ಜೈಲು ಬಂಧಿಗಳ ಮನಃ ಪರಿವರ್ತನೆಗಾಗಿ ರಂಗಾಯಣ ಉತ್ತಮ ನಾಟಕವನ್ನು ಆಯ್ಕೆ ಮಾಡಿ ಕಲಿಸಿದೆ. ಇಲ್ಲಿನ ಪಾತ್ರಧಾರಿಗಳು ತಮ್ಮ ನಿಜ ಜೀವನದಲ್ಲಿ ಈ ʼತಲೆದಂಡʼ ನಾಟಕದ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಧಾರವಾಡ ಕೇಂದ್ರ ಕಾರಾಗೃದಲ್ಲಿ ಜೈಲು ಬಂಧಿಗಳೆ ಅಭಿನಯಿಸಿದ್ದ ʼತಲೆದಂಡʼ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ, ವೀಕ್ಷಿಸಿ ಮಾತನಾಡಿದ ಅವರು, “ಮನಸ್ಸು ಮತ್ತು ದೇಹದ ಚಲನೆಯಲ್ಲಿ ಏಕತೆ, ಸಾಮ್ಯತೆ ಇದ್ದಾಗ ಮಾತ್ರ ತಪ್ಪಿನ ಅರಿವಿನಿಂದ ಮನಪರಿವರ್ತನೆ ಆಗಲು ಸಾಧ್ಯವಾಗುತ್ತದೆ. ಬಂಧಿಗಳ ಮನಪರಿವರ್ತನೆಗಾಗಿ ಜೈಲು ನಿಯಮಾವಳಿಗಳ ಪ್ರಕಾರ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಬಂಧಿಗಳಿಗೆ ತಮ್ಮ ತಪ್ಪಿನ ಅರಿವು ಮೂಡಿ, ಜೀವನದಲ್ಲಿ ತಪ್ಪುಗಳು ಮರುಕಳಿಸದಂತೆ ಅವರು ಎಚ್ಚರವಹಿಸಬೇಕು. ಬಿಡುಗಡೆಯ ನಂತರದ ಬದುಕಿಗಾಗಿ ಓದು, ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು” ಎಂದರು.
“ಈಗಾಗಲೇ ಕಾರಾಗೃಹದ ಸುಮಾರು 100 ಕ್ಕೂ ಹೆಚ್ಚು ಮಹಿಳಾ ಖೈದಿಗಳು ಹಾಗೂ ವಿಚಾರಣಾದೀನ ಖೈದಿಗಳಿಗೆ ಕಸೂತಿ, ಟೇಲರಿಂಗ್ ಸೇರಿದಂತೆ ಸ್ವ ಉದ್ಯೋಗ ಆಧಾರಿತ ತರಬೇತಿಗಳನ್ನು ನೀಡಲಾಗಿದೆ. ಬಿಡುಗಡೆ ನಂತರದ ಬದುಕು ಉತ್ತಮವಾಗಿ ಅವರು ರೂಪಿಸಿಕೊಳ್ಳಬೇಕು. ಮನ ಪರಿವರ್ತನೆಗಾಗಿ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಕಾರಾಗೃಹದಲ್ಲಿ ಉತ್ತಮ ಗ್ರಂಥಾಲಯವಿದೆ. ಅನೇಕ ಗ್ರಂಥಗಳಿವೆ. ಉಪಯೋಗಿಸಿಕೊಳ್ಳಬೇಕು. ನಮ್ಮ ಬಗ್ಗೆ ಅರಿವು ಇದ್ದಾಗ ಆಂತರಿಕ ಬಂಧನ ನಮಗೆ ಸಾಧ್ಯವಾಗುತ್ತದೆ. ಆದರೆ ಅದರ ಅರಿವು ಇಲ್ಲದಿದ್ದಾಗ ಬಾಹ್ಯ ಬಂಧನ ಆಗುತ್ತದೆ. ತಿಳಿದೊ, ತಿಳಿಯದೊ ಮಾಡಿದ ತಪ್ಪಿಗೆ ಶಿಕ್ಷೆ ಆಗುತ್ತದೆ. ಶಿಕ್ಷಾ ಅವಧಿಯಲ್ಲಿ ನಮ್ಮ ಬಗ್ಗೆ ನಾವು ಚಿಂತನೆ ಮಾಡಿಕೊಳ್ಳಬೇಕು. ತಪ್ಪಿನ ಅರಿವಾಗಿ, ಸುಧಾರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಲೆದಂಡ ನಾಟಕ ಅನೇಕ ನೀತಿ ಪಾಠಗಳನ್ನು ಕಲಿಸುತ್ತದೆ” ಎಂದು ತಿಳಿಸಿದರು.

“ತಲೆದಂಡ ನಾಟಕದಲ್ಲಿ ಪಾತ್ರದಾರಿಗಳಾಗಿರುವ 20 ಕ್ಕೂ ಹೆಚ್ಚು ಖೈದಿಗಳು ಅದ್ಭುತವಾಗಿ ನಟನೆ ಮಾಡಿದ್ದಾರೆ. ಪಾತ್ರಗಳಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ನಾಟಕ ಪ್ರಯೋಗದಿಂದ ಪಾತ್ರಧಾರಿಗಳಲ್ಲಿ ಮತ್ತು ಪ್ರೇಕ್ಷಕರಲ್ಲಿ ಸಾಕಷ್ಟು ಬದಲಾವಣೆ ಸಾಧ್ಯವಿದೆ” ಎಂದರು.
ಇದನ್ನೂ ಓದಿ: ಧಾರವಾಡ | 2ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಪ್ರೊ.ವೀರಣ್ಣ ರಾಜೂರ, ಕಲಾ ತರಬೇತಿ ಶಿಬಿರದ ಸಮಾರೋಪ ನುಡಿಗಳನ್ನಾಡಿದರು. ಸಾಧನಾ ಸಂಸ್ಥೆಯ ಸಂಸ್ಥಾಪಕಿ ಇಸಾಬೆಲಾ ಝೇವಿಯರ್ ತಲೆದಂಡ ನಾಟಕ ಸಿದ್ದತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಮಾತನಾಡಿ, “ಕಾರಾಗೃಹ ಬಂಧಿಗಳಿಗೆ ರಂಗ ತರಬೇತಿ ಶಿಬಿರ ಆಯೋಜಿಸಿರುವುದು ಧಾರವಾಡ ರಂಗಾಯಣದ ಹೊಸ ಪ್ರಯೋಗ. ರಂಗಭೂಮಿಯ ಕಲೆ, ನಟನೆಗಳು ಮನ ಪರಿವರ್ತನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತವೆ. ಇದು ಪರಿಣಾಮಕಾರಿಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ, ಪ್ರಿಜನ್ ಮಿನಿಸ್ಟರಿ ಸದಸ್ಯೆ ಸ್ಯಾಲಿ ಡಿಸೋಜಾ, ಸಹಾಯಕ ಜೈಲು ಅಧೀಕ್ಷಕಿ ಬಿ.ಆರ್. ನಿರ್ಮಾಲ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಶಿಕ್ಷಕ ಪಿ.ಬಿ.ಕುರಬೇಟ್, ವೈಶಾಲಿ ನಾಯಕ್ ಸೇರಿದಂತೆ ಹಲವರು ಇದ್ದರು.