ರಾಯಚೂರು ತಾಲೂಕಿನ ಕುರುಬದೊಡ್ಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ (ಕೆ.ಎಸ್.ಆರ್.ಪಿ.) ಬೆಟಾಲಿಯನ್ ಸ್ಥಾಪನೆಗೆ ಗುರುತಿಸಲಾಗಿದ್ದ ಸಾಗುವಳಿ ಭೂಮಿಯನ್ನು ವಿರೋಧಿಸಿ, ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ, “ನಮ್ಮ ಭೂಮಿ ನಮಗೆ ಕೊಡಿ” ಎಂದು ಪ್ರತಿಭಟನೆ ನಡೆಸಿದ್ದರು. ಈ ಹೋರಾಟದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಸಾಗುವಳಿ ಭೂಮಿಯನ್ನು ಬಿಟ್ಟು ಪರ್ಯಾಯ ಜಮೀನನ್ನು ಗುರುತಿಸಿ ಬೆಟಾಲಿಯನ್ ಸ್ಥಾಪನೆಯ ಕ್ರಿಯೆಯನ್ನು ಮುಂದುವರೆಸಲು ನಿರ್ಧರಿಸಿ ನೋಟೀಸ್ ಜಾರಿ ಮಾಡಿದೆ.
ಕುರುಬದೊಡ್ಡಿ ಗ್ರಾಮದ ಸರ್ವೆ ನಂ. 16/, 88/, ಮತ್ತು 89/* ರಲ್ಲಿ ಒಟ್ಟು 72 ಎಕರೆ ಜಮೀನಿನಲ್ಲಿ 30 ಎಕರೆ ಸಾಗುವಳಿದಾರರ ಅನುಭವದಲ್ಲಿರುವುದರಿಂದ, ಗ್ರಾಮಸ್ಥರು ತಮ್ಮ ಜೀವನಾಧಾರವಾದ ಈ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮಸ್ಥರು ಒಗ್ಗೂಡಿ ನಡೆಸಿದ ಪಾದಯಾತ್ರೆ ಮತ್ತು ಪ್ರತಿಭಟನೆಯ ಒತ್ತಡಕ್ಕೆ ಮಣಿದ ಸರ್ಕಾರ, ಒತ್ತುವರಿ ರಹಿತ ಮತ್ತು ತಕರಾರು ರಹಿತ 50 ರಿಂದ 70 ಎಕರೆ ಜಮೀನನ್ನು ಗುರುತಿಸಿ, ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ಆಡಳಿತ ಇಲಾಖೆಗೆ ಸೂಚಿಸಿದೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಅತ್ಯಾಚಾರ ಪ್ರಕರಣ : ಅಪರಾಧಿಗೆ ಜೀವಾವಧಿ ಶಿಕ್ಷೆ
ಈ ನಿರ್ಧಾರವನ್ನು ಕುರುಬದೊಡ್ಡಿ ಗ್ರಾಮಸ್ಥರು ಮತ್ತು ಹೋರಾಟಗಾರರು ಸ್ವಾಗತಿಸಿದ್ದು, ತಮ್ಮ ಭೂಮಿಯನ್ನು ಉಳಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. “ನಮ್ಮ ಜೀವನಾಧಾರವಾದ ಭೂಮಿಯನ್ನು ಕಾಪಾಡಲು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಸರ್ಕಾರದ ಈ ನಿರ್ಧಾರದಿಂದ ನಾವು ನಿರಾಳರಾಗಿದ್ದೇವೆ,” ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

