ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರವನ್ನು ಮಾರಾಟ ಮಾಡುವ ಹಾಗೂ ರಸಗೊಬ್ಬರವನ್ನು ದುರುಪಯೋಗಪಡಿಸಿಕೊಳ್ಳುವ ಅಂಗಡಿಗಳು, ಏಜೆನ್ಸಿ ಹಾಗೂ ಸಹಕಾರ ಸಂಘಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವಂತಿಲ್ಲ. ಜೊತೆಗೆ ರಸಗೊಬ್ಬರ ಮಾರಾಟ ಮಾಡುವ ಏಜೆನ್ಸಿಗಳು ಹಾಗೂ ಅಂಗಡಿಗಳಲ್ಲಿ ದಾಸ್ತಾನು ಮತ್ತು ದರವನ್ನು ಪ್ರದರ್ಶನ ಮಾಡಬೇಕು ಎಂಬ ನಿಯಮವಿದ್ದು, ರಸಗೊಬ್ಬರ ವಿತರಣೆ ಮಾಡುವ ಅಂಗಡಿಗಳು, ಏಜೆನ್ಸಿಗಳು ಮತ್ತು ಸಹಕಾರ ಸಂಘಗಳು ಅಕ್ರಮದಲ್ಲಿ ತೊಡಗಿದರೆ ಅಂಗಡಿಗಳ ಪರವಾನಿಗೆ ರದ್ದುಪಡಿಸಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಇಷ್ಟು ವರ್ಷಗಳಲ್ಲಿ ಕಾಣದ ರಸಗೊಬ್ಬರದ ಕೊರತೆಗೆ ಕೇಂದ್ರ ಸರ್ಕಾರ ನಿರ್ವಹಣೆ ಮಾಡದಿರುವುದೇ ನೇರ ಕಾರಣವಾಗಿದ್ದು, ರಸಗೊಬ್ಬರ ಕೊಡುವುದು ಕೇಂದ್ರದ ಹೊಣೆಗಾರಿಕೆಯಾಗಿದೆ. ರಸಗೊಬ್ಬರ ಬೇಡಿಕೆಯನ್ನು ಮೊದಲೇ ಕೇಂದ್ರಕ್ಕೆ ತಿಳಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರದ ದರ ಹೆಚ್ಚಾಗಿರುವ ಕಾರಣ, ರೈತರಿಗೆ ಸಬ್ಸಿಡಿ ಮೂಲಕ ರಸಗೊಬ್ಬರ ವಿತರಣೆ ಮಾಡುವುದರಿಂದ ಕೇಂದ್ರ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳುತ್ತಿರುವ ಕಾರಣ ತಿಳಿಸಿ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಬೇಜವಾಬ್ದಾರಿ ತೋರುತ್ತಿದ್ದರೂ, ರಾಜ್ಯ ಸರ್ಕಾರ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ರಸಗೊಬ್ಬರದ ಕೊರತೆಯನ್ನು ಸರಿದೂಗಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಜಿಲೆಯಲ್ಲಿ ಅನೈತಿಕ, ಕಾನೂನುಬಾಹೀರ ಚಟುವಟಕೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಪ್ರಮುಖವಾಗಿ ಮಟ್ಕಾ, ಗಾಂಜಾ, ಗ್ಯಾಬ್ಲಿಂಗ್, ಅಕ್ರಮ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದು, ಜಿಲ್ಲೆಗೆ ಬರುತ್ತಿರುವ ಅಕ್ರಮ ಸೇಂದಿ ಮತ್ತು ಸಿಎಚ್‌ಪೌಡರ್ ಮೇಲೆ ನಿಗಾ ವಹಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದು ಹೇಳಿದರು.
ಕೋಟೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನಾ ಪತ್ರವನ್ನು ಸಿದ್ಧಪಡಿಸಿ ಪ್ರವಾಸೋದ್ಯಮ ಸಚಿವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. ರಾಜ್ಯ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡಬೇಕೆಂಬುವುದು ರಾಜ್ಯ ಸರ್ಕಾರದ ನಿಲುವು ಆಗಿದ್ದು, ಪ್ರಣಾಳಿಕೆಯಲ್ಲೂ ಕೂಡ ನಾವು ಹೇಳಿದ್ದೇವೆ. ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಯಾಗಬೇಕೆಂದು ಮುಖ್ಯಮಂತ್ರಿಗಳೂ ಹಲವು ಬಾರಿ ಪ್ರಧಾನಿ ಮತ್ತು ಕೇಂದ್ರ ಸಚಿವರಿಗೆ ಶಿಫಾರಸ್ಸು, ಮನವಿಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ಪಕ್ಷಾತೀತವಾಗಿ ಕೇಂದ್ರ ಸಚಿವರಲ್ಲಿ ನಿಯೋಗ ತೆರಳಲಾಗಿದೆ. ಇಡೀ ದೇಶದಲ್ಲಿ ಎರಡೇ ಎರಡು ರಾಜ್ಯಗಳಿಗೆ ಏಮ್ಸ್ ನೀಡಿಲ್ಲ. ಆದಕ್ಕೆ ಕಾರಣವನ್ನು ಕೇಂದ್ರ ಸರ್ಕಾರವೇ ನೀಡಬೇಕು ಎಂದು ಪ್ರಶ್ನಿಸಿದರು? ಏಮ್ಸ್ ರಾಯಚೂರಿನಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ನಿರ್ಧಾರದ ಅಗತ್ಯತೆಯಿಲ್ಲ. ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಲಾ ಮಕ್ಕಳಿಗೆ ಹಳೆ ವಿದ್ಯಾರ್ಥಿಗಳಿಂದ ಸಮವಸ್ತ್ರ ವಿತರಣೆ
ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ, ಜಿಲ್ಲಾಧಿಕಾರಿ ಕೆ.ನಿತೀಶ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ, ಸೇರಿದಂತೆ ಅನೇಕರಿದ್ದರು.
