ಆಂಧ್ರ ಪ್ರದೇಶ ಸರ್ಕಾರವು ಕರ್ನಾಟಕದಲ್ಲಿರುವ ಶಕ್ತಿ ಯೋಜನೆಯಂತೆ ಮಹಿಳೆಯರಿಗಾಗಿ ಬಹುನಿರೀಕ್ಷಿತ ಉಚಿತ ಬಸ್ ಒದಗಿಸುವ ‘ಸ್ತ್ರೀ ಶಕ್ತಿ’ ಯೋಜನೆಯನ್ನು ಇಂದಿನಿಂದ (ಆ.15) ಅಧಿಕೃತವಾಗಿ ಆರಂಭಿಸಿದೆ. ಈ ಯೋಜನೆಯಡಿ, ರಾಜ್ಯದಾದ್ಯಂತ ಮಹಿಳೆಯರಿಗೆ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಸಚಿವ ನಾರಾ ಲೋಕೇಶ್ ಅವರು ಗುಂಟೂರು ಜಿಲ್ಲೆಯ ತಾಡೇಪಳ್ಳಿಯಿಂದ ವಿಜಯವಾಡದ ಪಂಡಿತ ನೆಹರು ಬಸ್ ನಿಲ್ದಾಣದವರೆಗೆ ಮಹಿಳೆಯರೊಂದಿಗೆ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು.
ಉಂಡವಲ್ಲಿ ಗುಹೆಗಳಿಂದ ಪ್ರಯಾಣ ಆರಂಭಿಸಿ, ತಾಡೇಪಳ್ಳಿ ಪ್ಯಾಲೆಸ್, ಕನಕದುರ್ಗ ವಾದ್ರಿ ಮಾರ್ಗವಾಗಿ ವಿಜಯವಾಡಕ್ಕೆ ತಲುಪಿದರು. ಈ ಸಂದರ್ಭದಲ್ಲಿ, ಮುಖ್ಯಮಂತ್ರಿಗಳು ಮತ್ತು ಇತರ ಗಣ್ಯರು ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರೊಂದಿಗೆ ಸಂವಾದ ನಡೆಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ
‘ಸ್ತ್ರೀ ಶಕ್ತಿ’ ಯೋಜನೆಯಡಿ, ರಾಜ್ಯದಾದ್ಯಂತ ಸಾಮಾನ್ಯ ಬಸ್‌ಗಳು, ಸಿಟಿ ಆರ್ಡಿನರಿ, ಅಲ್ಟ್ರಾ, ಮೆಟ್ರೊ ಎಕ್ಸ್‌ಪ್ರೆಸ್ ಮತ್ತು ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಪಡೆಯಲು ಮಹಿಳೆಯರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ತೋರಿಸಿ, ನಿರ್ವಾಹಕರಿಂದ ಶೂನ್ಯ ಶುಲ್ಕದ ಟಿಕೆಟ್ ಪಡೆಯಬಹುದು.
ಈ ಯೋಜನೆಯ ಫಲಾನುಭವಿಗಳಾಗಿ ಬಾಲಕಿಯರು, ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದು. ಈ ಯೋಜನೆಯಿಂದ ಸುಮಾರು 2.62 ಕೋಟಿ ಮಹಿಳೆಯರು ಲಾಭ ಪಡೆಯುವ ನಿರೀಕ್ಷೆಯಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ ₹1,942 ಕೋಟಿಗಳ ಹೆಚ್ಚುವರಿ ಆರ್ಥಿಕ ಭಾರ ಬೀಳಲಿದೆ.
ಈ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸಾರಿಗೆ ಸೌಲಭ್ಯವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಂಚರಿಸುವ ಮಹಿಳೆಯರಿಗೆ ಈ ಉಚಿತ ಸೇವೆಯು ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಮೂಲಕ ಅವರ ದೈನಂದಿನ ಜೀವನವನ್ನು ಸುಲಭಗೊಳಿಸಲಿದೆ.
