ರವೀಂದ್ರ ನಾಥ ಠಾಗೂರ್ ಕಡಲತೀರದಲ್ಲಿರುವ ಟುಪಲೋವ್ ಯುದ್ದ ವಿಮಾನ ವಸ್ತು ಸಂಗ್ರಾಲಯವು ಜಿಲ್ಲೆಯ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಲಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯಲಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸ್ಥಾಪಿಸಲಾದ ವಿಶ್ರಾಂತ ಯುದ್ಧ ವಿಮಾನ ಟುಪಲೋವ್ ನ್ನು ಸಾರ್ವಜನಿಕ ವೀಕ್ಷಣೆಗೆ ಅವಕಾಶ ನಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಟುಪಲೋವ್ ಯುದ್ಧ ವಿಮಾನವು ದೇಶದ ರಕ್ಷಣಾ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದು, ಈ ಯುದ್ದ ವಿಮಾನದ ಕಾರ್ಯಕ್ಷಮತೆ, ಇದು ರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರು ತಿಳಿದುಕೊಳ್ಳಲು ಸುವರ್ಣ ಅವಕಾಶ ಒದಗಿದೆ. ಇಂದಿನಿಂದ ಈ ಯುದ್ದ ವಿಮಾನ ವಸ್ತು ಸಂಗ್ರಾಲಯವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಯುದ್ದ ವಿಮಾನವು ಕಾರವಾರ ನಗರಕ್ಕೆ ಹೊಸ ಕಳೆಯನ್ನು ತಂದಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯವಾಗಲಿದೆ” ಎಂದರು.

“ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗೆ ಸೇರ್ಪಡೆಯಾಗ ಬಯಸುವ ಜಿಲ್ಲೆಯ ಯುವಕರಿಗೆ ಈ ಯುದ್ದ ವಿಮಾನ ವೀಕ್ಷಣೆಯು, ದೇಶಭಕ್ತಿಯ ಭಾವನೆಯನ್ನು ಮತ್ತಷ್ಟು ಉತ್ತೇಜಸಲಿದೆ, ಈ ವಿಮಾನದ ಇತಿಹಾಸದ ಬಗ್ಗೆ ತಿಳಿಸಲು ಪ್ರವಾಸಿ ಮಾರ್ಗದಶಿಯನ್ನು ನೇಮಿಸಲಾಗಿದೆ, ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಸಾರ್ವಜನಿಕರು ಇದನ್ನು ವೀಕ್ಷಿಸಬಹುದಾಗಿದೆ” ಎಂದರು.
ಇದನ್ನೂ ಓದಿ: ಉತ್ತರ ಕನ್ನಡ | ಶಾಸಕ ಸತೀಶ್ ಸೈಲ್‌ಗೆ ಇಡಿ ಶಾಕ್; ಕಾರವಾರದ ನಿವಾಸದ ಮೇಲೆ ದಾಳಿ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ನಗರ ಸಭೆ ಅಧ್ಯಕ್ಷ ರವಿರಾಜ್ ಚಂದ್ರಹಾಸ ಅಂಕೋಲೆಕರ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ದೀಲಿಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ಭಟ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ್, ಮಂಜುನಾಥ ನಾವಿ, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಝುಪಿಶಾನ್ ಹಕ್ , ಕದಂಬ ನೌಕಾನೆಲೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.