ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವತಿಯಿಂದ ಉಡುಪಿ ತಾಲೂಕಿನ ನೇಜಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಲ್-ಫುರ್ಖಾನ್ ವಿಶೇಷ ಮಕ್ಕಳ ಶಾಲೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಸಂಸ್ಥಾಪಕರ ದಿನಾಚರಣೆ ಮತ್ತು ಸ್ವಾತಂತ್ರ್ಯ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ವಿಶೇಷ ಮಕ್ಕಳು ರಾಷ್ಟ್ರ ಧ್ವಜಾರೋಹಣ ಮಾಡಿ ದೇಶಪ್ರೇಮ ಗೀತೆಗಳನ್ನು ಹಾಡಿ ಎಲ್ಲರ ಮನ ಗೆದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷರಾದ ಚಾರ್ಲ್ಸ್ ಅಂಬ್ಲರ್ ಮಾತನಾಡುತ್ತಾ, ದೇವರು ನಮ್ಮನ್ನು ಹುಟ್ಟಿಸಿದ ಹಾಗೆ ಈ ಮಕ್ಕಳನ್ನು ಸಹ ಹುಟ್ಟಿಸಿದ್ದಾನೆ. ಇವರನ್ನು ಅಂಗವಿಕಲರು ಎಂದು ಹೇಳಬಾರದು. ಇವರಲ್ಲಿಯೂ ತುಂಬಾ ಪ್ರತಿಭೆಯಿದೆ. ಇವರನ್ನು ವಿಶೇಷ ಮಕ್ಕಳು ಎಂದು ಹೇಳಬೇಕು. ಇಂತಹ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಶಾಲೆಯ ಪೋಷಕರಾದ ದಿಲ್ದಾರ್ ಫಝ್ಲುರ್ರಹ್ಮಾನ್ ಇವರು ಬಂದ ಅತಿಥಿಗಳನ್ನು ಸ್ವಾಗತಿಸಿ, ಇಂತಹ ಶಾಲೆಯ ಅಗತ್ಯತೆ ಮತ್ತು ಮಕ್ಕಳ ಪ್ರತಿಭೆ ಬಗ್ಗೆ ವಿವರಿಸಿದರು. ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಮಾಜಿ ಅಧ್ಯಕ್ಷರಾದ ಖತೀಬ್ ಅಬ್ದುಲ್ ರಶೀದ್ ಯವರು ಮಕ್ಕಳ ಉತ್ಸಾಹವನ್ನು ಹೆಚ್ಚಿಸಲು ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೂ ಉಡುಗೊರೆಗಳನ್ನು ಹಂಚಿದರು. ವಿಶೇಷ ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವೆಂದು ಸಂಘಟಕರು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಬೈಕಾಡಿ ಹುಸೇನ್ ಸಾಹೆಬ್, ನಿಕಟಪೂರ್ವ ಅಧ್ಯಕ್ಷರಾದ ಇಸ್ಮಾಯಿಲ್ ಹುಸೈನ್ ಕಟ್ಪಾಡಿ, ಕಾರ್ಯದರ್ಶಿ ಟಿ.ಎಂ. ಝಫ್ರುಲ್ಲಾ , ಕೋಶಾಧಿಕಾರಿ ಸಯ್ಯದ್ ಎಂ.ಎಸ್. ಖಾನ್, ಸಂಪರ್ಕ ಪತ್ರಿಕೆಯ ಸಂಪಾದಕ ಜೆರಾಲ್ಡ್ ಪಿಂಟೊ, ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಶಾಲೆಯ ಅಧ್ಯಾಪಕರು ಹಾಗೂ ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗುವಂತೆ ಸಹಕರಿಸಿದರು.