ಅಫಜಲಪುರ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಭೋಸಗಾ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಲಕ್ಷ್ಮಿಬಾಯಿ ಬಿರಾದಾರ (55) ಮೃತರು ಎಂದು ತಿಳಿದು ಬಂದಿದೆ.
ವಿಷಯ ತಿಳಿದು ತಹಸೀಲ್ದಾರ್ ಸಂಜುಕುಮಾರ ದಾಸರ ಭೋಸಗಾ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪಂಚನಾಮೆ ಮಾಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಅವರಿಗೆ ಪರಿಹಾರ ನೀಡಲಾಗುವುದುʼ ಎಂದರು.
ಕಳೆದು ಒಂದು ವಾರದಿಂದ ತಾಲ್ಲೂಕಿನಲ್ಲಿ ಕೆಲವೆಡೆ ಧಾರಾಕಾರ ಹಾಗೂ ಜಿಟಿಜಿಟಿ ಮಳೆಯಾಗುತ್ತಿದೆ. ಈಗಾಗಲೇ 50 ಮನೆಗಳ ಗೋಡೆಗಳು ಮಳೆ ನೀರಲ್ಲಿ ನೆನೆದು ಬಿದ್ದಿರುವ ಬಗ್ಗೆ ವರದಿಯಾಗಿದೆ. ನಿರಂತರ ಮಳೆಯಾಗುತ್ತಿರುವುದರಿಂದ ಮಣ್ಣಿನ ಗೋಡೆಗಳು ನೆನೆದು ಕುಸಿದು ಬೀಳುತ್ತಿವೆ. ಜನರು ಎಚ್ಚರಿಕೆಯಿಂದ ಇರಬೇಕು. ಮಳೆ ಬೀಳುವಂಥ ಶಿಥಿಲ ಮನೆಗಳು, ಮಣ್ಣಿನ ಮನೆಗಳಲ್ಲಿ ಜನರು ವಾಸ ಮಾಡಬಾರದು ಎಂದು ಸಲಹೆ ನೀಡಿದರು.
ಇದನ್ನೂ ಓದಿ : ರಾಜ್ಯದಲ್ಲಿ 31 ತಿಂಗಳಲ್ಲಿ 10,510 ಪೋಕ್ಸೋ ಪ್ರಕರಣ : 162 ಮಂದಿಗಷ್ಟೇ ಶಿಕ್ಷೆ!