ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳದಂತೆ ಉದ್ಧವ್ ಠಾಕ್ರೆಗೆ ಶಿವಸೇನೆ(ಯುಬಿಟಿ) ಭಾಗವಾಗಿರುವ ಹಿರಿಯ ರೈತ ನಾಯಕ ಮತ್ತು ವಿದರ್ಭ ಜನ ಆಂದೋಲನ ಸಮಿತಿಯ ಸಂಸ್ಥಾಪಕ ಕಿಶೋರ್ ತಿವಾರಿ ಪತ್ರ ಬರೆದಿದ್ದಾರೆ.
ರಾಜ್ ಠಾಕ್ರೆ ಜೊತೆಗಿನ ಮೈತ್ರಿ ಶಿವಸೇನೆ (ಯುಬಿಟಿ) ಮೇಲೆ ಮಾತ್ರವಲ್ಲದೆ, ಮಹಾರಾಷ್ಟ್ರದ ಇಂಡಿಯಾ ಒಕ್ಕೂಟವಾದ ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮರಾಠಿ ಮಾತನಾಡದ ಜನರ ವಿರುದ್ಧ ಎಂಎನ್‌ಎಸ್ ಕಾರ್ಯಕರ್ತರು ನಡೆಸುತ್ತಿರುವ ಅವಮಾನಕರ ವರ್ತನೆ ಮತ್ತು ಮುಸ್ಲಿಮರ ವಿರುದ್ಧ ಅವರ ಧೋರಣೆಯಿಂದಾಗಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ರಾಜಕೀಯವಾಗಿ ಲಾಭ ಪಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಜಕೀಯ ಮೈತ್ರಿ ಬಗ್ಗೆ ರಾಜ್ ಠಾಕ್ರೆ ಜೊತೆ ಉದ್ಧವ್ ಮಾತುಕತೆ
ಒಮ್ಮೆ ಬಿಜೆಪಿಯ ಬೆಂಬಲಿಗರಾಗಿದ್ದ ತಿವಾರಿ ನಂತರ ಅವಿಭಜಿತ ಶಿವಸೇನೆಗೆ ಸೇರಿದರು. ಶಿವಸೇನೆ ವಿಭಜನೆಯ ನಂತರ ಶಿವಸೇನೆ (ಯುಬಿಟಿ) ಭಾಗವಾದರು.
“ಕಳೆದ 30 ವರ್ಷಗಳಿಂದ, ತಳಮಟ್ಟದ ಚಳುವಳಿಗೆ ಅಂಟಿಕೊಂಡಿರುವ ಕೃಷಿ ಕಾರ್ಯಕರ್ತನಾಗಿ, ನಾನು ನನ್ನ ಇಡೀ ಜೀವನವನ್ನು ಬಡ ರೈತರು, ಕೃಷಿ ಕಾರ್ಮಿಕರು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರ ಸೇವೆಯಲ್ಲಿ ಕಳೆದಿದ್ದೇನೆ. ಅದೇ ಕಾರಣಗಳಿಗಾಗಿ, ನೀವು ನನ್ನ ಕೈಯಲ್ಲಿ ಶಿವ ಬಂಧನವನ್ನು ಕಟ್ಟುವ ಅವಕಾಶವನ್ನು ನೀಡಿದ್ದೀರಿ. ನನಗೆ ನೀಡಲಾದ ಜವಾಬ್ದಾರಿಗಳನ್ನು ನಾನು ಪೂರ್ಣ ನಿಷ್ಠೆಯಿಂದ ಪೂರೈಸುತ್ತಿದ್ದೇನೆ. ಅದಕ್ಕೆ ನೀವು ಸಾಕ್ಷಿಯಾಗಿದ್ದೀರಿ” ಎಂದು ಪತ್ರದಲ್ಲಿ ಬರೆಯಲಾಗಿದೆ.
“ನಾನು ಇಂದು ನಿಮಗೆ ಈ ಮುಕ್ತ ಪತ್ರವನ್ನು ಬರೆಯುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ, ನಮ್ಮ ಶಿವಸೇನೆ ಮತ್ತು ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್, ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಚುನಾವಣಾ ಮೈತ್ರಿ ಮಾಡಿಕೊಳ್ಳಲಿವೆ ಎಂದು ಮಾಧ್ಯಮಗಳು ವರದಿ ಮಾಡಿರುವುದು ಆಗಿದೆ. ಈ ಮೈತ್ರಿಯು ಮುಂದಿನ ದಿನಗಳಲ್ಲಿ ನಮ್ಮ ಶಿವಸೇನೆ (ಯುಬಿಟಿ) ಮತ್ತು ದೀರ್ಘಾವಧಿಯಲ್ಲಿ ಎಂವಿಎಗೆ ಹೇಗೆ ಹಾನಿಕಾರಕವಾಗಲಿದೆ ಎಂಬುದನ್ನು ನಿಮಗೆ ತಿಳಿಸಲು ನಾನು ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಇನ್ನು 2024ರ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡಿದ ತಿವಾರಿ, “ಹಿಂದಿ-ಮುಸ್ಲಿಂ-ದಲಿತ ಮತ್ತು ಒಬಿಸಿ ಮತದಾರರು ಶಿವಸೇನೆ (ಯುಬಿಟಿ) ಗೆ ಮತ ಹಾಕಿದ್ದಾರೆ. ಅದಕ್ಕಾಗಿಯೇ, ಪಕ್ಷವು ಮುಂಬೈ ಮಹಾನಗರ ಪ್ರದೇಶದಲ್ಲಿ 20 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಗೆದ್ದಿದೆ. ಈಗ ನಾನು ಶಿವಸೇನೆಯ ಸೈನಿಕನಾಗಿ, ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ. ಈ ಸಂಗತಿಯನ್ನು ಸಮಯೋಚಿತವಾಗಿ ನಿಮಗೆ ಪ್ರಸ್ತುತಪಡಿಸುವುದು ನನ್ನ ಕರ್ತವ್ಯವೆಂದು ಪರಿಗಣಿಸುತ್ತೇನೆ” ಎಂದಿದ್ದಾರೆ.
ಇನ್ನು ಮರಾಠಿಯೇತರ ಜನರ ಮೇಲೆ ದಾಳಿಯನ್ನು ಖಂಡಿಸಿರುವ ತಿವಾರಿ, “ಹಿಂದಿ ಮಾತನಾಡುವ ಮತ್ತು ಇತರ ಭಾಷಾ ಅಲ್ಪಸಂಖ್ಯಾತರು, ಮುಸ್ಲಿಂ ನಾಗರಿಕರ ವಿರುದ್ಧ ನಿರಂತರ ಹೇಳಿಕೆಗಳನ್ನು ನಿಲ್ಲಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಂವಿಎ-ಇಂಡಿಯಾ ಒಕ್ಕೂಟದ ಬೆನ್ನೆಲುಬಾಗಿರುವ ಈ ದೊಡ್ಡ ಮತದಾರರು ದೂರವಾಗದಂತೆ ಕ್ರಮಕೈಗೊಳ್ಳಬೇಕು” ಎಂದು ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.
