅಂತ ತಿರುಗಾಡದೆ, ಪೊಲೀಸ್, ಕಂಪ್ಲೇಂಟ್, ಲಾಯರ್ ಮೂಲಕವಲ್ಲದೆ ನಮ್ಮ ಹಕ್ಕುಗಳು, ನಮ್ಮ ಧ್ವನಿಯನ್ನು ಕೇಳುವವರೇ ಇಲ್ಲ ಎನ್ನುವ ಪರಿಸ್ಥಿತಿ ಕೂಡ ಬಂದಿರುವುದು ವಿಷಾದ. ಎಲ್ಲದಕ್ಕೂ ಒಂದೋ ರೋಡಿಗಿಳಿಯಬೇಕು, ಇಲ್ಲವೇ ಕೋರ್ಟಿಗಿ ಹೋಗಬೇಕು ಅನ್ನುವ ಪರಿಸ್ಥಿತಿಯನ್ನಿ ನಾವೇ ಆಯ್ಕೆ ಮಾಡಿದ ಪ್ರತಿನಿಧಿಗಳು ನಮ್ಮ ಜನಸಾಮಾನ್ಯರ ಮುಂದಿಟ್ಟಿರುವ ಆಯ್ಕೆ.

ಭಾರತದ ಆರ್ಥಿಕ ಪ್ರಗತಿಯ ಕಥೆಯನ್ನು ಸಾಮಾನ್ಯವಾಗಿ GDP ಏರಿಕೆ ಮತ್ತು Unicorn Start-up ಗಳ ಸಂಖ್ಯೆಗಳಿಂದ ಅಳೆಯಲಾಗುತ್ತದೆ. ಆದರೆ ಈ ಅಂಕಿ ಅಂಶಗಳ ಹಿಂದಿರುವ ವಾಸ್ತವ- ಆರ್ಥಿಕ ಅಸಮಾನತೆ ಮತ್ತು ನಿರುದ್ಯೋಗ. Oxfam India ವರದಿ (Survival of the Richest, 2023) ಪ್ರಕಾರ, ಭಾರತದ ಶ್ರೇಷ್ಠ 1% ಜನರು ದೇಶದ ಒಟ್ಟು ಸಂಪತ್ತಿನ 40% ಕ್ಕೂ ಹೆಚ್ಚು ಹಿಡಿದುಕೊಂಡಿದ್ದಾರೆ, ಮತ್ತು ಕೆಳಗಿನ 50% ಜನರ ಪಾಲು ಕೇವಲ 3% ಮಾತ್ರ. ಈ ‘ಅಸಮಾನತೆಯ ಅಂತರ’ ವಿಶ್ವದಲ್ಲೇ ಅತೀ ಉನ್ನತ ಮಟ್ಟಕ್ಕೆ ತಲುಪಿದೆ. ನಿರುದ್ಯೋಗದ ಅಂಕಿಅಂಶಗಳೂ ಆತಂಕಕಾರಿ. CMIE ಡೇಟಾ ಪ್ರಕಾರ 2024ರಲ್ಲಿ ಭಾರತದ ಸರಾಸರಿ ನಿರುದ್ಯೋಗ ದರ 7–8% ಇತ್ತು, ಆದರೆ ಯುವ ನಿರುದ್ಯೋಗ (15–29 ವರ್ಷ) 20% ಗಿಂತ ಹೆಚ್ಚು. ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು ತೀವ್ರವಾಗಿದೆ.

Wealth inequality

ಸರ್ಕಾರದ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಮತ್ತು PLI ಯೋಜನೆಗಳು ಉದ್ಯೋಗ ಸೃಷ್ಟಿಯಲ್ಲಿ ಯಶಸ್ವಿಯಾಗಿದ್ದರೂ, ಅವು ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಲು ಬೇಕಾದ ಗತಿಯನ್ನೂ ಪ್ರಮಾಣವನ್ನೂ ತಲುಪಿಲ್ಲ. ಆರ್ಥಿಕ ಬೆಳವಣಿಗೆ ಕೇವಲ ಸಂಖ್ಯಾ ಅಂಕಿಗಳ ಹಬ್ಬ ಆಗಿ ಉಳಿದರೆ, ಅದು ಸಮಾಜದಲ್ಲಿ ಬೇಸತ್ತ ಯುವತೆ, ಭದ್ರತಾಹೀನ ಕಾರ್ಮಿಕ ವರ್ಗ, ಮತ್ತು ಹೆಚ್ಚುತ್ತಿರುವ ಅಸಮಾನತೆಯ ರಾಜಕೀಯ ಬಿರುಗಾಳಿಗೆ ದಾರಿ ಮಾಡಿಕೊಡುತ್ತದೆ. ಸಮಾನ ವಿಕಸನವೇ ಶಾಂತಿಯ ಭದ್ರವಾದ ಹಾದಿ ಎಂದು ಇತಿಹಾಸ ನಮಗೆ ಸ್ಪಷ್ಟಪಡಿಸುತ್ತದೆ.

ಇವೆಲ್ಲದರ ನಡುವೆ ನಮ್ಮ ವಿದೇಶಾಂಗ ನೀತಿ ಕೂಡ ಎಲ್ಲೋ ಎಡವಿದ ಹಾಗೆ ಕಾಣಿಸುತ್ತಿದೆ. ಅಮೆರಿಕದ ಪರ ಘೋಷಣೆ ಕೂಗಿದ ನಮ್ಮದೇ ಪ್ರಧಾನಿ ಇಂದು ಅಮೆರಿಕದಿಂದ ಹಿಂದೊಂದೂ ಕಂಡಿರದ ಸುಂಕವನ್ನು ದೇಶ ಭರಿಸಬೇಕಾದ ಸ್ಥಿತಿಗೆ ಕೊಂಡೊಯ್ದಿದ್ದಾರೆ. ಅತ್ತ ಬಾಂಗ್ಲಾದೇಶದೊಂದಿಗೆ ವಿರಸ, ಇತ್ತ ನೇಪಾಳದಂತಹ ರಾಷ್ಟ್ರಗಳೊಂದಿಗೂ ಕೂಡ ಸಮರಸವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಎಡವುತ್ತಿದ್ದೇವೆ. ಚೀನಾ ಮತ್ತು ಪಾಕಿಸ್ತಾನದ ಹೆಸರು ಎತ್ತುವ ಹಾಗೆ ಇಲ್ಲ. ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ (ಅದರಲ್ಲೂ ಹೆಚ್ಚು ನಿರುದ್ಯೋಗಿ ಯುವಜನತೆ) ಹೊಂದಿರುವ ಭಾರತ ಪರಿಣಾಮಕಾರಿ ವಿದೇಶಾಂಗ ನೀತಿ ಹೊಂದಿರುವುದು ಅವಶ್ಯಕ. ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮ, ಹೀಗೆ ಹಲವಾರು ರೀತಿಯಲ್ಲಿ ನಮಗೆ ಬೇರೆ ಬೇರೆ ದೇಶಗಳ ಜೊತೆ ಸಾಮರಸ್ಯದಿಂದ ಸಾಗಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ.

ಮೇಲಿನ ಎಲ್ಲವೂ ಕೂಡ ಈ ದೇಶದ ಪ್ರತಿಯೊಬ್ಬನೂ ವಿಮರ್ಶಿಸಬೇಕಾದ ವಿಚಾರಗಳು. ಅದೂ 78ರ ಸಂಭ್ರಮದ ಜೊತೆಜೊತೆಗೆ ವಾಸ್ತವದ ಅರಿವು ನಮಗಿದ್ದರೆ ಮಾತ್ರ ಈ ದೇಶವನ್ನು ಅಭಿವೃದ್ಧಿ, ಬದಲಾವಣೆ, ಸಾಮರಸ್ಯದ ಹಾದಿಯಲ್ಲಿ ಕೊಡೊಯ್ಯುವ ದಾರಿ ಎಂತು ಎನ್ನುವ ಪರಿಶೀಲನೆ ಮಾಡಬಹುದು. ಅದೇ ಸಮಸ್ಯೆಯೇ ಇಲ್ಲ ಎಂದು ನಿರಾಕರಿಸುತ್ತ ಕುಳಿತುಕೊಂಡರೆ ಪರಿಹಾರ ಎಲ್ಲಿಂದ ಸಾಧ್ಯ?

ಹಾಗೆಂದು ಎಲ್ಲವೂ ನಿರಾಶಾದಾಯಕವಾಗಿಲ್ಲ. ಒಂದೊಮ್ಮೆ- 1947ರಲ್ಲಿ ಒಂದು ಸಣ್ಣ ಗುಂಡು ಸೂಜಿಯನ್ನು ಕೂಡ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದ ಈ ದೇಶ ಇಂದು ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪನ್ನು ಬೀರಿದೆ. ಹಲವಾರು ರಾಜ್ಯಗಳು ಒಳ್ಳೆಯ ಪ್ರಗತಿಯನ್ನು ಕೂಡ ತೋರಿಸಿ ಕೊಟ್ಟಿವೆ. ಇದು ಈ ದೇಶದ ಪ್ರಜೆಗಳಿಗೆ ಸಲ್ಲಬೇಕಾದ ಕೀರ್ತಿ. ಇನ್ನೂ ಕೂಡ ಈ ದೇಶದ ಬಹು ಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿಕೊಂಡಿದ್ದಾರೆ – ಇದು ಕೂಡ ಒಂದು ಸಕಾರಾತ್ಮಕ ವಿಷಯ. ಬಹು ರಾಜ್ಯಗಳು ಈ ದೇಶದ ಸಂವಿಧಾನ ನೀಡಿರುವ ಪ್ರಜಾಸತ್ತಾತ್ಮತೆ, ಒಕ್ಕೂಟ ವ್ಯವಸ್ಥೆಯನ್ನು ಸಂವಿಧಾನದ ಮೌಲ್ಯಗಳಿಗೆ ಅನುಸಾರವಾಗಿ, ಆಶಯಕ್ಕೆ ಪೂರಕವಾಗಿ, ಪ್ರಜಾ ಕಲ್ಯಾಣದ ದಿಕ್ಕಿನಲ್ಲಿ ಸಾಗುವಂತೆ ನಿರಂತರ ಪ್ರಯತ್ನವನ್ನು ಕೂಡ ಮಾಡುತ್ತಿವೆ. ಇದು ಕೂಡ ಈ ದೇಶದ ‘ಬಹುತ್ವ’ ನೀಡಿರುವ ಮಹತ್ ಕೊಡುಗೆ. ಪ್ರಜಾಪ್ರಭುತ್ವ ಸಕ್ರಿಯವಾಗಿರಲು ಒಕ್ಕೂಟ ವ್ಯವಸ್ಥೆ ಕೂಡ ತನ್ನ ಕೊಡುಗೆ ನೀಡುತ್ತಿದೆ ಎಂದರೆ ಅದರಲ್ಲಿ ಉತ್ಪ್ರೇಕ್ಷೆಯೇನಿಲ್ಲ.

ಭಾರತದ ಪ್ರಜಾಪ್ರಭುತ್ವವು ಇಂದು ಬೃಹತ್ ಅಲೆಸಮೂಹಗಳ ಮಧ್ಯೆ ಸಾಗುತ್ತಿರುವ ಹಡಗಿನಂತಿದೆ. ಕೆಲವೊಮ್ಮೆ ಗಾಳಿಯು ನಮ್ಮ ವಿರುದ್ದ ಬೀಸಬಹುದು, ಕೆಲವೊಮ್ಮೆ ಅಲೆಗಳು ಬಲವಾಗಿ ಅಪ್ಪಳಿಸಬಹುದು. ಆದರೆ ನಾವೆಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶವೆಂದರೆ : ನಮ್ಮ ಹಡಗು ಚಲಿಸುತ್ತಿರುವ ಬಲವಾದ ನೆಲೆ. ಆ ನೆಲೆಯೇ ನಮ್ಮ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳು. ಭಾರತದ ಪ್ರಜಾಪ್ರಭುತ್ವವು ಇಂದು ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದರೂ, ಅದೂ ಇನ್ನೂ ಜೀವಂತವಾಗಿದ್ದು, ಈ ಸವಾಲುಗಳನ್ನು ಸಾಧ್ಯತೆಗಳನ್ನಾಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ – ನಮ್ಮ ಸಂವಿಧಾನದಾತೃಗಳು ನಾಡಿನಲ್ಲಿ ಬಿಟ್ಟಿರುವ ಸಾಂವಿಧಾನಿಕ ಮೌಲ್ಯಗಳು, ಈ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ಭಾರತೀಯ ನಾಗರಿಕರು, ಮತ್ತು ಇನ್ನೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಒಂದು ಸಶಕ್ತ ನಾಗರಿಕ ಸಮಾಜ. ಇತಿಹಾಸವನ್ನೇ ಸಾಕ್ಷಿಯಾಗಿ ತೆಗೆದುಕೊಂಡರೂ ಕೂಡ ಇದೇ ಕಾಣಸಿಗುವುದು. ಸ್ವಾತಂತ್ರ್ಯ ಹೋರಾಟದಿಂದ 1975ರ ತುರ್ತು ಪರಿಸ್ಥಿತಿವರೆಗೆ, ಈ ನಾಡಿನಲ್ಲಿ ಮತ್ತೆ ಮತ್ತೆ ಪುಟಿದೇಳುವ ಲಕ್ಷಾಂತರ ಜನರ ಧೈರ್ಯ, ಮತ್ತು ಅನೇಕ ಸಾಮಾಜಿಕ ಚಳುವಳಿಗಳ ಹೋರಾಟ, ಪ್ರತಿಯೊಂದು ಸಂಕಷ್ಟದ ನಂತರ ಜನತೆ ಎಚ್ಚರಗೊಂಡು ಪ್ರಜಾಪ್ರಭುತ್ವವನ್ನು ಪುನಃ ಬಲಪಡಿಸಿದ್ದಾರೆ (ರೈತರ ಹೋರಾಟ, CAA ಹೋರಾಟ ಇದಕ್ಕೊಂದು ನಿದರ್ಶನ). ನಮ್ಮದೇ ರಾಜ್ಯದ ಒಬ್ಬ ಉನ್ನತ ರಾಜಕಾರಣಿ, ಖ್ಯಾತ ಸಿನಿಮಾ ನಟ, ಹಾಗೆಯೇ ಬಹು ಪ್ರಭಾವಿ ಧರ್ಮಾಧಿಕಾರಿ – ಹೀಗೆ ನಮ್ಮ ನಾಗರಿಕ ಸಮಾಜ ಇವರೆಲ್ಲರನ್ನೂ ಕೂಡ ಕಾನೂನಿನ ಚೌಕಟ್ಟಿನೊಳಗೆ ತರುವುದರಲ್ಲಿ ಯಶಸ್ವಿಯಾಗಿದೆ. ಇದು ಈ ನಾಡಿನ ಜನರಿಗೆ ಇನ್ನೂ ಕೂಡ ಸಾಂವಿಧಾನಿಕ ಮೌಲ್ಯ, ಕಾನೂನು ವ್ಯವಸ್ಥೆ, ಪ್ರಜಾಸತ್ತಾತ್ಮಕ ಚೌಕಟ್ಟಿನ ಮೇಲೆ ವಿಶ್ವಾಸ ಇರುವುದನ್ನು ದೃಢೀಕರಿಸುತ್ತದೆ. ಇದೊಂದು ಭರವಸೆಯ ಆಶಾಕಿರಣವೂ ಹೌದು. ನಮ್ಮ ಪ್ರಜೆ ಮನಸ್ಸು ಮಾಡಿದರೆ ಮುತ್ತಾತನನ್ನು ಸಂಸತ್ತಿಗೆ ಕಳಿಸಬಲ್ಲದು, ಹಾಗೆಯೇ ಅಪರಾಧ ಎಸಗಿದರೆ ಮೊಮ್ಮಗನನ್ನು ಜೈಲಿಗೂ ಕಳಿಸಬಹುದು ಎನ್ನುವುದನ್ನು ಇಡೀ ವಿಶ್ವಕ್ಕೆ ಮನದಟ್ಟು ಮಾಡಿಸಿದೆ.

CAA protest 2

ಹೌದು, ಇಂದು ಆಡಳಿತದಲ್ಲಿ ಪಾರದರ್ಶಕತೆ ಕುಗ್ಗಿದೆ, ಸಾಮಾಜಿಕ ಭೇದ ಹೆಚ್ಚಾಗಿದೆ, ಕೋಮು ದ್ವೇಷ ಹೆಚ್ಚಾಗಿದೆ, ಇದನ್ನು ಸಾಂಸ್ಥಿಕರಿಸಲಾಗುತ್ತಿದೆ, ನಮ್ಮ ಸಂಸ್ಥೆಗಳನ್ನು ಬೇಕೆಂತಲೇ ದುರ್ಬಲಗೊಳಿಸಲಾಗುತ್ತಿದೆ. ಆದರೆ ಇದು ಅಂತ್ಯವಲ್ಲ. ಇದು ಎಚ್ಚರಿಕೆಯ ಘಂಟೆ. ನಮಗೆ ಬೇಕಾದ ಸಾಮಾಜಿಕ, ರಾಜಕೀಯ, ಆಡಳಿತಾತ್ಮಕ, ಸಾಂಸ್ಕೃತಿಕ ಬದಲಾವಣೆ ರಾಜಕೀಯ ನಾಯಕರಿಂದ ಮಾತ್ರ ಆಗಬೇಕಿಲ್ಲ, ಎಷ್ಟೋ ಬಾರಿ ಈ ಬದಲಾವಣೆಗಾಗಿ ನಾವು ರಾಜಕಾರಣಿಗಳನ್ನು ಅವಲಂಬಿಸಲೂ ಬಾರದು; ಬದಲಾವಣೆ ಪ್ರಾರಂಭವಾಗುವುದು, ಪ್ರಾರಂಭವಾಗಬೇಕಾದದ್ದು – ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲಿ. ನಾವು ಪ್ರಶ್ನಿಸಿದಾಗ, ನಾವು ದಿಕ್ಕರಿಸಿದಾಗ, ನಾವು ಸಕ್ರಿಯವಾಗಿ ಪಾಲ್ಗೊಂಡಾಗ, ಪಾರದರ್ಶಕತೆಯನ್ನು ನಮ್ಮ ಜನ್ಮಸಿದ್ಧ ಹಕ್ಕೆಂದು ಪ್ರತಿಪಾದಿಸಿದಾಗ, ಮತ್ತು ಮಾನವೀಯತೆ ಮೀರಿದ ಭಾವನೆಗಳನ್ನು ಬೆಳೆಸಿದಾಗ ಮಾತ್ರ, ಈ ದೇಶ ನಿಜವಾಗಿ ಬಲಿಷ್ಠವಾಗುತ್ತದೆ. ಹಾಗೆಯೇ – ನಮ್ಮ ದೇಶದಲ್ಲಿ ಇರುವ ನಿಚ್ಚಳ ಆರ್ಥಿಕ ಅಸಮಾನತೆ, ಸಾಮಾಜಿಕ ಭೇದಭಾವ, ಮಾಧ್ಯಮದ ಸಂಕೋಲೆಗಳು, ಮತ್ತು ಸಂಸ್ಥೆಗಳ ಬಲಹೀನತೆ ಇವುಗಳನ್ನು ಸರಿಪಡಿಸಲು ಕೇವಲ ರಾಜಕೀಯ ಬದಲಾವಣೆ ಸಾಕಾಗುವುದಿಲ್ಲ; ನಾಗರಿಕರ ಜಾಗೃತಿ, ಸರ್ವರ ಹೊಣೆಗಾರಿಕೆಯ ಪಾಲ್ಗೊಳ್ಳುವಿಕೆ ಮತ್ತು ಪಾರದರ್ಶಕ ಆಡಳಿತದ ಒತ್ತಾಯವೂ ಅತೀ ಅಗತ್ಯ. ನಾವು ಚುನಾವಣೆಗಳಲ್ಲಿ ಮತದಾನದೊಂದಿಗೆ ಮಾತ್ರವಲ್ಲ, ದೈನಂದಿನ ಜೀವನದಲ್ಲಿಯೂ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವ ಕ್ರಮಗಳನ್ನು ಕೈಗೊಂಡಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ನಮ್ಮ ಹೊಣೆಗಾರಿಕೆ ಕೇವಲ ಮತದಾನದ ದಿನದವರೆಗೆ ಸೀಮಿತವಲ್ಲ; ಪ್ರತಿದಿನ, ಪ್ರತಿಕ್ಷಣ, ನಮ್ಮ ಕ್ರಿಯೆಗಳು, ನಮ್ಮ ಧ್ವನಿ, ಮತ್ತು ನಮ್ಮ ಮೌಲ್ಯಗಳು ಪ್ರಜಾಪ್ರಭುತ್ವದ ಜೀವಾಳ.

ಇದನ್ನೂ ಓದಿ Exclusive | ದರ್ಶನ್‌ ಜೀವನ ಮಾತ್ರವಲ್ಲ, ಜೊತೆಗಿದ್ದವರ ಜೀವನವೂ ಹಾಳಾಯ್ತು- ನಟಿ ರಮ್ಯಾ

ನಮ್ಮ ಸಂವಿಧಾನ ಇನ್ನೂ ನಮ್ಮ ಕೈಯಲ್ಲಿದೆ, ಅದನ್ನು ರಕ್ಷಿಸುವುದು ಮತ್ತು ಜೀವಂತವಾಗಿಡುವುದು ನಮ್ಮ ಜವಾಬ್ದಾರಿ. ಇಂದು ನಾವು ಎಚ್ಚರಗೊಂಡರೆ ಮಾತ್ರ ನಾವೊಂದು ಬಲಿಷ್ಠ ಪ್ರಜಾಪ್ರಭುತ್ವ ಆಗುವ ದಿಸೆಯಲ್ಲಿ ನಡೆಯಬಹುದು. ಕೇವಲ ಅತಿದೊಡ್ಡ ಪ್ರಜಾಪ್ರಭುತ್ವ ಎಂದೆನಿಸಿಕೊಳ್ಳುವುದರಲ್ಲಿ ನಮ್ಮ ಹೆಗ್ಗಳಿಕೆ ಇಲ್ಲ. ಬದಲಿಗೆ ಅತ್ಯಂತ ನ್ಯಾಯಸಮ್ಮತ, ಸಮಾನತಾಪೂರ್ಣ ಮತ್ತು ಎಲ್ಲರಿಗೂ ಧ್ವನಿ, ಹಕ್ಕು, ಸ್ವಾತಂತ್ರ್ಯ, ಗೌರವ, ಸಮತೆ, ಸುರಕ್ಷೆ, ಅವಕಾಶ ನೀಡುವ ಪ್ರಜಾಪ್ರಭುತ್ವವಾಗುವುದು ನಮ್ಮ ಗುರಿಯಾಗಬೇಕು.

ಸುಚಿತ್ರಾ
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X