ಮಲಯಾಳಂ ನಟ ಬಿಜು ಕುಟ್ಟನ್ ಅವರು ಇಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ಕನ್ನಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಬಿಜು ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(AMMA)ದ ಚುನಾವಣೆಯಲ್ಲಿ ಮತದಾನ ಮಾಡಲು ಕೊಚ್ಚಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಉಂಟಾಗಿದೆ.
ಅತೀ ವೇಗವಾಗಿ ಚಲಿಸುತ್ತಿದ್ದ ಬಿಜು ಅವರ ಕಾರು ನಿಯಂತ್ರಣ ತಪ್ಪಿ, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ನಟ ಬಿಜು ಕುಟ್ಟನ್ ಮತ್ತು ಕಾರಿನ ಚಾಲಕ ಗಾಯಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರಿನಲ್ಲಿದ್ದ ನಟ ವಿಷ್ಣುವರ್ಧನ್ ಸ್ಮಾರಕ ನೆಲಸಮ
ನಟ ಬಿಜು ಕುಟ್ಟನ್(49ವರ್ಷ) ಅವರ ಕೈಗೆ ಗಾಯವಾಗಿದ್ದು, ಚಾಲಕನ ಸ್ಥಿತಿ ಗಂಭೀರವಾಗಿರುವುದಾಗಿ ಮೂಲಗಳು ತಿಳಿಸಿವೆ. ಘಟನೆಯ ನಂತರ ಪಾಲಕ್ಕಾಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಬಿಜು ಕುಟ್ಟನ್ ಎರ್ನಾಕುಲಂಗೆ ವಾಪಸ್ ಆಗಿರುವುದಾಗಿ ವರದಿ ತಿಳಿಸಿದೆ.
ಬಿಜು ಕುಟ್ಟನ್ ಮಲಯಾಳಂನ ಜನಪ್ರಿಯ ಹಾಸ್ಯ ನಟರಾಗಿದ್ದು, ಈವರೆಗೆ ಅವರು ಸುಮಾರು 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.