ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು ಮತ್ತು ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ಧ್ವಜವನ್ನು ಹಾರಿಸುವುದು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದು ಮತ್ತು ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳುವ ದಿನವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಹೇಳಿದರು.
ಧಾರವಾಡ ಜಿಲ್ಲಾಡಳಿತವು ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೆರಿಸಿ, ಸಂದೇಶ ನೀಡುತ್ತಾ ಅವರು ಮಾತನಾಡಿದರು.
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಮಹನೀಯರ ನೆನಪಿನಲ್ಲಿ ಮತ್ತು ಅವರುಗಳಿಗೆ ಗೌರವ ಸಲ್ಲಿಸುವುದಕ್ಕಾಗಿ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಏಕತೆ, ಸತ್ಯಾಗ್ರಹ, ಅಹಿಂಸೆ ಹಾಗೂ ಶಾಂತಿ ಮಾರ್ಗವನ್ನು ಅನುಸರಿಸಿ ಸ್ವಾತಂತ್ರ್ಯ ಗಳಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಭಾರತದ ಸ್ವಾತಂತ್ರ್ಯದ ಚಳವಳಿಯನ್ನು ರೂಪಿಸಿದ ನಮ್ಮ ಹಿರಿಯ ಹೋರಾಟಗಾರರಾದ ರಾಜಾರಾಮ್ ಮೋಹನ್ ರಾಯ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ದಾದಾಬಾಯಿ ನವರೋಜಿ, ಬಾಲ ಗಂಗಾಧರ ತಿಲಕ್, ಗೋಖಲೆ, ಲಾಲಾ ಲಜಪತರಾಯ್, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ನೇತಾಜಿ ಸುಭಾಷ್ಚಂದ್ರ ಬೋಸ್, ಭಗತ್ಸಿಂಗ್, ಮೌಲಾನಾ ಅಬುಲ್ ಕಲಾಂ ಆಜಾದ್ ಮೊದಲಾದ ಮಹನೀಯರುಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಧಾರವಾಡ ಜಿಲ್ಲೆಯ ಮೈಲಾರ ಮಹದೇವಪ್ಪ, ಆರ್.ಆರ್.ದಿವಾಕರ್, ಉಮಾಬಾಯಿ ಕುಂದಾಪುರ, ಎನ್. ಎಸ್. ಹರಡೀಕರ್, ಕೆ.ಎಫ್. ಪಾಟೀಲ, ಗೋವಿಂದಾಚಾರ್ಯ ಅಗ್ನಿಹೋತ್ರಿ, ನರಸಿಂಹ ದಾಬಡೆ, ಡೆಪ್ಯೂಟಿ ಚನ್ನಬಸಪ್ಪ, ಸರ್. ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು ಸೇರಿದಂತೆ ಮೊದಲಾದ ನೇತಾರರು ಸ್ವಾತಂತ್ರ್ಯ ಹೋರಾಟದಲ್ಲಿ ಕೈ ಜೋಡಿಸಿದ್ದರು. ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿರುವ ರಾಷ್ಟ್ರಧ್ವಜವನ್ನು ಧಾರವಾಡದ ಗರಗ ಹಾಗೂ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸಿದ್ಧಪಡಿಸಿ, ಇಡೀ ದೇಶಕ್ಕೆ ಒದಗಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವ ಸಂತೋಷ ಲಾಡ್ ಹೆಮ್ಮೆ ವ್ಯಕ್ತಪಡಿಸಿದರು.
ಈ ಸ್ವಾತಂತ್ರ್ಯ ದಿನದಂದು ಮಹಾತ್ಮ ಗಾಂಧೀಜಿಯವರ “ಮನುಷ್ಯರಾಗಿ ನಮ್ಮ ದೊಡ್ಡ ಸಾಮರ್ಥ್ಯವೆಂದರೆ, ಜಗತ್ತನ್ನು ಬದಲಾಯಿಸುವುದು ಅಲ್ಲ, ಬದಲಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು” ಎಂಬ ಮಾತುಗಳನ್ನು ಪಾಲಿಸೋಣ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಪೂರ್ವ ಪೀಠಿಕೆಯು ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಒಳಗೊಂಡಿದೆ. ಉತ್ತಮ ನಾಗರಿಕರಾಗಲು, ಕಷ್ಟಪಟ್ಟು ಕೆಲಸ ಮಾಡಲು ಮತ್ತು ನಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡಲು ನಾವು ಪಣ ತೊಡೋಣ ಹಾಗೂ ಬಲಿಷ್ಠ ಭಾರತದ ಕನಸನ್ನು ಜೀವಂತವಾಗಿರಿಸೋಣ ಎಂದು ಸಚಿವರು ಸಂಕಲ್ಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ತಾವು ಮಂಡಿಸಿರುವ ಈ ಸಾಲಿನ ಬಜೆಟ್ ಮುಖಾಂತರ ನಾಡಿನ ಜನತೆಗೆ ತಿಳಿಸಿ, ಅವರ ಪ್ರೀತಿ ಗಳಿಸಿರುತ್ತಾರೆ. ರೈತರು, ಕಾರ್ಮಿಕರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಬಡ ಜನತೆಗೆ ಭದ್ರತೆಯನ್ನು ಒದಗಿಸಲು ಸರ್ಕಾರ ಸದಾ ಬದ್ಧವಾಗಿದೆ. ಒಟ್ಟಾರೆ ನಮ್ಮ ಸರ್ಕಾರದ ಮೂಲ ಉದ್ದೇಶ ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದಾಗಿದೆ. ಸರ್ಕಾರ ರೂಪಿಸುವ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಎಲ್ಲರ ಸಹಕಾರ ಮತ್ತು ಬದ್ಧತೆ ಅಗತ್ಯವಾಗಿದೆ. ಎಲ್ಲರ ಒಳಿತಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ವಿಶೇಷವಾಗಿ ಈ ಒಂದು ಕಾರ್ಯಕ್ರಮದಲ್ಲಿ ಬಹಳಷ್ಟು ಯುವಕ ಜನರು ಸೇರಿದ್ದೀರಿ ಈ ದೇಶದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಇದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಂಡು ಈ ದೇಶವನ್ನು ಬಲಿಷ್ಠವನ್ನಾಗಿ ಮಾಡಿ ಮುಂದೆ ನಡೆಸಿಕೊಂಡು ಹೊಗೋಣ ಎಂದು ಅವರು ಹೇಳಿದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಟೀಲ ಭುವನೇಶ ದೇವಿದಾಸ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪವಾರ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಗಳು, ಜನಪ್ರತಿನಿಧಿಗಳು, ಮುಖಂಡರು ವೇದಿಕೆಯಲ್ಲಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತವು ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಕರ್ಷಕವಾದ ಪಥ ಸಂಚಲನವನ್ನು ಪ್ರಸ್ತುತ ಪಡಿಸಿದರು. ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಧಾರವಾಡ ಜಿಲ್ಲಾಡಳಿತದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಹಿರಿಯರನ್ನು ಗೌರವಿಸಿ, ಇದೇ ವೇಳೆ ಸನ್ಮಾನಿಸಲಾಯಿತು. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆದ್ದವು.
ಕೈಮಗ್ಗ ಕಸೂತಿ ವಸ್ತು ಪ್ರದರ್ಶನಕ್ಕೆ ಚಾಲನೆ
ಜಿಲ್ಲಾಡಳಿತ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಆಯೋಜಿಸಿರುವ ಎರಡು ದಿನಗಳ ವಸ್ತು ಪ್ರದರ್ಶನ ಮೇಳಕ್ಕೆ ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್ ಲಾಡ್ ಉದ್ಘಾಟಿಸಿ, ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪವಾರ ಸೇರಿದಂತೆ ಇತರರು ಇದ್ದರು.


