ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ, ಸುಪ್ರೀಂಕೋರ್ಟ್ ಒಳಮೀಸಲಾತಿ ಆದೇಶವಾಗಿ ಒಂದು ವರ್ಷವಾದರೂ ಕೂಡ ಆರ್ಥಿಕವಾಗಿ, ಶೈಕ್ಷಣಿಕ ತುಳಿತಕೊಳ್ಳಲಾಗಿರುವ, ಸಾಮಾಜಿಕವಾಗಿ ಶೋಷಣೆಗೊಳಗಾಗಿರುವ ಅಸ್ಪೃಶ್ಯರಿಗೆ ಒಳಮೀಸಲಾತಿ ಜಾರಿಗೊಳಿಸದೇ ಇರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ದಾವಣಗೆರೆಯಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟ, ಒಳ ಮೀಸಲಾತಿಗಾಗಿ ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ದಾವಣಗೆರೆ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಕಪ್ಪು ಬಟ್ಟೆ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ದಲಿತ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ “ದೇಶಕ್ಕೆ ಸ್ವಾತಂತ್ರ್ಯ ಬಂದರೂ ಶೋಷಣೆಗೊಳಗಾಗಿರುವ ಅಸ್ಪೃಶ್ಯರಿಗೆ ಒಳ ಮೀಸಲಾತಿಯ ನಿಜವಾದ ಸ್ವಾತಂತ್ರ್ಯ ಇನ್ನು ಸಿಕ್ಕಿಲ್ಲ. ಸರ್ಕಾರ ನಮಗೆ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರವೂ ಒಳಮೀಸಲಾತಿ ಜಾರಿಗೊಳಿಸದೆ, ಅನ್ಯಾಯ, ಕಾಲಹರಣ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರವರಿಗೆ ಒತ್ತಾಯಿಸಿ
“ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಯಥಾವತ್ತಾಗಿ ಜಾರಿಗೆ ತರುವುದರ ಕುರಿತು ಸರ್ಕಾರ ವಿಶೇಷ ಸಂಪುಟ ಸಭೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸಂಪುಟ ಸಭೆಯಲ್ಲಿ ತಾವುಗಳು ಖುದ್ದಾಗಿ ಮಾತನಾಡಿ, ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿ ಯಥಾವತ್ತಾಗಿ ಜಾರಿಗೆ ತರುವುದರ ಬಗ್ಗೆ ಮಾತನಾಡಬೇಕು. ಒಂದೊಮ್ಮೆ ಒಳಮೀಸಲಾತಿ ಜಾರಿಗೆ ಕೆಲವು ಸಚಿವರು ವಿರೋಧ ಮಾಡಿದರೆ, ತಾವುಗಳು ಪ್ರಸ್ತುತ ವರದಿಯಲ್ಲಿ 5 ಗುಂಪುಗಳಿಗೆ ನೀಡಿದ ಮೀಸಲಾತಿ ಶಿಫಾರಸ್ಸಿನಲ್ಲಿ ಮಾದಿಗ ಜಾತಿ ಉಪಜಾತಿಗಳಿಗೆ ಶೇ. 6ರ ಮೀಸಲಾತಿಯನ್ನು ಪ್ರತ್ಯೇಕವಾಗಿ ಘೋಷಿಸಲೂ ಸರ್ಕಾರಕ್ಕೆ ಆಗ್ರಹಿಸಬೇಕು” ಎಂದು ಒತ್ತಾಯಿಸಿದ್ದಾರೆ.

‘ವಿನಾಕಾರಣ ವಿಳಂಬನೀತಿ ಅನುಸರಿಸುವ ತಂತ್ರದ ಹೆಸರಿನಲ್ಲಿ ಪುನಃ ಈ ವರದಿ ಅಧ್ಯಯನ ಮಾಡೋಕೆ ಮತ್ತೊಮ್ಮೆ ಕೈಹಾಕಿ ಸಂಪುಟ ಉಪಸಮಿತಿ ನೇಮಿಸಲು ಸರ್ಕಾರವು ಮುಂದಾದರೆ ಜಿಲ್ಲಾ ಉಸ್ತುವಾರಿ ಸಚಿವರು ಗಟ್ಟಿಯಾಗಿ ನ್ಯಾಯಬದ್ಧವಾಗಿ ಮಾದಿಗ ಜಾತಿ, ಉಪಜಾತಿಗಳಿಗೆ ಸಂಬಂಧಿಸಿದ ಶೇ.6ರ ಒಳಮೀಸಲಾತಿಯನ್ನು ತಮಿಳುನಾಡು ಮಾದರಿಯಂತೆ ಆದ್ಯತಾ ಮೀಸಲಾತಿ ಜಾರಿಗೆ ತರುವಂತೆ ಮಾತನಾಡಿ ಒತ್ತಾಯಿಸಬೇಕು’ ಎಂದು ತಿಳಿಸಿದರು.
ಸ್ವಾತಂತ್ರ್ಯೋತ್ಸವದ ದಿನ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ ದಲಿತ ಸಂಘಟನೆಗಳ ಒಳಮೀಸಲಾತಿ ಹೋರಾಟಗಾರರನ್ನು ಅಂಬೇಡ್ಕರ್ ವೃತ್ತದ ಸಮೀಪ ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡು ಬಂಧಿಸಿ ಕರೆದೊಯ್ದದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸ್ವಾರ್ಥ, ಉಳ್ಳವರ ಪರ ನೀತಿ; ಆಶಾ ಹೋರಾಟದಲ್ಲಿ ಎಸ್ ಯುಸಿಐ ನ ಡಾ. ಸುನಿಲ್ ಕುಮಾರ್
ಪ್ರತಿಭಟನೆಯಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟ, ಒಳಮೀಸಲಾತಿಗಾಗಿ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಆಲೂರು ನಿಂಗರಾಜ್, ಎಂ ಹಾಲೇಶ್, ರವಿಕುಮಾರ್, ರಾಜು ಶಾಮನೂರು, ಅಂಜಿನಪ್ಪ ಶಾಮನೂರು, ರಾಘವೇಂದ್ರ ಕಡೇಮನಿ, ಡಿ ಹನುಮಂತಪ್ಪ, ನಿಂಗಪ್ಪ ಚಿಕ್ಕನಹಳ್ಳಿ, ಬಸವರಾಜು ಆಲೂರು, ದುರ್ಗೇಶ್ ನಿಟ್ಟುವಳ್ಳಿ, ಕರಿಯಪ್ಪ ಅವರಗೆರೆ, ಹರೀಶ್ ಹೊನ್ನೂರು, ಜಯಣ್ಣ ರಾಮನಗರ, ಮಂಜುನಾಥ್ ಯೆರಗುಂಟೆ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.