ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಮೀಪದಲ್ಲಿ ಹುಲಿಯೊಂದು ಗಾಯಗೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಕುಂಧಕೆರೆ ಅರಣ್ಯ ವಲಯದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಯೆಲ್ಚೆಟ್ಟಿ ಎಂಬ ಗ್ರಾಮದ ನಿವಾಸಿ ಮಹದೇವ ಎಂಬುವವರ ಜಮೀನಿನಲ್ಲಿ ಸುಮಾರು 11 ರಿಂದ 12 ವರ್ಷ ಪ್ರಾಯವಿರುವ ಹುಲಿಯೊಂದು ಗಾಯಗೊಂಡು ನರಳಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆ ಬಳಿಕ ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅರಿವಳಿಕೆ ಮದ್ದು ನೀಡಿ, ರಕ್ಷಿಸಿದ್ದಾರೆ. ಇನ್ನೊಂದು ಹುಲಿಯೊಂದಿಗೆ ಜಗಳವಾಡಿದ ನಂತರ ಗಾಯಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಗಾಯಗೊಂಡಿದ್ದ ಹುಲಿಗೆ ಸೂಕ್ತ ಚಿಕಿತ್ಸೆ ನೀಡಲು ಮೈಸೂರು ಬಳಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಅಧಿಕಾರಿಗಳು ಕಳುಹಿಸಿರುವುದಾಗಿ ತಿಳಿದುಬಂದಿದೆ. ಗಾಯಗೊಂಡಿದ್ದ ಹುಲಿಯೊಂದಿಗೆ ಜಗಳವಾಡಿದ್ದ ಇನ್ನೊಂದು ಹುಲಿಯನ್ನು ಪತ್ತೆ ಹಚ್ಚಿ, ಮತ್ತೆ ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಶಿಬಿರದ ಎರಡು ಆನೆಗಳನ್ನು ಬಳಸಿಕೊಂಡಿರುವುದಾಗಿ ತಿಳಿದುಬಂದಿದೆ.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಎಸಿಎಫ್ ಸುರೇಶ್ ಹಾಗೂ ಕುಂದಕೆರೆ ಆರ್‌ಎಫ್‌ಒ ನಾಗೇಂದ್ರ ನಾಯಕ್ ಸ್ಥಳಕ್ಕೆ ಭೇಟಿ ನೀಡಿದ್ದರು. ವೈದ್ಯ ಡಾ.ವಾಸೀಂ ಮಿರ್ಜಾ ಅರಿವಳಿಕೆ ಲಸಿಕೆ ನೀಡಿದ್ದು, ಬಳಿಕ ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದರು.
ಇದನ್ನು ಓದಿದ್ದೀರಾ? ಬೀದರ್ | ಈದಿನ ಫಲಶೃತಿ: ವಿಕಲಚೇತನ ಸಹೋದರಿಯರ ಮನೆಗೆ ದೌಡಾಯಿಸಿದ ಅಧಿಕಾರಿಗಳು; ಮಾಸಾಶನದ ಭರವಸೆ
“ಹುಲಿಯೊಂದಿಗೆ ಕಾದಾಡಿದ್ದ ಹುಲಿ ಸೆರೆ ಹಿಡಿಯಬೇಕು. ಅಲ್ಲಿಯವರೆಗೂ ಗಾಯಾಳು ಹುಲಿ ಸಾಗಿಸಬಾರದು” ಎಂದು ರೈತರು ಪಟ್ಟು ಹಿಡಿದಿದ್ದರು. ಅಧಿಕಾರಿಗಳು ಭರವಸೆ ನೀಡಿದ ಬಳಿಕ ಅವಕಾಶ ನೀಡಿದರು. ಇನ್ನೊಂದು ಹುಲಿಯನ್ನು ಸೆರೆ ಹಿಡಿಯಲು ಕುನ್ನಮುಟ್ಟಿ ಗುಡ್ಡದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
