ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಶನಿವಾರ ಮುಂಜಾನೆ ಮುಂಬೈಗೆ ತೆರಳುತ್ತಿದ್ದ ಸ್ಟಾರ್ ಏರ್ ವಿಮಾನ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅರ್ಧ ದಾರಿಯಿಂದಲೇ ವಾಪಸ್ ಆಗಿದೆ.
ಸ್ಟಾರ್ ಏರ್‌ನ ಎಸ್5111 ವಿಮಾನ ಬೆಳಿಗ್ಗೆ 7.50ಕ್ಕೆ ಬೆಳಗಾವಿಯಿಂದ ಟೇಕಾಫ್ ಆಗಿದ್ದು, 8.50ಕ್ಕೆ ಮುಂಬೈ ತಲುಪಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ, ವಿಮಾನ ಮುಂಬೈಗೆ ಹೋಗದೆ ಬೆಳಿಗ್ಗೆ 8.30ಕ್ಕೆ ಬೆಳಗಾವಿಯಲ್ಲೇ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಈ ವಿಮಾನದಲ್ಲಿ 48 ಮಂದಿ ಪ್ರಯಾಣಿಕರಿದ್ದರು.
“ವಿಮಾನ ತುರ್ತು ಭೂಸ್ಪರ್ಶ ಮಾಡಿಲ್ಲ. ಸಹಜವಾಗಿಯೇ ಟರ್ಮಿನಲ್‌ಗೆ ಬಂದು ಇಳಿದಿದೆ. ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಮುಂಬೈಗೆ ಕಳುಹಿಸಲಾಗಿದೆ,” ಎಂದು ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ಎಸ್. ತ್ಯಾಗರಾಜನ್ ತಿಳಿಸಿದ್ದಾರೆ.
ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾದ ಕ್ಷಣದಲ್ಲಿ ಪ್ರಯಾಣಿಕರಲ್ಲಿ ಆತಂಕ ಮೂಡಿದ್ದರೂ, ವಿಮಾನ ಸುರಕ್ಷಿತವಾಗಿ ಇಳಿದ ಹಿನ್ನೆಲೆಯಲ್ಲಿ ದೊಡ್ಡ ಅನಾಹುತ ತಪ್ಪಿದೆ.