ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ವಿಚಾರವಾಗಿ ಹಾಸನ ಮಹಾ ನಗರ ಪಾಲಿಕೆ ಮೇಯರ್ ಎಂ. ಚಂದ್ರೇಗೌಡ ಅವರನ್ನು ಕೌನ್ಸಿಲರ್ ಸ್ಥಾನದಿಂದ ಅನರ್ಹಗೊಳಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ರಮೇಶ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಚಂದ್ರೇಗೌಡ ಅವರು ಮೇಯರ್ ಸ್ಥಾನದ ಜತೆಗೆ ಸದಸ್ಯತ್ವವನ್ನು ಸಹ ಕಳೆದುಕೊಂಡಿದ್ದಾರೆ.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ರಮೇಶ್ ಅವರು, “ಚಂದ್ರೇಗೌಡ ನಗರಸಭೆಯ ಸಭೆಯಲ್ಲಿ ಪಕ್ಷದ ನಿರ್ದೇಶನವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿರುವುದು ಹಾಗೂ ಪ್ರಸ್ತುತ ಹಾಸನ ನಗರಸಭೆಯನ್ನು ಹಾಸನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಕಾರ್ಪೋರೇಷನ್ ಅಧಿನಿಯಮ 1976ರ ಪ್ರಕರಣ 503ರಂತೆ ನಗರಸಭೆಯ ಸದಸ್ಯರೇ ಮಹಾನಗರ ಪಾಲಿಕೆ ಸದಸ್ಯರಾಗಿ ಮತ್ತು ಅಧ್ಯಕ್ಷರು ಮೇಯರ್ ಆಗಿ ಮತ್ತು ಉಪಾಧ್ಯಕ್ಷರು ಉಪಮೇಯರ್ ಆಗಿ ಮುಂದುವರೆದಿರುವುದರಿಂದ ಮತ್ತು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987ರ ಪ್ರಕರಣ 4ರಂತೆ ಮುನ್ಸಿಪಲ್ ಕಾರ್ಪೋರೇಷನ್ ಸಂದರ್ಭದಲ್ಲಿ ಪಕ್ಷಾಂತರದ ಆಧಾರದ ಮೇಲೆ ಅನರ್ಹತೆಗೆ ಸಂಬಂಧಪಟ್ಟ ಪ್ರಶ್ನೆಯ ಬಗ್ಗೆ ತೀರ್ಮಾನ ವನ್ನು ಕೆಳಕಂಡಂತೆ ಆದೇಶಿಸಲಾಗಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಪ್ರಾದೇಶಿಕ ಆಯುಕ್ತರಿಗೆ ಅಧಿಕಾರವನ್ನು ನೀಡಿರುವುದರಿಂದ ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ ಚಂದ್ರೇಗೌಡ, ಸದಸ್ಯರು ಹಾಗೂ ಅಧ್ಯಕ್ಷರು ನಗರಸಭಾ ಹಾಸನ ಹಾಲಿ ಮೇಯರ್, ಹಾಸನ ಮಹಾನಗರ ಪಾಲಿಕೆ, ಹಾಸನ ರವರು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987ರ ಪ್ರಕರಣ 3(1)(ಬಿ) ರಂತೆ ರಾಜಕೀಯ ಪಕ್ಷದಿಂದ ನೀಡಿರುವ ನಿರ್ದೇಶನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದು ಕಂಡು ಬಂದಿರುವುದರಿಂದ ಸದರಿಯವರ ಸ್ಥಾನವನ್ನು ಅನರ್ಹ ಗೊಳಿಸಿದೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನ | ಆರೋಗ್ಯ, ಶಿಕ್ಷಣಕ್ಕಾಗಿ ಹೋರಾಟ ಮಾಡಬೇಕಾದಂತಹ ದುಃಸ್ಥಿತಿ ಬಂದೊದಗಿದೆ: ಸಿಐಟಿಯು ಧರ್ಮೇಶ್
ಇನ್ನು ಉಪ ಮೇಯರ್ ಆಗಿದ್ದ ಹೇಮಾವತಿ ಕಮಲ್ ಅವರು ಮೇಯರ್ ಸ್ಥಾನ ಅಲಂಕರಿಸಲಿದ್ದಾರೆ.