- ಸುದರ್ಶನ ಟಿವಿಯ ಸುದ್ದಿ ಸಂಪಾದಕ ಮುಖೇಶ್ ಕುಮಾರ್ ಬಂಧನ, ಬಿಡುಗಡೆ
- ‘ಹಿಂದೂಗಳನ್ನು ಬಂಧಿಸಲು ಪೊಲೀಸರ ಮೇಲೆ ಅಲ್ ಜಝೀರಾ ವಾಹಿನಿ ಒತ್ತಡ ಹಾಕಿದ್ದರು’ ಎಂದು ಟ್ವೀಟ್
ಹರ್ಯಾಣದ ನೂಹ್ನಲ್ಲಿ ಸಂಭವಿಸಿದ ಕೋಮು ಗಲಭೆಯ ವೇಳೆ ಪೊಲೀಸರ ವಿರುದ್ಧವೇ ಸುಳ್ಳು ಸುದ್ದಿ ಹರಡಿದ್ದ ಆರೋಪದ ಮೇಲೆ ಸುದರ್ಶನ್ ಟಿವಿಯ ಸುದ್ದಿ ಸಂಪಾದಕ ಮುಖೇಶ್ ಕುಮಾರ್ನನ್ನು ಬಂಧಿಸಲಾಗಿದ್ದು, ಬಳಿಕ ಬಿಡುಗಡೆಗೊಳಿಸಲಾಗಿದೆ.
ಬಲಪಂಥೀಯ ವಿಚಾರಧಾರೆ ಹರಡುವ ಸುದ್ದಿವಾಹಿನಿಯಾಗಿ ಸುದರ್ಶನ ಟಿವಿ ಗುರುತಿಸಿಕೊಂಡಿದೆ. ನೂಹ್ ಗಲಭೆಯ ವೇಳೆ ಟ್ವೀಟ್ ಮಾಡಿದ್ದ ವಾಹಿನಿಯ ಸುದ್ದಿ ಸಂಪಾದಕ ಮುಖೇಶ್ ಕುಮಾರ್, ‘ಅಲ್ ಜಝೀರಾ ಸುದ್ದಿ ವಾಹಿನಿಯು ಹರ್ಯಾಣ ಜಿಲ್ಲಾಧಿಕಾರಿಯ ಮೇಲೆ ಒತ್ತಡ ಹಾಕುತ್ತಿದೆ. ಅಲ್ಲದೇ, ಈ ಒತ್ತಡಕ್ಕೆ ಮಣಿದು ಗುರುಗ್ರಾಮ್ ಪೊಲೀಸರು ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ’ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಜಿಲ್ಲಾಡಳಿತದ ಮೇಲೆಯೇ ಆರೋಪ ಹೊರಿಸಿ, ಸುಳ್ಳು ಸುದ್ದಿ ಹರಡಿದ್ದಕ್ಕೆ ಮುಖೇಶ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದರು.
“ಗಲಭೆ ಹೆಚ್ಚಿಸುವ ಉದ್ದೇಶದಿಂದ ಆಧಾರರಹಿತ, ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಮಾಹಿತಿ ಹಾಕಿದ್ದಕ್ಕೆ ಮುಖೇಶ್ ವಿರುದ್ಧ ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಆ ಬಳಿಕ ಬಂಧಿಸಲಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಗುರುಗ್ರಾಮ್ ಪೊಲೀಸರು ಸ್ಪಷ್ಟಪಡಿಸಿದ್ದರು.
ಈ ನಡುವೆ ಸುದರ್ಶನ ನ್ಯೂಸ್ನ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ, ಟ್ವಿಟರ್ನಲ್ಲಿ ಸುದೀರ್ಘ ಪೋಸ್ಟ್ ಹಾಕಿ, ಮುಖೇಶ್ ಕುಮಾರ್ ಬಂಧನವನ್ನು ಪ್ರಶ್ನಿಸಿದ್ದರು. ಅಲ್ಲದೇ, ಮುಖೇಶ್ ಕುಮಾರ್ ಅವರನ್ನು ಬಿಡುಗಡೆ ಮಾಡದಿದ್ದರೆ ಶನಿವಾರ ‘ದೊಡ್ಡ ಘೋಷಣೆ’ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಜೊತೆಗೆ, ‘ನಮ್ಮೊಂದಿಗೆ ಯಾವ ಹಿಂದೂ ಪುರುಷರು ಇದ್ದಾರೆ ಎಂದು ನೋಡೋಣ’ ಎಂದು ಬರೆದಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆ ಅವರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ ಎಂದು ಸುರೇಶ್ ಚವ್ಹಾಂಕೆ ಅವರೇ ಟ್ವೀಟ್ ಮಾಡಿ, ಮಾಹಿತಿ ಪ್ರಕಟಿಸಿದ್ದಾರೆ. ಆದರೆ ಪೊಲೀಸರು ಇದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.