ಕಳೆದ ಹನ್ನೊಂದು ವರ್ಷದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಆರ್‌ಎಸ್‌ಎಸ್ ಜಪ ಮಾಡಿದ್ದಾರೆ. ಆರ್‌ಎಸ್‌ಎಸ್ ಅನ್ನು ವಿಶ್ವದ ಅತಿದೊಡ್ಡ ಎನ್‌ಜಿಒ ಎಂದು ಮೋದಿ ಕರೆದಿದ್ದಾರೆ!
ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ನಡುವಿನ ಆಂತರಿಕ ಬಿಕ್ಕಟ್ಟು ಆರಂಭವಾಗಿ ವರ್ಷ ಕಳೆದಿದೆ. ಸ್ಪಷ್ಟವಾಗಿ ಹೇಳುವುದಾದರೆ ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಡುವಿನ ಭಿನ್ನಾಭಿಪ್ರಾಯ. ಎಲ್ಲಾ ವೈಮನಸ್ಸಿನ ನಡುವೆಯೇ ಕಳೆದ ಹನ್ನೊಂದು ವರ್ಷದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಆರ್‌ಎಸ್‌ಎಸ್ ಜಪ ಮಾಡಿದ್ದಾರೆ. ಆರ್‌ಎಸ್‌ಎಸ್ ಅನ್ನು ವಿಶ್ವದ ಅತಿದೊಡ್ಡ ಎನ್‌ಜಿಒ ಎಂದು ಮೋದಿ ಕರೆದಿದ್ದಾರೆ!
ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷಗಳು ಆಗುತ್ತಿರುವಾಗ ಪ್ರಧಾನಿ ಮೋದಿ ಆರ್‌ಎಸ್‌ಎಸ್ ಅನ್ನು ಶ್ಲಾಘಿಸಿದ್ದಾರೆ. ರಾಷ್ಟ್ರಕ್ಕೆ ಸಮರ್ಪಿತ ಸೇವೆ ಸಲ್ಲಿಸಿದ ಎಲ್ಲಾ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ವಂದನೆ ಸಲ್ಲಿಸಿದ್ದಾರೆ. “ಇಂದು ನಾನು ಒಂದು ವಿಷಯವನ್ನು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ. 100 ವರ್ಷಗಳ ಹಿಂದೆ ಒಂದು ಸಂಘಟನೆ ಹುಟ್ಟಿತು, ಅದುವೇ ಆರ್‌ಎಸ್‌ಎಸ್. ಸಂಘದ 100 ವರ್ಷಗಳ ಸೇವೆಯು ಅದ್ಭುತವಾದುದ್ದು” ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಭಾಗವತ್, ಆರ್‌ಎಸ್‌ಎಸ್ ಜೊತೆ ಮೋದಿ ಇರುಸು-ಮುರುಸು: ಬಿಕ್ಕಟ್ಟಿನ ನಡುವೆ ಧನಕರ್ ರಾಜೀನಾಮೆ, ನಡೆದಿರುವುದೇನು?
ಹಾಗೆಯೇ ಕಳೆದ ನೂರು ವರ್ಷಗಳಿಂದ ಆರ್‌ಎಸ್‌ಎಸ್ ಸ್ವಯಂಸೇವಕರು ಮಾತೃಭೂಮಿಯ ಕಲ್ಯಾಣಕ್ಕಾಗಿ ವ್ಯಕ್ತಿ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಸಂಕಲ್ಪವನ್ನು ಪೂರೈಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಸೇವೆ, ಸಮರ್ಪಣೆ, ಸಂಘಟನೆ ಮತ್ತು ಅಪ್ರತಿಮ ಶಿಸ್ತು ಆರ್‌ಎಸ್‌ಎಸ್‌ನ ಗುರುತು. ಒಂದು ರೀತಿಯಲ್ಲಿ ಆರ್‌ಎಸ್‌ಎಸ್ ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಸ್ಥೆ (ಎನ್‌ಜಿಒ)” ಎಂದೂ ಪ್ರಧಾನಿ ಹೇಳಿದ್ದಾರೆ.
ಹಲವು ವರ್ಷಗಳಿಂದ ಆರ್‌ಎಸ್‌ಎಸ್‌ನೊಂದಿಗೆ ವೈಮನಸ್ಸು ಕಟ್ಟಿಕೊಂಡು ಬಂದಿರುವ ಪ್ರಧಾನಿ ಮೋದಿ ತಮಗೆ 75 ವರ್ಷವಾಗುತ್ತಿರುವಾಗಲೇ ಆರ್‌ಎಸ್‌ಎಸ್ ಓಲೈಕೆಗೆ ಇಳಿದಿದ್ದಾರೆಯೇ? ಆರ್‌ಎಸ್‌ಎಸ್ ಮತ್ತು ಬಿಜೆಪಿಯಲ್ಲಿ 75 ವರ್ಷ ದಾಟಿದವರು ರಾಜಕೀಯದಿಂದ ನಿವೃತ್ತಿ ಪಡೆಯುವಂತೆ ಮಾಡಿದ್ದು, ಹಿರಿಯರನ್ನು ಮೂಲೆಗುಂಪು ಮಾಡಿದ್ದು ಮೋದಿ. ಎಲ್ ಕೆ ಅಡ್ವಾನಿ, ಜಸ್ವಂತ್ ಸಿಂಗ್, ಮುರಳಿ ಮನೋಹರ್ ಜೋಶಿ ಮೊದಲಾದವರಿಗೆ 75 ವರ್ಷ ದಾಟುತ್ತಿದ್ದಂತೆ ನಿವೃತ್ತಿಯ ಒತ್ತಡ ಹೇರಿದ ಪ್ರಧಾನಿ ಮೋದಿ ಈಗ ತಮಗೆ 75 ವರ್ಷವಾಗುತ್ತಿದ್ದಂತೆ ಇಕ್ಕಟ್ಟಿನಲ್ಲಿ ಸಿಲುಕಿರುವಂತಿದೆ.
ಈಗಾಗಲೇ ಬಿಜೆಪಿಯಲ್ಲಿ ನಿವೃತ್ತಿ ವಯಸ್ಸು 75 ಎಂದು ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಆಗಾಗ ಹೇಳುತ್ತಿದ್ದಾರೆ. ಇದು ಮಾತ್ರವಲ್ಲದೆ ಆರ್‌ಎಸ್‌ಎಸ್‌ಗೆ ವಿರುದ್ಧವಾದ ನಿರ್ಧಾರಗಳನ್ನು ಕೈಗೊಳ್ಳುವ, ಆರ್‌ಎಸ್‌ಎಸ್ ಅನ್ನು ಕಡೆಗಣಿಸುವ ವಿಚಾರದಲ್ಲಿ ಪ್ರಧಾನಿ ಮೋದಿ ಮತ್ತು ಆರ್‌ಎಸ್‌ಎಸ್ ನಾಯಕರುಗಳ ನಡುವೆ ವೈಮನಸ್ಸಿದೆ. ಇದೇ ಕಾರಣದಿಂದಾಗಿ ಆರ್‌ಎಸ್‌ಎಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಪ್ರಚಾರ ನಡೆಸಿಲ್ಲ. ಇದೀಗ ತಾನೂ 75 ವರ್ಷ ಸಮೀಪಿಸುತ್ತಿರುವಂತೆಯೇ ಪ್ರಧಾನಿ ಮೋದಿ ಆರ್‌ಎಸ್‌ಎಸ್ ಜಪಕ್ಕೆ ಇಳಿದಿರುವಂತಿದೆ.
