ಕೂಲಿ ಹಣದ ವಿಚಾರದಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬನನ್ನು ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ ಘಟನೆ ಶಿರಸಿ ತಾಲೂಕಿನ ಸೊಂದಾ ಗ್ರಾಮದ ಕಮಾಟಗೇರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತಪಟ್ಟ ವ್ಯಕ್ತಿಯನ್ನು ಕಮಾಟಗೇರಿಯ ರವೀಶ ಗಣಪತಿ ಚನ್ನಯ್ಯ (40) ಎಂದು ಗುರುತಿಸಲಾಗಿದೆ. ಮಂಜುನಾಥ ಬಸ್ಯಾ ಚನ್ನಯ್ಯ ಕೊಲೆ ಮಾಡಿದ ಆರೋಪಿ
ಮೃತ ರವೀಶ ಗ್ರಾಮದಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡಿಕೊಂಡಿದ್ದು, ತೋಟ ಮತ್ತು ಗದ್ದೆ ಮಾಲೀಕರಿಂದ ಕೂಲಿ ಪಡೆದು, ತಮ್ಮೊಂದಿಗೆ ಕೆಲಸ ಮಾಡುವ ಇತರ ಕಾರ್ಮಿಕರಿಗೆ ಹಣ ನೀಡುತ್ತಿದ್ದ. ಆರೋಪಿ ಮಂಜುನಾಥ ಕೂಡ ರವೀಶರೊಂದಿಗೆ ಕೆಲಸ ಮಾಡುತ್ತಿದ್ದನು. ಕಳೆದ ಹಲವು ದಿನಗಳಿಂದ ಮಂಜುನಾಥ ತನ್ನ ಕೂಲಿ ಹಣವನ್ನು ಕೊಡುವಂತೆ ರವೀಶನ ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದನು. ರವೀಶನ ಪತ್ನಿ ಚೇತನಾ ಹಲವು ಬಾರಿ ಸಮಾಧಾನ ಮಾಡಿ ಕಳುಹಿಸಿದ್ದರು.
ಗುರುವಾರ ರಾತ್ರಿ 8:15 ರಿಂದ ಶುಕ್ರವಾರ ಬೆಳಗಿನ ಜಾವ 6:30ರ ನಡುವಿನ ಅವಧಿಯಲ್ಲಿ, ಆರೋಪಿ ಮಂಜುನಾಥನ ಮನೆಯಂಗಳದಲ್ಲಿ ಕೂಲಿ ಹಣದ ವಿಷಯವಾಗಿ ರವೀಶ ಮತ್ತು ಮಂಜುನಾಥನ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಮಂಜುನಾಥ, ಯಾವುದೋ ಹರಿತವಾದ ಆಯುಧದಿಂದ ರವೀಶನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದಾಗಿ ರವೀಶ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಉತ್ತರ ಕನ್ನಡ | ದೌರ್ಜನ್ಯಗಳಿಂದ ನೊಂದ ಮಹಿಳೆಯರಿಗೆ ನೆರವಾಗಲು ಶೀಘ್ರದಲ್ಲೇ ಹೆಚ್ಚುವರಿ ಸಖಿ ಕೇಂದ್ರ
ಶುಕ್ರವಾರ ಬೆಳಿಗ್ಗೆ ರವೀಶನ ಪತ್ನಿ ಚೇತನಾ ಈ ಘಟನೆಯನ್ನು ಗಮನಿಸಿದ್ದು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಪತಿಯ ಕೊಲೆಗೆ ಮಂಜುನಾಥನೇ ಕಾರಣವೆಂದು ಆರೋಪಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣದ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಣ್ಣ ಕೂಲಿ ಹಣದ ವಿವಾದಕ್ಕಾಗಿ ನಡೆದ ಈ ದುರ್ಘಟನೆ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ.