ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೇನ್ ಅವರು ಶುಕ್ರವಾರ ನಿಧನರಾದರು ಎಂದು ಜೆಎಂಎಂ ರಾಷ್ಟ್ರೀಯ ವಕ್ತಾರ ಕುನಾಲ್ ಸರ್ನಾಗಿ ತಿಳಿಸಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಈ ಬಗ್ಗೆ ಸೊರೇನ್ ಅವರ ಎಕ್ಸ್ ಖಾತೆಯಲ್ಲೇ ಪೋಸ್ಟ್ ಮಾಡಿರುವ ಅವರ ಪುತ್ರ, “ನನ್ನ ತಂದೆ ನಮ್ಮ ನಡುವೆ ಇಲ್ಲ ಎಂದು ನಾನು ನಿಮಗೆಲ್ಲರಿಗೂ ಬಹಳ ದುಃಖದಿಂದ ತಿಳಿಸುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಖಾಸಗಿ ಪೆಡಂಭೂತದ ನಡುವೆ ನಲುಗುವ ಸರ್ಕಾರಿ ಶಾಲೆಗಳು; ಅಭಿವೃದ್ಧಿ ಪಡಿಸಬೇಕಾದ ಆಡಳಿತಕ್ಕಿಲ್ಲ ಹೊಣೆ!
ಆಗಸ್ಟ್ 2ರಂದು ಸ್ನಾನ ಮಾಡುವಾಗ ಜಾರಿ ಬಿದ್ದ ರಾಮದಾಸ್ ಸೊರೇನ್ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮದಾಸ್ ಸೊರೇನ್ ಅವರ ಸ್ಥಿತಿ ಗಂಭೀರವಾಗಿತ್ತು. ಹಿರಿಯ ತಜ್ಞರ ತಂಡ ಸಚಿವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಜ್ಯ ಶಿಕ್ಷಣ ಸಚಿವರು ನಿಧನರಾಗಿದ್ದಾರೆ.
अत्यंत ही दुख के साथ यह बता रहा हूँ की मेरे पिताजी रामदास सोरेन जी अब हमारे बीच नही रहे | pic.twitter.com/W1qYlse9yb
— Ramdas Soren (@RamdassorenMLA) August 15, 2025
1963ರ ಜನವರಿ 1ರಂದು ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಘೋರಬಂದ ಗ್ರಾಮದಲ್ಲಿ ಜನಿಸಿದ ಸೊರೇನ್ ಅವರು ಮಧ್ಯಮ ವರ್ಗದ ರೈತ ಕುಟುಂಬಕ್ಕೆ ಸೇರಿದವರು. ಘೋರಬಂದ ಪಂಚಾಯತ್‌ನ ಗ್ರಾಮ ಪ್ರಧಾನ ಆಗಿ ತಮ್ಮ ರಾಜಕೀಯ ಜೀವನವನ್ನು ರಾಮದಾಸ್ ಅವರು ಪ್ರಾರಂಭಿಸಿದರು. ಸದ್ಯ ಹೇಮಂತ್ ಸೊರೇನ್ ನೇತೃತ್ವದ ಸಂಪುಟದಲ್ಲಿ ಅತ್ಯಂತ ಪ್ರಭಾವಶಾಲಿ ಸಚಿವರಲ್ಲಿ ಒಬ್ಬರಾಗಿದ್ದರು.
1990ರಲ್ಲಿ ಅವರು ಜೆಎಂಎಂನ ಜಮ್ಶೆದ್‌ಪುರ ಪೂರ್ವ ಅಧ್ಯಕ್ಷರಾದ ಅವರು, ನಂತರ 2005ರ ವಿಧಾನಸಭಾ ಚುನಾವಣೆಯಲ್ಲಿ ಘಟ್‌ಶಿಲಾ ಕ್ಷೇತ್ರದಲ್ಲಿ ಸ್ಪರ್ಧಿಸುವ ತಯಾರಿ ನಡೆಸಿದರು. ಆದರೆ ಆ ಸ್ಥಾನವು ಜೆಎಂಎಂನ ಮಿತ್ರ ಪಕ್ಷ ಕಾಂಗ್ರೆಸ್ ಪಾಳಾಯಿತು. ಕಾಂಗ್ರೆಸ್ ಎದುರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು.
ಅದಾದ ಬಳಿಕ 2009ರ ವಿಧಾನಸಭಾ ಚುನಾವಣೆಯಲ್ಲಿ ಘಟ್‌ಶಿಲಾದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಜಾರ್ಖಂಡ್ ವಿಧಾನಸಭೆಯ ಸದಸ್ಯರಾದರು. 2014ರಲ್ಲಿ ಬಿಜೆಪಿಯ ಲಕ್ಷ್ಮಣ್ ತುಡು ವಿರುದ್ಧ ಪರಾಭವಗೊಂಡರು. ಆದರೆ 2019ರಲ್ಲಿ ಮತ್ತೆ ಆ ಸ್ಥಾನವನ್ನು ಪಡೆದುಕೊಂಡರು.
2024ರಲ್ಲಿ ಮಾಜಿ ಸಿಎಂ ಚಂಪೈ ಸೊರೇನ್ ಅವರ ಪುತ್ರ ಬಿಜೆಪಿಯ ಬಾಬುಲಾಲ್ ಸೊರೇನ್ ಅವರನ್ನು ಸೋಲಿಸುವ ಮೂಲಕ ಸೋರೆನ್ ಮೂರನೇ ಬಾರಿಗೆ ಆ ಸ್ಥಾನವನ್ನು ಗೆದ್ದರು. ಚಂಪೈ ಸೊರೇನ್ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆಗಸ್ಟ್ 30ರಂದು ರಾಮದಾಸ್ ಸೊರೇನ್ ಅವರು ಸಚಿವ ಸ್ಥಾನ ಪಡೆದರು.
