ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೆ ಬದಲಾಯಿಸುತ್ತಿದ್ದು, ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳಿಗೆ ಈ ವರೆಗೆ 96,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್‌ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 2023ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದೆವು. ಶಕ್ತಿ ಯೋಜನೆಯಲ್ಲಿ 500 ಕೋಟಿ ಟ್ರಿಪ್ಪುಗಳ ಮೂಲಕ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದನ್ನು ಇತ್ತೀಚೆಗೆ ಆಚರಣೆ ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನರಿಗೆ ತಲುಪುವ ಈ ಯೋಜನೆಗಳು ರಾಜ್ಯದ ಜನರ ತಲಾದಾಯವನ್ನು ಹೆಚ್ಚಿಸುತ್ತಿರುವುದಲ್ಲದೆ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಶೇ.23 ರಷ್ಟು ಹೆಚ್ಚಿಸಿವೆ ಎಂದು ಹಲವು ಅಧ್ಯಯನಗಳು ಹೇಳುತ್ತಿವೆ. ನಾವು ಶಕ್ತಿ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ಸಾರಿಗೆ ಇಲಾಖೆಗೆ ವಿವಿಧ ಮಾದರಿಯ ವಾಹನಗಳು ಸೇರಿದಂತೆ ಒಟ್ಟು 5,049 ಹೊಸ ಬಸ್ಸುಗಳ ಖರೀದಿ ಮತ್ತು 8,473 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಕರ್ನಾಟಕವು ಈಗ ತಲಾದಾಯದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ.101 ರಷ್ಟು ಪ್ರಗತಿಯನ್ನು ಸಾಧಿಸಿದ ರಾಜ್ಯ ನಮ್ಮ ಕರ್ನಾಟಕವಾಗಿದೆ. 2013-14 ರಲ್ಲಿ ಸ್ಥಿರ ದರಗಳಲ್ಲಿ 1,01,858 ರೂಪಾಯಿಗಳಷ್ಟಿದ್ದ ತಲಾದಾಯವು 2024-25 ರ ವೇಳೆಗೆ 2,04,605 ರೂಪಾಯಿಗಳಿಗೆ ತಲುಪಿದೆ. ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಸಹಾಯಧನ, ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ, ಸಾಮಾಜಿಕ ಯೋಜನೆಗಳಿಗಾಗಿ ವಿನಿಯೋಗಿಸುತ್ತಿರುವ ಪಿಂಚಣಿ ಮುಂತಾದವುಗಳಿಗಾಗಿ 1.12 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಜನ ಕಲ್ಯಾಣಕ್ಕಾಗಿ ಖರ್ಚು ಮಾಡುತ್ತಿದೆ ಎಂದು ಸಿಎಂ ಹೇಳಿದರು.
ದೇಶದ ಪ್ರಮುಖ ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ ಶೇ.10ರಷ್ಟಿರುವ ಶ್ರೀಮಂತರ ಬಳಿ ಶೇ.80ರಷ್ಟು ಸಂಪತ್ತು ಶೇಖರಣೆಯಾಗಿದೆ. ಆದರೆ ಶೇ. 10 ಜನ ಕೇವಲ ಶೇ.3ರಷ್ಟು ಮಾತ್ರ ಜಿಎಸ್ಟಿ ಪಾವತಿಸುತ್ತಿದ್ದರೆಂದು ಅಧ್ಯಯನಗಳು ಹೇಳುತ್ತಿವೆ. ಉಳಿದ ಶೇ.90ರಷ್ಟು ಜನ ಹೊಟ್ಟೆ-ಬಟ್ಟೆಗೆ ದುಡಿಯುವವರಾದ್ದರಿಂದ ಶೇ.97 ರಷ್ಟು ಜಿಎಸ್ಟಿ ಪಾವತಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರೆಯಲು ಸಾಧ್ಯ? ಸಂವಿಧಾನದ ಆಶಯಗಳನ್ನು ಈಡೇರಿಸುವುದು ಹೇಗೆ? ಬೃಹದಾಕಾರವಾಗಿ ಬೆಳೆಯುತ್ತಿರುವ ಅಸಮಾನತೆಯನ್ನು ತಗ್ಗಿಸುವುದು ಹೇಗೆ? ಎಂಬ ಪ್ರಶ್ನೆಗಳು ನಮ್ಮನ್ನು ಬಾಧಿಸಲಾರಂಭಿಸಿದವು. ಈ ಬೃಹತ್ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳು ಹಾಗೂ ಇನ್ನಿತರೆ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ
ಬಲಾಢ್ಯರು ಮಾತ್ರ ಬದುಕಬೇಕು ಉಳಿದವರು ಗುಲಾಮರಾಗಿ ಬಲಾಢ್ಯರಿಗಾಗಿ ದುಡಿಯಬೇಕು ಎನ್ನುವ ಮನುವಾದಿ ಸಿದ್ಧಾಂತ. ಈ ಮೃಗೀಯ ಸಿದ್ಧಾಂತಕ್ಕೆ ಎದುರಾಗಿ ಅಸಹಾಯಕರಿಗೆ ಮೊದಲು ಆದ್ಯತೆ ಸಿಗಬೇಕು ಎನ್ನುವುದು ನಮ್ಮ ಸಂವಿಧಾನವಾದ. ಆದ್ದರಿಂದ ನಾವು ಸಂವಿಧಾನದ ಉಳಿವಿಗಾಗಿ ಪಣ ತೊಡೋಣ. ಬ್ರಿಟೀಷ್ ಸಾಮ್ರಾಜ್ಯಶಾಹಿ ಆಳ್ವಿಕೆಯನ್ನು ಕಿತ್ತೆಸೆದು ಧೈರ್ಯ, ತ್ಯಾಗ, ಸ್ವರಾಜ್ಯದ ಸಂಕೇತ ಮತ್ತು ಸಮಸ್ತ ಶಕ್ತಿಯಾದ ತ್ರಿವರ್ಣ ಧ್ವಜವನ್ನು ಸಂಭ್ರಮದಿಂದ ಹಾರಿಸಲಾಯಿತು. ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ನಡೆದ ದೀರ್ಘಕಾಲದ ಹೋರಾಟದಲ್ಲಿ ಭಾಗವಹಿಸಿದ್ದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭ ಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದ ಎಲ್ಲ ಅಮರ ವೀರರನ್ನು ಸ್ಮರಿಸೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನುಡಿದಂತೆ ನಡೆಯಬೇಕು ಎಂಬುದು 12ನೇ ಶತಮಾನದ ಬಸವಾದಿ ಶರಣರ ನಿಶ್ಚಲ ನಿಲುವು. ನಮ್ಮ ಸರ್ಕಾರ ಈ ಧ್ಯೇಯ ವಾಕ್ಯದಲ್ಲಿ ನಂಬಿಕೆಯಿಟ್ಟು ರಾಜ್ಯವು ತನ್ನದೇ ಆದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಇದಕ್ಕೆ ‘ಕರ್ನಾಟಕ ಅಭಿವೃದ್ಧಿ ಮಾದರಿ’ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ. ವಿಶ್ವಸಂಸ್ಥೆಯ ಮುಖ್ಯಸ್ಥರಾದ ಫಿಲೆಮಾನ್ ಯಾಂಗ್ರ ಅವರು ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ ನಮ್ಮ ಯೋಜನೆಗಳು ವಿಶ್ವಮಾನ್ಯಗೊಂಡಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೋಂಡಿಯಾ ವಾಘ, ಹಲಗಲಿಯ ವೀರ ಬೇಡರು, ಮೈಲಾರ ಮಹಾದೇವಪ್ಪ, ಬೂದಿ ಬಸಪ್ಪ ನಾಯಕ ಮುಂತಾದವರು ಹಾಗೂ ಶ್ರೀರಂಗಪಟ್ಟಣ, ಸುರಪುರ, ಕಿತ್ತೂರು, ಈಸೂರು, ವಿಧುರಾಶ್ವತ್ಥ, ಶಿವಪುರ, ಅಂಕೋಲ ಮುಂತಾದ ಸ್ಥಳಗಳು ಬ್ರಿಟೀಷರನ್ನು ನಡುಗಿಸಿದ್ದವು. ಲಕ್ಷಾಂತರ ಜನರು ಸಕ್ರಿಯವಾಗಿ ಭಾಗವಹಿಸಿದ್ದರಲ್ಲದೆ ಸಾವಿರಾರು ಜನರು ಜೀವ ತ್ಯಾಗ ಮಾಡಿದ್ದಾರೆ. ಅವರೆಲ್ಲರನ್ನೂ ಗೌರವಿಸೋಣ ಎಂದು ಸಿಎಂ ತಿಳಿಸಿದ್ದಾರೆ.
ಸ್ವಾತಂತ್ರ್ಯಾನಂತರ ದೇಶದ ರಕ್ಷಣೆಗಾಗಿ ನಡೆದ ಯುದ್ಧಗಳಲ್ಲಿ, ಸಂಘರ್ಷಗಳಲ್ಲಿ ಅಸಂಖ್ಯಾತ ಸೈನಿಕರು ಹುತಾತ್ಮರಾಗಿದ್ದಾರೆ. ಪ್ರಧಾನ ಮಂತ್ರಿಗಳಾಗಿದ್ದವರು ಸಹ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ದೇಶದ ಆರ್ಥಿಕತೆಯನ್ನು ಕಟ್ಟಿ ಬೆಳೆಸುವ ಕೈಂಕರ್ಯದಲ್ಲಿ ಅಸಂಖ್ಯಾತ ಕಾರ್ಮಿಕರು, ರೈತರು, ವಿದ್ವಾಂಸರು, ವಿಜ್ಞಾನಿಗಳು, ಶಿಕ್ಷಕರು, ಹೋರಾಟಗಾರರೂ ಸೇರಿದಂತೆ ಸಮಸ್ತ ಉತ್ಪಾದಕ ವರ್ಗಗಳ ಜನರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರೆಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕಾಗಿದೆ ಎಂದರು.
ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮಡಿದವರು ಹಾಗೂ ಆ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಎಲ್ಲರನ್ನೂ ದೇಶವು ನೆನಪಿಡುತ್ತದೆ. ನಮ್ಮ ಹೆಮ್ಮೆಯ ನವಭಾರತದ ನಿರ್ಮಾಣದಲ್ಲಿ ತ್ಯಾಗ ಬಲಿದಾನಗಳನ್ನು ಮಾಡಿದ ಮಹಾನ್ ವ್ಯಕ್ತಿಗಳ ಮಾತುಗಳನ್ನು ನೆನಪಿಸಿಕೊಳ್ಳುವುದು ಈ ಸಂದರ್ಭದಲ್ಲಿ ಔಚಿತ್ಯಪೂರ್ಣ ಎನ್ನಿಸಿದೆ. ಪಂಡಿತ್ ಜವಾಹರ್‌ಲಾಲ್ ನೆಹರೂ ಅವರ ಪ್ರಕಾರ “ದೇಶ ಸೇವೆ ಎಂದರೆ ಸಂಕಷ್ಟದಲ್ಲಿರುವ ಕೋಟ್ಯಂತರ ಜನರ ಸೇವೆ. ಬಡತನ, ಅಜ್ಞಾನ, ರೋಗ ರುಜಿನಗಳಲ್ಲಿ ನರಳುವವರ ಬದುಕನ್ನು ಹಸನು ಮಾಡುವುದು”ಎಂದಿದ್ದಾರೆ.