ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮಿರಖಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಾಂಜರವಾಡಿ ಗ್ರಾಮದಲ್ಲಿ ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಶಾಂತಾ ತ್ರಿಮುಖ (36) ಹಾಗೂ ಚಂದ್ರಕಲಾ ತ್ರಿಮುಖ (43) ಎಂಬ ಅಂಗವಿಕಲ ಸಹೋದರಿಯರ ಮನೆಗೆ ಗ್ರಾಮ ಆಡಳಿತ ಅಧಿಕಾರಿ ಅರುಣ ಭಾಲ್ಕೆ ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು.
ಈ ಕುರಿತು ʼಈದಿನ.ಕಾಮ್ʼ ನಲ್ಲಿ (ಆ.12) ರಂದು ʼಸರ್ಕಾರಿ ಸೌಲಭ್ಯದಿಂದ ವಂಚಿತರಾದ ಅಂಗವಿಕಲ ಸಹೋದರಿಯರಿಗೆ ಬೇಕಿದೆ ಸಹಾಯಹಸ್ತ!ʼ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಆಗಸ್ಟ್ 15ರಂದು ಬೆಳಿಗ್ಗೆ ವಾಂಜರವಾಡಿ ಗ್ರಾಮದ ಅಂಗವಿಕಲ ಅಕ್ಕ-ತಂಗಿಯರ ಮನೆಗೆ ದೌಡಾಯಿಸಿದರು.
ಇಬ್ಬರು ಸಹೋದರಿಯರು ಹುಟ್ಟಿನಿಂದಲೇ ಅಂಗವಿಕಲರು. ಇಬ್ಬರ ಎತ್ತರ ಎರಡರಿಂದ ಮೂರು ಅಡಿ ಮಾತ್ರ. ಎಲ್ಲರಂತೆ ಕೈ, ಕಾಲು ಹಾಗೂ ಮುಖವಿದ್ದು, ಚನ್ನಾಗಿ ಮಾತಾಡುತ್ತಾರೆ. ಆದರೆ, ಎತ್ತರ ಇಲ್ಲದಿರುವುದೇ ಇವರ ಬದುಕಿಗೆ ಮುಳುವಾಗಿದೆ. ಹೀಗಾಗಿ ದುಡಿದು ತಿನ್ನುವುದು ದೂರದ ಮಾತು. ತಮ್ಮ ಶರೀರ ತಮಗೆ ಭಾರವಾಗಿದೆ. ಮನೆಯಲ್ಲೇ ಓಡಾಡಲು, ಶೌಚಾಲಯಕ್ಕೆ ತೆರಳುವುದು ಕಷ್ಟ. ತಂದೆ-ತಾಯಿ ಕೂಲಿ ಮಾಡಿಯೇ ಮನೆ ನಡೆಸಬೇಕಾದ ಅನಿವಾರ್ಯತೆ. ತೀರಾ ಸಂಕಷ್ಟದಲ್ಲಿರುವ ಈ ಬಡ ಕುಟುಂಬ ಸರ್ಕಾರಿ ಸೌಲಭ್ಯಕ್ಕಾಗಿ ಅಲೆದು ನಿರಾಶವಾಗಿ, ಉಪಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ.
ʼಇಬ್ಬರು ಶೇ 100ರಷ್ಟು ಅಂಗವೈಕಲ್ಯ ಇದ್ದಾರೆ, ಅಂಗವಿಕಲರ ಮಾಸಿಕ ವೇತನ ಪಡೆಯಲು ಆಧಾರ, ರೇಷನ್ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಯಿದ್ದು, ಸೌಲಭ್ಯ ಪಡೆಯಲು ಎಲ್ಲ ಅರ್ಹತೆ ಹೊಂದಿದ್ದರೂ, ಒಬ್ಬರಿಗೆ ಶೇ.45 ರಷ್ಟು ಮಾತ್ರ ಅಂಗವಿಕಲ ಎಂದು ಪರಿಗಣಿಸಿ ₹800 ಮಾತ್ರ ಮಾಶಾಸನ ಮಂಜೂರು ಮಾಡಿದ್ದರು, ಈಗ ಅದು ಸ್ಥಗಿತವಾಗಿದೆ. ಪೂರ್ಣ ಪ್ರಮಾಣದ ದೈಹಿಕ ಅಂಗವೈಕಲ್ಯವಾಗಿದ್ದರೂ ಈವರೆಗೂ ಇಬ್ಬರಿಗೂ ಮಾಸಿಕ ₹1,400 ವೇತನ ಸಿಗುತ್ತಿಲ್ಲ. ಯಾವ ಅಧಿಕಾರಿಗಳೂ ನಮ್ಮ ಗೋಳು ಕೇಳುತ್ತಿಲ್ಲʼ ಎಂದು ಬೇಸರ ವ್ಯಕ್ತಪಡಿಸಿದರು.
ʼಒಂದೇ ಮನೆಯಲ್ಲಿ ಇಬ್ಬರು ಅಂಗವಿಕಲ ಸಹೋದರಿಯರು ಇರುವ ಎಂಬುದು ಗಮನಕ್ಕೆ ಬಂದಿದೆ. ಅವರಲ್ಲಿ ಒಬ್ಬರದು ಶೇ.50ರಷ್ಟು ಅಂಗವಿಕಲ ಇದ್ದಾರೆಂದು 800 ಮಾತ್ರ ಪಿಂಚಣಿ ಬರುತ್ತದೆ. ಇಬ್ಬರಿಗೆ ಅಂಗವಿಕಲ ಪ್ರಮಾಣ ಪತ್ರ ಇಲ್ಲ. ಸಂಬಂಧಿಸಿದ ಎಲ್ಲ ದಾಖಲೆ ಪರಿಶೀಲಿಸಿ ಪಡೆಯಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಇಬ್ಬರಿಗೂ ಶೇ 100ರಷ್ಟು ಅಂಗವೈಕಲ್ಯ ಪ್ರಮಾಣ ಪತ್ರ ಮಾಡಿಸಿ ಶೀಘ್ರದಲ್ಲಿ ಇಬ್ಬರಿಗೂ ಮಾಸಾಶನ ಮಾಡಿಸಿಕೊಡಲಾಗುವುದು ಎಂದು ಗ್ರಾಮ ಆಡಳಿತ ಅಧಿಕಾರಿ ಅರುಣ ಭಾಲ್ಕೆ ʼಈದಿನʼಕ್ಕೆ ಭರವಸೆ ನೀಡಿದರು.
ಇದನ್ನೂ ಓದಿ : ಬೀದರ್ | ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಅಂಗವಿಕಲ ಸಹೋದರಿಯರಿಗೆ ಬೇಕಿದೆ ಸಹಾಯಹಸ್ತ!
ʼಅಂಗವಿಕಲ ಮಾಸಾಶನ ಇಲ್ಲದೆ ಸಂಕಷ್ಟದ ಬದುಕು ದೂಡುತ್ತಿದ್ದ ಇಬ್ಬರು ಸಹೋದರಿಯರ ಬಗ್ಗೆ ʼಈದಿನ.ಕಾಮ್ʼ ವಿಶೇಷ ಕಾಳಜಿವಹಿಸಿ ವರದಿ ಪ್ರಕಟಿಸಿತು. ಅದರ ಫಲವಾಗಿ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಶೀಘ್ರದಲ್ಲೇ ಪಿಂಚಣಿ ಜಾರಿ ಮಾಡುವುದಾಗಿ ತಹಸೀಲ್ದಾರ್ ಶಿವಾನಂದ ಮೇತ್ರೆ ಅವರ ನಿರ್ದೇಶನ ಮೇರೆಗೆ ಗ್ರಾಮ ಆಡಳಿತ ಅಧಿಕಾರಿ ಅರುಣ ಭಾಲ್ಕೆ ಅವರು ಭರವಸೆ ನೀಡಿದ್ದಾರೆ. ವರದಿ ಪ್ರಕಟಿಸಿದ ಈ ದಿನ.ಕಾಮ್ ಹಾಗೂ ಸ್ಪಂದಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು, ಪ್ರಜ್ಞಾವಂತ ನಾಗರಿಕರು ಶ್ಲಾಘಿಸಿದ್ದಾರೆ.