ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ, ಸ್ವದೇಶಿ ವಿದೇಶಿ ಹಣ್ಣಿನ ಸಸಿಗಳ ಪರಿಚಯ, ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ಚಾಲನೆ ನೀಡಿದರು.
ಕೊಪ್ಪಳ ತೋಟಗಾರಿಕಾ ಇಲಾಖೆ ವತಿಯಿಂದ ತೋಟಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿದ ಉತ್ಕೃಷ್ಟ ಗುಣಮಟ್ಟದ ಸಸಿಗಳ ಹಾಗೂ ಆದಾಯ ಹೆಚ್ಚಿಸುವ ತೋಟಗಾರಿಕೆ ಸಸಿ ತಳಿಗಳ ಪರಿಚಯ ಮಾರಾಟದ ಉದ್ದೇಶದಿಂದ ಆಗಸ್ಟ್ 15 ರಿಂದ 20ರವರೆಗೆ ಕೊಪ್ಪಳ ನಗರದ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಸ್ಯ ಸಂತೆಯಲ್ಲಿನ ಮಾವು, ಲಿಂಬೆ, ಮೂಸಂಬಿ, ಹಲಸು, ಕಿತ್ತಳೆ, ಚೈನಿಸ್ ಕಿತ್ತಳೆ, ಪೇರಲ, ತೆಂಗು, ದಾಳಿಂಬೆ, ಅಂಜೂರ, ವಾಟರ್ ಆಪಲ್, ಲಿಚ್ಚಿ, ಬೀಜರಹಿತ ಲಿಂಬೆ, ರಾಮ್‌ಫಲ, ಲಕ್ಷ್ಮಣ್ ಫಲ ಸೇರಿದಂತೆ ವಿವಿಧ ಹಣ್ಣುಗಳ ಮತ್ತು ಕರಿಬೇವು, ವಿಳ್ಯೆದೆಲೆ ಸಸಿಗಳು, ಸಾಂಬಾರು ಪದಾರ್ಥ ಬೆಳೆಗಳಾದ ದಾಲ್ಚಿನ್ನಿ, ಲವಂಗ, ಏಲಕ್ಕಿ, ಕಾಳು ಮೆಣಸು ಸಸಿಗಳು ಹಾಗೂ ಅಲಂಕಾರಿಕ ಸಸಿಗಳು ಸೇರಿದಂತೆ ಇತರೆ ತಳಿಯ ಸಸಿಗಳನ್ನು ಸಚಿವರು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳು ವೀಕ್ಷಣೆ ಮಾಡಿದರು.
79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮತ್ತು ತೋಟಗಾರಿಕೆ ಪಿತಾಮಹ ಡಾ. ಎಮ್.ಎಚ್. ಮರೀಗೌಡರವರ ಜನ್ಮ ದಿನಾಚರಣೆ ಅಂಗವಾಗಿ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ವಿನೂತನ ಕಾರ್ಯಕ್ರಮವನ್ನು ರೈತರಿಗೆ ಹಾಗೂ ಸಾರ್ವಜನಿಕರಿಗಾಗಿ ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ ಏರ್ಪಡಿಸಲಾಗಿತ್ತು.

ತೋಟಗಾರಿಕಾ ಇಲಾಖಾ ಸಸ್ಯಾಗಾರದಲ್ಲಿ ಉತ್ಪಾದಿಸಿದ ಹಣ್ಣು, ತರಕಾರಿ, ಪುಷ್ಪ ಅಲ್ಲದೇ ಅಲಂಕಾರಿಕ ಗಿಡಗಳು ಮತ್ತು ಪುಷ್ಪ ಸಸ್ಯಗಳು ಪ್ರದರ್ಶನ ಮತ್ತು ಇಲಾಖಾ ದರದಲ್ಲಿ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿಲಾಗಿದೆ. ಈ ಅಭಿಯಾನಕ್ಕೆ ತೋಟಗಾರಿಕೆ ಇಲಾಖೆ ಕೊಪ್ಪಳ ಜಿಲ್ಲೆಯಲ್ಲಿರುವ 9 ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ವಿವಿಧ ತೋಟಗಾರಿಕೆ ಸಸಿ-ಕಸಿಗಳು ಲಭ್ಯವಿರುತ್ತವೆ.
ಈ ಅಭಿಯಾನದಲ್ಲಿ ಮುಖ್ಯವಾಗಿ ಕಡಿಮೆ ಖರ್ಚು, ಕಡಿಮೆ ನಿರ್ವಹಣೆ, ನಿರಂತರ ಆದಾಯ ಬರುವಂತಹ ತೋಟಗಾರಿಕೆ ಬೆಳೆಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ ಹಾಗೂ ಹೆಚ್ಚು ಖರ್ಚು ಹೆಚ್ಚು ನಿರ್ವಹಣೆ ಅಧಿಕ ಆದಾಯ ಬರುವಂತಹ ಬೆಳೆಗಳನ್ನು ಪರಿಚಯಿಸಲಾಗುತ್ತಿದೆ. ರೈತರಿಗೆ ಫ್ಲೋರೋಜಾ ಕಂಪನಿಯೊಂದಿಗೆ ಹಲಸಿನ ಬೆಳೆಯ ಒಪ್ಪಂದ ಕೃಷಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಜಿಲ್ಲೆಗೆ ಹೊಂದುವಂತಹ ಹೊಸ ಸೇಬು ಹಣ್ಣಿನ “ಅನಾ” ತಳಿ ಹಾಗೂ ಜಗತ್ತಿನ ದುಬಾರಿ ಮಾವಿನ ತಳಿ ಮಿಯಾಜಾಕಿಯ ಸಸಿಗಳನ್ನು ಜೊತೆಗೆ ಹೊಸ ತಳಿಗಳಾದ ಮೆಕಡೋಮಿಯಾ ಜಗತ್ತಿನ ದುಬಾರಿ ನಟ್ಟ್ ಕಸಿ ಸಸಿಗಳನ್ನು ಮೊದಲ ಬಾರಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ ಹಾಗೂ ಹೊಸ ಹೊಸ ಹಣ್ಣಿನ, ಹೂವಿನ, ತರಕಾರಿ ಸಸಿಗಳನ್ನು ಯೋಗ್ಯದರದಲ್ಲಿ ಮಾರಾಟಕ್ಕೆ ಇಡಲಾಗಿದೆ.
ಇದನ್ನೂ ಓದಿ: ಕೊಪ್ಪಳ | ಕರ್ತವ್ಯ ಲೋಪ ಆರೋಪ : ಕರಡೋಣ ಪಿಡಿಒ ಅಮಾನತು
ಮುಖ್ಯವಾಗಿ ಸಾವಯವ ದತ್ತ ಒಂದು ಹೆಜ್ಜೆ ಎಂಬ ಪರಿಕಲ್ಪನೆಯೊಂದಿಗೆ ಜಿಲ್ಲೆಯಲ್ಲಿರುವ 9 ತೋಟಗಾರಿಕೆ ಕ್ಷೇತ್ರಗಳನ್ನು ಸಾವಯವ ಪರಿವರ್ತನೆ ಮಾಡುವ ಉದ್ದೇಶದೊಂದಿಗೆ ಸಾವಯವ ಉತ್ಪನ್ನಗಳಾದ ಪಂಚಗವ್ಯ, ಗೋ ಕೃಪಾಮೃತ, ಜೀವಾಮೃತ, ಬೀಜಾಮೃತ, ನಿಮಾಸ್ತ್ರ, ಘನ ಜೀವಾಮೃತ, ಅಗ್ನಿಅಸ್ತ್ರ, ಬ್ರಹ್ಮಾಸ್ತ್ರ, ದಶಪರ್ಣಿ ಕಷಾಯ, ದಶಗವ್ಯ, ಹ್ಯುಮಿಕ್ ಆಸಿಡ್, ಬಿಲ್ವ ಪತ್ರರಸಾಯನ, ಬೇವಿನ ಬೀಜದ ಸಾರ, ಸಂಜೀವಕ, ಅಮೃತಪಾನಿ, ಎರೆಹುಳ ಗೊಬ್ಬರ, ಎರೆಜಲ, ಬೇವಿನ ಹಿಂಡಿ ಹಾಗೂ ಮೀನಿನಿಂದ ತಯಾರಿಸಿದ ಔಷಧಿಗಳನ್ನು ಪ್ರಾತ್ಯಾಕ್ಷಿಕೆ ರೂಪದಲ್ಲಿ ರೈತರಿಗೆ ಪರಿಚಯಿಸಲಾಗುತ್ತಿದೆ.
ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಕೆ.ಶ್ರೀನಿವಾಸ್ ಗುಪ್ತಾ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ಧಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಕೊಪ್ಪಳದ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ, ಜನಪ್ರತಿನಿಧಿಗಳು, ತೋಟಗಾರಿಕೆ ಬೆಳೆಗಾರರು, ರೈತರು, ತೋಟಗಾರಿಕೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಇದ್ದರು.