ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪನಾರ್ಸಾ, ಟಕೋಲಿ ಹಾಗೂ ನಾಗವೈನ್ ಪ್ರದೇಶಗಳಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯ ಮಂಡಿ-ಕುಲ್ಲು ಬಳಿ ಭಾರೀ ಪ್ರವಾಹ ಉಂಟಾಗಿದೆ. ಪ್ರವಾಹದಿಂದ ಭೀಕರ ಅನಾಹುತಗಳು ಸಂಭವಿಸಿವೆ. ಮಳೆ-ಪ್ರವಾಹದಿಂದಾಗಿ ಕಳೆದ ಎರಡೂವರೆ ತಿಂಗಳಲ್ಲಿ 261 ಮಂದಿ ಸಾವನ್ನಪ್ಪಿದ್ದಾರೆ.
ಭಾನುವಾರದ ಪ್ರವಾಹದ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು ಮಂಡಿಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸಚಿನ್ ಹಿರೇಮಠ್ ತಿಳಿಸಿದ್ದಾರೆ. ಹಾನಿಗೊಳಗಾದ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಕಣ್ಗಾವಲು ಕಾಯುತ್ತಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸದಂತೆ ಎಚ್ಚರಿಕೆ ವಹಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಹಲವಾರು ಸ್ಥಳಗಳು ಮಾನ್ಸೂನ್ ಮಳೆ ಅಬ್ಬರ ಹೆಚ್ಚಾಗಿದೆ. ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (HPSDMA) ಪ್ರಕಾರ, ಜೂನ್ 20ರಿಂದ ಆಗಸ್ಟ್ 16 ರವರೆಗೆ ರಾಜ್ಯದಲ್ಲಿ 261 ಸಾವುಗಳು ಸಂಭವಿಸಿವೆ.
ಮಳೆಯಿಂದಾಗಿ ರಾಜ್ಯದಲ್ಲಿ ಭೂಕುಸಿತ, ಹಠಾತ್ ಪ್ರವಾಹ, ಮುಳುಗಡೆ, ವಿದ್ಯುತ್ ಆಘಾತ ಹಾಗೂ ಮನೆ ಕುಸಿತ ಸಂಭವಿಸುತ್ತಿವೆ. ಈ ಘಟನೆಗಳಲ್ಲಿ 136 ಜನರು ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತಗಳಲ್ಲಿ 125 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರಾ ಜಿಲ್ಲೆ ಒಂದರಲ್ಲೇ ಮಳೆಯಿಂದಾಗಿ 28 ಸಾವುಗಳು ಸಂಭವಿಸಿವೆ. ಮಂಡಿ ಜಿಲ್ಲೆಯಲ್ಲಿ 26 ಸಾವುಗಳು, ಚಂಬಾ ಜಿಲ್ಲೆಯಲ್ಲಿ 10 ಹಾಗೂ ಕುಲ್ಲು ಜಿಲ್ಲೆಯಲ್ಲಿ 11 ಸಾವುಗಳು ಸಂಭವಿಸಿವೆ.
ಮಳೆ ಪರಿಣಾಮದಿಂದ ಹಿಮಾಚಲದಲ್ಲಿ 2,14,457 ಕೋಟಿ ರೂ. ಮೌಲ್ಯದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳು ನಾಶವಾಗಿವೆ ಎಂದು ವರದಿಯಾಗಿದೆ.