ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ಅವರ ಗುರುಗ್ರಾಮದಲ್ಲಿರುವ ನಿವಾಸದ ಹೊರಗೆ ಅಪರಿಚಿತರು ಭಾನುವಾರ ಮುಂಜಾನೆ ಗುಂಡು ಹಾರಿಸಿದ್ದಾರೆ. ಗುಂಡುಗಳು ಮನೆಯ ಹೊರಗೆ ಭೂಮಿಗೆ ಮತ್ತು ಮೊದಲ ಮಹಡಿಗೆ ತಗುಲಿವೆ.
ಬೆಳಿಗ್ಗೆ ಸುಮಾರು 5.30ರಿಂದ 6 ಗಂಟೆಯ ನಡುವೆ ಗುಂಡಿನ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ಮೂವರು ಸೆಕ್ಟರ್ 57ರಲ್ಲಿರುವ ಯಾದವ್ ಅವರ ಮನೆಯ ಮೇಲೆ 25ಕ್ಕೂ ಅಧಿಕ ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಹಾವಿನ ವಿಷ ಪ್ರಕರಣ | ಬಲಪಂಥೀಯ ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ
ಎರಡನೇ ಮತ್ತು ಮೂರನೇ ಮಹಡಿಯಲ್ಲಿ ವಾಸಿಸುವ ಯಾದವ್ ಆ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ದಾಳಿ ನಡೆದಾಗ ಅವರ ಕೆಲವು ಕುಟುಂಬ ಸದಸ್ಯರು ಒಳಗೆ ಇದ್ದರು. ಯಾರಿಗೂ ಗಾಯಗಳಾಗಿಲ್ಲ. ಎಲ್ವಿಶ್ ಪ್ರಸ್ತುತ ಹರಿಯಾಣದ ಹೊರಗಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಗುರುಗ್ರಾಮ ಪೊಲೀಸ್ ಅಧಿಕಾರಿ ಸಂದೀಪ್ ಕುಮಾರ್, “ಗುರುಗ್ರಾಮದ ಸೆಕ್ಟರ್ 57ರಲ್ಲಿರುವ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಅವರ ನಿವಾಸ ಹೊರಗೆ ಮೂವರು ಮುಸುಕುಧಾರಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಬೆಳಿಗ್ಗೆ 5:30 ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಡಜನ್‌ಗೂ(12ಕ್ಕೂ ಅಧಿಕ) ಹೆಚ್ಚು ಸುತ್ತು ಗುಂಡು ಹಾರಿಸಲಾಗಿದೆ. ಈ ವೇಳೆ ಎಲ್ವಿಶ್ ಯಾದವ್ ಮನೆಯಲ್ಲಿ ಇರಲಿಲ್ಲ” ಎಂದು ತಿಳಿಸಿದ್ದಾರೆ.
VIDEO | Gurugram: YouTuber Elvish Yadav’s father, Ram Avtar Yadav, claims that three miscreants fired around 25–30 rounds at their residence in Gurugram. He says, “The police administration is doing its job well. Our family was present at home when the Firing incident happened. I… pic.twitter.com/4gcWnPOth9
— Press Trust of India (@PTI_News) August 17, 2025
ಸದ್ಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಕುಟುಂಬದಿಂದ ಔಪಚಾರಿಕ ದೂರು ದಾಖಲಾದ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು “ಘಟನೆಗೂ ಮುನ್ನ ಎಲ್ವಿಶ್‌ಗೆ ಯಾವುದೇ ಬೆದರಿಕೆಗಳು ಬಂದಿಲ್ಲ. ನಾವು ಮಲಗಿದ್ದಾಗ ದಾಳಿಕೋರರು ಬೈಕ್‌ನಲ್ಲಿ ಬಂದು ಗುಂಡು ಹಾರಿಸಲು ಪ್ರಾರಂಭಿಸಿದರು. ಮೂವರು ಮುಸುಕುಧಾರಿಗಳು ಇದ್ದರು. ಒಬ್ಬರು ಬೈಕ್‌ನಲ್ಲಿ ಕುಳಿತಿದ್ದರು. ಉಳಿದ ಇಬ್ಬರು ಕೆಳಗೆ ಇಳಿದು ಮನೆಯ ಮೇಲೆ ಗುಂಡು ಹಾರಿಸಿದರು. ಅವರು ಸುಮಾರು 25 ರಿಂದ 30 ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಪ್ರಸ್ತುತ ಎಲ್ವಿಶ್ ಕೆಲಸದ ನಿಮಿತ್ತ ನಗರದಿಂದ ಹೊರಗಿದ್ದಾನೆ” ಎಂದು ತಂದೆ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರೇವ್ ಪಾರ್ಟಿಗಾಗಿ ಹಾವಿನ ವಿಷ: ಬಲಪಂಥೀಯ ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಎಫ್‌ಐಆರ್
ವಿದೇಶಿಯರನ್ನು ಆಹ್ವಾನಿಸಿ, ವಿಷಕಾರಿ ಹಾವುಗಳ ವಿಷವನ್ನು ಬಳಸಿಕೊಂಡು ರೇವ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ, ಯೂಟ್ಯೂಬರ್ ಎಲ್ವಿಶ್ ಯಾದವ್ ಅವರನ್ನು ನೋಯ್ಡಾ ಪೊಲೀಸರು ಕಳೆದ ವರ್ಷ ಮಾರ್ಚ್‌ನಲ್ಲಿ ಬಂಧಿಸಿದ್ದರು. ಸದ್ಯ ಎಲ್ವಿಶ್ ಜಾಮೀನು ಮೇಲೆ ಹೊರಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
2023ರ ನವೆಂಬರ್ ತಿಂಗಳಲ್ಲಿ ನೋಯ್ಡಾದಲ್ಲಿ ಆಯೋಜನೆಗೊಂಡಿದ್ದ ರೇವ್ ಪಾರ್ಟಿಗೆ ದಾಳಿ ನಡೆಸಿ ನೋಯ್ಡಾ ಪೊಲೀಸರು ಐವರನ್ನು ಬಂಧಿಸಿದ್ದರು. ಈ ವೇಳೆ ಐದು ನಾಗರ ಹಾವು ಸೇರಿ ಒಟ್ಟಾಗಿ ಒಂಬತ್ತು ಹಾವುಗಳನ್ನು ಮತ್ತು ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಅದು ಮಾತ್ರವಲ್ಲದೆ ಎಲ್ವಿಶ್ ಯಾದವ್ ಮತ್ತು ಅವರ ಸಹಚರರು ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
