ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರು ಗ್ರಾಮದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಯ ಮುಂಭಾಗ, ಹಾಗೂ ಚಿಕ್ಕಗಂಗೂರು ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ ದಿನಾಚರಣೆ, ಧ್ವಜಾರೋಹಣ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯ್ತಿ ಸದಸ್ಯರಾದ ವಿಶ್ವನಾಥರವರು ನೆರೆವೇರಿಸಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅತಿಥಿಗಳು “79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಇಂದು ನಾವು ಕಾಣುತ್ತಿರುವ ಅನುಭವಿಸುವ ಸ್ವಾತಂತ್ರ್ಯ ಲಕ್ಷಾಂತರ ಸ್ವತಂತ್ರ ಯೋಧರ ತ್ಯಾಗ ಬಲಿದಾನದ ಫಲ. ಇದನ್ನು ಉತ್ತಮವಾಗಿ ನಿರ್ವಹಿಸಬೇಕು” ಎಂದು ಆಶಯ ವ್ಯಕ್ತಪಡಿಸಿದರು.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದಸಂಸ ವಿದ್ಯಾರ್ಥಿ ಘಟಕದ ತಾಲ್ಲೂಕು ಸಂಚಾಲಕರಾದ ಚಿರಂಜೀವಿ ಬಿ ಹಿರೇಗಂಗೂರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶೇಖರಪ್ಪ ನಾಗರಾಜ್, ವಿಕಾಸ್, ಬೈರೇಶ್, ರಾಜಪ್ಪ ಹಾಗೂ ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ;
ಇದಕ್ಕೂ ಮುನ್ನ ಚಿಕ್ಕಗಂಗೂರು ಪ್ರೌಢಶಾಲೆಯಲ್ಲಿ 79 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಧ್ವಜಾರೋಹಣವನ್ನು ಕಲ್ಲೇಶಪ್ಪ ಎಸ್ ಹಾಗೂ ಹೊದಿಗೆರೆ ರಮೇಶ್ ಇವರುಗಳು ನೆರೆವೇರಿಸಿದರು.

ಈ ಸಂದರ್ಭದಲ್ಲಿ ಪ್ರಾಢಶಾಲೆ ಹಾಗೂ ಪ್ರಾಥಮಿಕಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಶಾಲೆಯ ಹಳೆಯ ವಿದ್ಯಾರ್ಥಿಯಾದ ಬೆಂಗಳೂರಿನ ಉದ್ಯಮಿ ಪ್ರಶಾಂತ ಕಾಮನಹಳ್ಳಿ ಇವರು ಸಮವಸ್ತ್ರ ವಿತರಣೆ ಮಾಡಿದರು. ಈ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಒಟ್ಟು ಸುಮಾರು 5 ಲಕ್ಷದ 65 ಸಾವಿರಗಳಷ್ಟು ದೇಣಿಗೆ ಸಂಗ್ರಹಿಸಿ ಶಾಲೆಗೆ ಅಗತ್ಯವಾದ ವಿದ್ಯುತ್ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಟಿವಿ ಮುಂತಾದ ಕಾರ್ಯಗಳನ್ನು ನೀಡಿದ್ದನ್ನು ಪ್ರಶಂಸಿಸಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ವಾತಂತ್ರ್ಯೋತ್ಸವ ದಿನ ಒಳಮೀಸಲಾತಿ ವಿಳಂಬ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಆಕ್ರೋಶ; ದಲಿತ ಮುಖಂಡರ ಬಂಧನ
ಇದೇ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ ಹೊದಿಗೆರೆ ರಮೇಶ್, ಸಮವಸ್ತ್ರಗಳನ್ನು ನೀಡಿದ ಪ್ರಶಾಂತ್ ಕಾಮನಹಳ್ಳಿ ಹಾಗೂ ಶಾಲಾ ಪ್ರವೇಶದ್ವಾರ ನಿರ್ಮಿಸಿದ ಕಾಯಕದ ನಿಂಗಪ್ಪ ಮತ್ತು ಬಿ ಜಿ ಮಹಾರುದ್ರಪ್ಪ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಉಮೇಶ್ ಎಚ್ ಆರ್ ಬಸವರಾಜಪ್ಪ, ಚಿರಂಜೀವಿ, ಶೇಖರ್ ಜಗದೀಶ, ರವಿಕುಮಾರ್, ಹಾಗೂ ಗ್ರಾಮಸ್ಥರು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.