ದೆಹಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ವೇಳೆ ಆರೋಪಿಯೋರ್ವ ನೆಲದ ಮೇಲೆ ಅಕ್ಕಿ ಎಸೆದಿದ್ದು, ವಿಚಾರಣೆಗೆ ಸುಮಾರು 15 ನಿಮಿಷಗಳ ಕಾಲ ಅಡ್ಡಿಪಡಿಸಿದ್ದಾನೆ. ಹಾಗೆಯೇ ಮಾಟಮಂತ್ರ ಶಂಕೆ ವ್ಯಕ್ತವಾಗಿದೆ. ಸುಮಾರು 14 ವರ್ಷಗಳ ಹಿಂದಿನ ಕೊಲೆ ಪ್ರಕರಣದ ಆರೋಪಿ ವೈದ್ಯ ಚಂದರ್ ವಿಭಾಸ್ ನ್ಯಾಯಾಲಯದಲ್ಲಿ ಅಕ್ಕಿ ಎಸೆದಿದ್ದಾನೆ ಎಂದು ಹೇಳಲಾಗಿದೆ. ವಿದ್ಯಾವಂತನಾಗಿಯೂ ಮೌಢ್ಯಾಚರಣೆವನ್ನು ನಂಬಿರುವುದಕ್ಕೆ ಕೋರ್ಟ್ ಟೀಕಿಸಿದೆ.
ಟಿಸ್ ಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಶೆಫಾಲಿ ಬರ್ನಾಲಾ ಟಂಡನ್ ಅವರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ನ್ಯಾಯಾಲಯದ ಸಿಬ್ಬಂದಿ ನೆಲದ ಮೇಲೇ ಏನೋ ಬಿದ್ದಿರುವುದು ಗಮನಿಸಿ ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ನ್ಯಾಯಾಧೀಶರು ಪರಿಶೀಲಿಸಿದಾಗ ಆರೋಪಿ ಡಾ. ಚಂದರ್ ವಿಭಾಸ್ ನಿಂತಿದ್ದ ಸ್ಥಳದ ಕೆಳಗೆ ಅಕ್ಕಿ ಎಸೆದಿರುವುದು ಕಂಡುಬಂದಿದೆ.
ಇದನ್ನು ಓದಿದ್ದೀರಾ? ಮಾಟಮಂತ್ರ ಮಾಡುತ್ತಿದ್ದ ಶಂಕೆ: ಒಂದೇ ಕುಟುಂಬದ ಐವರ ಸಜೀವ ದಹನ
“ವಿಚಾರಣೆ ನಡೆಸಿದಾಗ ಆರೋಪಿಯು ತನ್ನ ಕೈಯಲ್ಲಿ ಸ್ವಲ್ಪ ಅಕ್ಕಿ ಇತ್ತು, ಅದು ಕೆಳಗೆ ಬಿತ್ತು ಎಂದು ಹೇಳಿಕೊಂಡನು. ಆದಾಗ್ಯೂ, ನ್ಯಾಯಾಲಯಕ್ಕೆ ಪ್ರವೇಶಿಸುವಾಗ ಮತ್ತು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಆತನ ಕೈಯಲ್ಲಿ ಅಕ್ಕಿ ಯಾಕೆ ಹಿಡಿದಿದ್ದ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಆತನಿಗೆ ಸಾಧ್ಯವಾಗಿಲ್ಲ” ಎಂದು ನ್ಯಾಯಮೂರ್ತಿ ಟಂಡನ್ ಹೇಳಿದ್ದಾರೆ.
ಇನ್ನು ಇದಕ್ಕೂ ಹಿಂದೆ ಆಗಸ್ಟ್ 2ರಂದೂ ನ್ಯಾಯಾಲಯದ ನೆಲದ ಮೇಲೆ ಕೆಲವು ಅಕ್ಕಿಯ ಕಾಳುಗಳು ಕಂಡುಬಂದಿವೆ ಎಂದು ನ್ಯಾಯಾಲಯದ ಸಿಬ್ಬಂದಿ ನ್ಯಾಯಾಧೀಶರಿಗೆ ತಿಳಿಸಿದರು. ಇದನ್ನು ನೋಡಿದ ವಕೀಲರು ಮಾಟಮಂತ್ರ ಎಂದು ಶಂಕಿಸಿದ್ದು, ಅಕ್ಕಿಯನ್ನು ಸ್ವಚ್ಛಗೊಳಿಸುವಂತೆ ತಿಳಿಸಿದ್ದಾರೆ. ಇದರಿಂದಾಗಿ 15 ನಿಮಿಷಗಳ ಕಾಲ, ನ್ಯಾಯಾಲಯದ ವಿಚಾರಣೆಯನ್ನು ಸ್ಥಗಿತಗೊಳಿಸಲಾಯಿತು. ನೆಲವನ್ನು ಸ್ವಚ್ಛಗೊಳಿಸಿದ ನಂತರ ವಿಚಾರಣೆ ಮುಂದುವರೆಸಲಾಗಿದೆ.
“ಆರೋಪಿಗಳಿಂದ ಮಾಟಮಂತ್ರ ನಡೆದಿದೆ ಎಂದು ಶಂಕಿಸಲಾಗಿರುವುದರಿಂದ ನ್ಯಾಯಾಲಯದಲ್ಲಿ ಹಾಜರಿದ್ದ ಲೆಫ್ಟಿನೆಂಟ್ ವಕೀಲರ ಕೋರಿಕೆಯ ಮೇರೆಗೆ ಕಸ ಗುಡಿಸುವವರು ಬರುವವರೆಗೆ ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸಲಾಗಿದೆ. 10 ನಿಮಿಷಗಳ ನಂತರ ಕಸ ಗುಡಿಸುವವರು ಬಂದು ನೆಲವನ್ನು ಸ್ವಚ್ಛಗೊಳಿಸಿದ್ದಾರೆ” ಎಂದು ಟಂಡನ್ ಹೇಳಿದರು.
“ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕ ಮತ್ತು ವಿದ್ಯಾವಂತರು ಎಂದು ಹೇಳಲಾಗುವ ಪ್ರಸ್ತುತ ಆರೋಪಿ ಡಾ. ಚಂದರ್ ವಿಭಾಸ್ ಅವರು ಅಸಮಂಜಸ ರೀತಿಯಲ್ಲಿ ವರ್ತಿಸಿದ್ದಾರೆ. ನ್ಯಾಯಾಲಯದ ಕಲಾಪಗಳಲ್ಲಿ ಅಡಚಣೆ ಉಂಟುಮಾಡಿದ್ದಾರೆ ಎಂಬುದು ನ್ಯಾಯಾಲಯಕ್ಕೆ ತುಂಬಾ ಆಘಾತಕಾರಿ ಮತ್ತು ಆಶ್ಚರ್ಯಕರವಾಗಿದೆ” ಎಂದು ಕೋರ್ಟ್ ಹೇಳಿದೆ.
ಹಾಗೆಯೇ ಆರೋಪಿಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 267 (ನ್ಯಾಯಾಂಗ ಕಲಾಪದಲ್ಲಿ ಕುಳಿತಿರುವ ಸಾರ್ವಜನಿಕ ಸೇವಕನಿಗೆ ಉದ್ದೇಶಪೂರ್ವಕ ಅವಮಾನ ಅಥವಾ ಅಡ್ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಕ್ಷಮೆಯಾಚಿಸಿದ್ದು, ಆರೋಪಿಯನ್ನು ಪ್ರತಿನಿಧಿಸಿದ ವಕೀಲೆ ಸೋನಮ್ ಗುಪ್ತಾ ಆರೋಪಿಯು ಪಶ್ಚಾತ್ತಾಪ ಪಡುತ್ತಿದ್ದು, ಇನ್ನು ಮುಂದೆ ಇಂತಹ ಕೃತ್ಯ ಮಾಡುವುದಿಲ್ಲ. ಯಾರೋ ಅವರ ದಾರಿ ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.
ವಾದ ಆಲಿಸಿದ ಕೋರ್ಟ್ “ಆರೋಪಿಯು ಸಲ್ಲಿಸಿದ ಕ್ಷಮೆಯಾಚನೆ ಮತ್ತು ಅವನ ಪಶ್ಚಾತ್ತಾಪದ ಭಾವನೆ ಸೇರಿದಂತೆ ಎಲ್ಲಾ ಸಂಗತಿಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ, ನ್ಯಾಯಾಲಯವು ಬೆಳಿಗ್ಗೆ 8 ಗಂಟೆಯವರೆಗೆ ಜೈಲು ಶಿಕ್ಷೆ ಮತ್ತು 2,000 ರೂ. ದಂಡವನ್ನು ಠೇವಣಿ ಇಡಲು ಶಿಕ್ಷೆ ವಿಧಿಸುತ್ತದೆ” ಎಂದು ತಿಳಿಸಿದೆ.
