ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಅನುಕೂಲವಾಗುವಂತೆ ಬೀದರ್‌ನಲ್ಲಿ ₹36 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ತಪಾಸಣಾ ಕೇಂದ್ರ ನಿರ್ಮಾಣಕ್ಕೆ ಸರಕಾರ ಮಂಜೂರು ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
79ನೇ ಸ್ವಾತಂತ್ರ್ಯ ಧ್ವಜಾರೋಹಣ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ʼ ನಮ್ಮ ಸರಕಾರವು ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆ ಇಡೀ ದೇಶಕ್ಕೆ ಆದರ್ಶವಾಗಿದೆ. ಇದೇ ಮಾದರಿಯನ್ನು ಪ್ರತಿಪಕ್ಷಗಳು ಸಹ ಅನೇಕ ರಾಜ್ಯಗಳಲ್ಲಿ ಅಳವಡಿಸಿಕೊಂಡಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಎರಡು ವರ್ಷ ಮೂರು ತಿಂಗಳ ಅವಧಿಯಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಉತ್ತಮ ಜನಪರ ಆಡಳಿತ ನೀಡಿದ್ದೇವೆ. ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆʼ ಎಂದು ಹೇಳಿದರು.
ʼಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರತಿಪಕ್ಷದವರು ಆರೋಪಿಸಿದರು. ಆದರೆ, ರಾಜ್ಯದಲ್ಲಿ ಎಲ್ಲವೂ ಸುಭಿಕ್ಷೆ ಇವೆ. ರಾಜ್ಯದಲ್ಲಿ ತಲಾ ಆದಾಯ ಆರ್ಥಿಕತೆ ಹೆಚ್ಚಳವಾಗಿದೆ. ದೇಶದಲ್ಲಿ ತಲಾ ಆದಾಯ ಅಭಿವೃದ್ಧಿಯಲ್ಲಿ ರಾಜ್ಯ ಮುಂಚೂಣಿ ಸ್ಥಾನದಲ್ಲಿರುವ ಬಗ್ಗೆ ವರದಿಗಳು ತಿಳಿಸಿವೆʼ ಎಂದರು.
ಕಳೆದ ಏಪ್ರಿಲ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹2025 ಕೋಟಿ ರೂ.ವೆಚ್ಚದ ಯೋಜನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದರು. ಆ ಕಾಮಗಾರಿಗಳು ಬಹುತೇಕ ಚಾಲ್ತಿಯಲ್ಲಿವೆ. ನೀರಾವರಿ ಯೋಜನೆಗಳು ಆರಂಭಗೊಂಡಿವೆ. 36 ಕೆರೆಗಳನ್ನು ತುಂಬುವ ಯೋಜನೆಯ ಒಂದು ಟಿಎಂಸಿ ನೀರು ಎತ್ತುವಳಿ ಮಾಡಿ 10 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 25 ಸಾವಿರ ಎಕರೆ ಭೂಮಿಗೆ ನೀರಾವರಿ ಯೋಜನೆ ಮಾಡುವ ಕಾರ್ಯಕ್ರಮ ಈಗಾಗಲೇ ಔರಾದ್ ಹಾಗೂ ಭಾಲ್ಕಿಯಲ್ಲಿ ಆರಂಭವಾಗಿದೆ ಎಂದರು.
ಜೆಜೆಎಂಗೆ 800 ಕೋಟಿ ವೆಚ್ಚ :
ಜಲ ಜೀವನ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಈವರೆಗೆ ಶೇ 80ರಷ್ಟು ಕಾಮಗಾರಿ ಮುಗಿದಿದೆ. 830 ಜನವಸತಿ ಪ್ರದೇಶದಲ್ಲಿ ಮನೆ-ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ₹800 ಕೋಟಿ ವೆಚ್ಚದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಈ ಪೈಕಿ ₹630 ಕೋಟಿ ರೂ. ಅನುದಾನ ರಾಜ್ಯ ಸರಕಾರವು ಈಗಾಗಲೇ ಬಿಡುಗಡೆಗೊಳಿಸಿದೆ. ಇನ್ನೂ ₹200 ಕೋಟಿ ಅಗತ್ಯವಿದ್ದು, ಅದು ನೀಡಲಾಗುವುದು. ಮನೆ-ಮನೆಗೆ ಶುದ್ಧ ಕುಡಿಯುವ ನೀರು ಜೆಜೆಎಂ ಯೋಜನೆ ಕಾಮಗಾರಿ ಬರುವ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಲಾಗುವುದುʼ ಎಂದು ತಿಳಿಸಿದರು.
9 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ₹739 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಈ ಪೈಕಿ ₹150 ಕೋಟಿ ಅನುದಾನ ಖರ್ಚಾಗಿದೆ. ಜೆಜೆಎಂ ಹಾಗೂ ಬಹುಗ್ರಾಮ ಯೋಜನೆ ಎರಡು ಸೇರಿ ₹1,500 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. 5 ಗ್ಯಾರಂಟಿ ಅಡಿ ಸುಮಾರು ₹2,300 ಕೋಟಿ ಈವರೆಗೆ ಬೀದರ ಜಿಲ್ಲೆಯ ಜನರಿಗೆ ನೇರವಾಗಿ ಲಭಿಸಿದೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ ಜಿಲ್ಲಾಡಳಿತ ಸಂಕೀರ್ಣ ಕಟ್ಟಡ ಟೆಂಡರ್ ಆಗಿದೆ. ಜಾವೇದ್ ಕನ್ಸಟ್ರಕ್ಷನ್‌ಗೆ ಆದೇಶ ಆಗಿದ್ದು, ನಾಳೆ (ಆ.16) ರಂದು ಮಧ್ಯಾಹ್ನ 2.30 ಗಂಟೆಗೆ ಅನೌಪಚಾರಿಕವಾಗಿ ಪೂಜೆ ಮಾಡಲಾಗುವುದು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದುʼ ಎಂದರು.
ʼಹುಲಸೂರ, ಚಿಟಗುಪ್ಪ ಹಾಗೂ ಕಮಲನಗರ ನೂತನ ತಾಲ್ಲೂಕುಗಳಲ್ಲಿ 3 ಪ್ರಜಾಸೌಧ ಕಟ್ಟಡಗಳಿಗೆ ₹8.50 ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದೆ. ಶೀಘ್ರದಲ್ಲಿ ಗುಣಮಟ್ಟದ ಕಾಮಗಾರಿ ಪ್ರಾರಂಭಿಸಲಾಗುವುದು. ಜಿಲ್ಲೆಯ ಪ್ರಾಥಮಿಕ, ಸಮುದಾಯ ಹಾಗೂ ತಾಲ್ಲೂಕಾ ಆರೋಗ್ಯ ಕೇಂದ್ರಗಳ ಬಲವರ್ಧನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಂಡಿದೆ. ಬ್ರಿಮ್ಸ್‌ನಲ್ಲಿ ಕ್ಯಾತ್‌ಲ್ಯಾಬ್ ಆರಂಭಿಸಲು ಇಬ್ಬರು ತಜ್ಞ ವೈದ್ಯರ ಹಾಗೂ ಇತರೇ ತಾಂತ್ರಿಕ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆʼ ಎಂದರು ಸಚಿವರು ತಿಳಿಸಿದರು.
ಬೀದರ ವಿಶ್ವವಿದ್ಯಾಲಯ ಅಭಿವೃದ್ಧಿಗೆ ₹25 ಕೋಟಿ :
ʼಅರಣ್ಯ ಇಲಾಖೆಯಿಂದ 35 ಲಕ್ಷ ಸಸಿ ನೆಡಲಾಗಿದೆ. ಹೊನ್ನಿಕೇರಿ ಹತ್ತಿರ ₹15 ಕೋಟಿ ವೆಚ್ಚದ ಪರಿಸರ ಪ್ರವಾಸೋದ್ಯಮ ಕಾಮಗಾರಿಗೆ ಟೆಂಡರ್ ಆಗಿದ್ದು ಕಾಮಗಾರಿ ಆರಂಭಿಸಲಾಗಿದೆ. ಪಕ್ಷಿಧಾಮ ನಿರ್ಮಾಣಕ್ಕೆ ₹15 ಕೋಟಿ ವೆಚ್ಚದ ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ದೇವ-ದೇವ ವನ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಬೀದರ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ₹25 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿಯನ್ನು ಕ್ಯಾಬಿನೆಟ್‌ನಲ್ಲಿ ಮಂಜೂರು ಮಾಡಲಾಗಿದೆʼ ಎಂದರು.
ʼರಾಣಿ ಚೆನ್ನಮ್ಮ ವಸತಿ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ₹15 ಕೋಟಿ ವೆಚ್ಚದಲ್ಲಿ ಔರಾದ್‌ನಲ್ಲಿ ನಿರ್ಮಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯಿಂದ ಭಾಲ್ಕಿ, ಬೀದರ್ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಕ್ಯಾಬಿನೆಟ್‌ನಲ್ಲಿ ಮಂಜೂರು ಮಾಡಲಾಗಿದೆʼ ಎಂದರು ಸಚಿವರು ತಿಳಿಸಿದರು.
ಇದನ್ನೂ ಓದಿ : ಬೀದರ್ | ಬಸವಕಲ್ಯಾಣದಲ್ಲಿ ʼದಸರಾ ದರ್ಬಾರ್ʼ : ಅಡ್ಡಪಲ್ಲಕ್ಕಿ ವಿರೋಧಿಸಿ ಹಿಂದೆ ಸರಿದ ಹಾರಕೂಡ ಶ್ರೀ!
ಕಾರಂಜಾ ಜಲಾಶಯದ ಕೆಳಭಾಗದಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಕಾರಂಜಾ ಜಲಾಶಯದ ಉದ್ಯಾನವನ ತರಹ ಬೃಹತ್ ಉದ್ಯಾನವನ ನಿರ್ಮಾಣಕ್ಕೂ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಬೀದರ್‌ನಲ್ಲಿ ₹25 ಕೋಟಿ ವೆಚ್ಚದ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು 20 ಎಕರೆ ಭೂಮಿಯನ್ನು ಗುರುತಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ತಿಳಿಸಲಾಗಿದೆʼ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.