ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ ನೀಡಿರುವ ವಿಚಾರವು ನಮ್ಮ ಪಕ್ಷದ ಆಂತರಿಕ ವಿಚಾರವಾಗಿದೆ. ಅದರ ಬಗ್ಗೆ ಸದನದಲ್ಲಿ ವಿವರಣೆ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ, ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜಣ್ಣ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿದರು. ರಾಜೀನಾಮೆಗೆ ಸರಿಯಾಗಿ ಕಾರಣ-ವಿವರಣೆಯನ್ನು ಸರ್ಕಾರ ನೀಡಬೇಕು. ದಲಿತ ನಾಯಕ ರಾಜಣ್ಣ ಅವರನ್ನು ಸಂಪುಟದಿಂದ ‘ವಜಾಗೊಳಿಸಿ, ಅವರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಆರೋಪಿಸಿದರು.
ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದದ್ದರಾಮಯ್ಯ, “ಅದು ನಿಮ್ಮ (ಬಿಜೆಪಿ) ಸಂಸ್ಕೃತಿ. ನೀವು ಅಪ್ರಸ್ತುತ ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಯಡಿಯೂರಪ್ಪ ರಾಜೀನಾಮೆ ನೀಡಿದಾಗ ಮತ್ತು ಯತ್ನಾಳ್ ಅವರನ್ನು ಹೊರಹಾಕಿದಾಗ, ನಿಮ್ಮ ಪಕ್ಷ ವಿವರಣೆ ನೀಡಿದೆಯೇ? ರಾಜಣ್ಣ ರಾಜೀನಾಮೆ ನಮ್ಮ ಪಕ್ಷದ ಆಂತರಿಕ ವಿಷಯ. ಅದರ ಬಗ್ಗೆ ವಿವರಣೆ ನೀಡುವ ಅಗತ್ಯವಿಲ್ಲ” ಎಂದರು.