ಪರಿಶಿಷ್ಟ ಜಾತಿ ಜನಾಂಗದವರಿಗೆ ಯಥಾವತ್ತಾಗಿ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯಿಸಿ, ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದು, 2025, ಆಗಸ್ಟ್ 18, ಸೋಮವಾರ ಬೆಳಿಗ್ಗೆ 10 ಘಂಟೆಗೆ ಹರಿಹರ ನಗರದ ಎ.ಕೆ ಕಾಲೋನಿಯಿಂದ ಕಾಲ್ನಡಿಗೆಯೊಂದಿಗೆ ಹೊರಟು ತಹಶೀಲ್ದಾರರ ಕಚೇರಿ ತಲುಪಿ, ಕಛೇರಿ ಮುಂಬಾಗ ಪ್ರತಿಭಟನೆ ಮತ್ತು ಧರಣಿ ನಡೆಸಲಾಗುವುದು ಎಂದು ದಸಂಸ ಮುಖಂಡರು ಹರಿಹರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹರಿಹರದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು,”ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಒಳಮೀಸಲಾತಿಯನ್ನು ಜಾರಿ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಹರಿಹರ ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಂಡಿರುತ್ತೇವೆ. ಕಳೆದ 32 ವರ್ಷಗಳಿಂದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯವು ಮೀಸಲಾತಿಯನ್ನು ಪಡೆಯುವುದರಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಹೋರಾಟ ನಡೆಸಿದ್ದರಿಂದ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಚಿಸಿದ ಸರ್ಕಾರಕ್ಕೆ ಮಾದಿಗ ಸಮುದಾಯಕ್ಕೆ ಶೇ. 63 ರಷ್ಟು ಒಳಮೀಸಲಾತಿ ಕೊಡಬೇಕೆಂದು ವರದಿ ಸಲ್ಲಿಸಿದೆ. ಅದೇ ರೀತಿಯಾಗಿ ಮಾಧುಸ್ವಾಮಿ ನೇತೃತ್ವದ ಉಪ ಸಮಿತಿಯು ಕೂಡ ಮಾದಿಗ ಸಮುದಾಯ ಪರಿಶಿಷ್ಟ ಜಾತಿ ಜನಾಂಗದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿದ್ದು, ಶೇ. 63 ಒಳಮೀಸಲಾತಿಯನ್ನು ಕೊಡಬೇಕೆಂದು ವರದಿ ಸಲ್ಲಿಸಿದೆ” ಎಂದು ತಿಳಿಸಿದರು.
“ಆದರೆ ಈಗಿನ ಸಿದ್ದರಾಮಯ್ಯನವರ ಸರಕಾರ ಎರಡೂ ವರದಿಗಳನ್ನು ಬದಿಗಿಟ್ಟು ನ್ಯಾ. ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಮತ್ತೊಂದು ಆಯೋಗವನ್ನು ರಚಿಸಿದ್ದು, ನ್ಯಾ. ನಾಗಮೋಹನದಾಸ್ ಆಯೋಗವು ಕೂಡ ಶೇ.6ರಷ್ಟು ಮಾದಿಗ, ಹಾಗೂ ಹೊಲೆಯ ಶೇ.5ರಂತೆ ಮತ್ತು ಇತರರಿಗೆ ಕೆಲವು ಶೇಕಡವಾರು ವಿಂಗಡಿಸಿ ವರದಿ ಕೊಟ್ಟಿರುವಂತೆ ಯಥಾವತ್ತಾಗಿ ಯಾರದೇ ಒತ್ತಡಕ್ಕೂ ಮಣಿಯದೇ ಸರಕಾರವು ಈ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ” ಎಂದು ಆಗ್ರಹಿಸಿದರು.
“ಹರಿಹರ ತಾಲೂಕಿನ ಮಾದಿಗ ಸಮಾಜದ ಮುಖಂಡರು ಹಾಗೂ ಹರಿಹರ ತಾಲೂಕಿನ ದಲಿತ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು ನಮ್ಮ ಸಂಘಟನೆಯ ಹೋರಾಟದಲ್ಲಿ ಭಾಗಿಯಾಗಿ ಸಹಕರಿಸಬೇಕು. ಹಾಗೂ ಒಳಮೀಸಲಾತಿ ಪರವಾದ ಎಲ್ಲಾ ಸಂಘ ಸಂಸ್ಥೆಯ ಮುಖಂಡರು ಹೋರಾಟಕ್ಕೆ ಬೆಂಬಲ ನೀಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ವಾತಂತ್ರ್ಯೋತ್ಸವ ದಿನ ಒಳಮೀಸಲಾತಿ ವಿಳಂಬ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಆಕ್ರೋಶ; ದಲಿತ ಮುಖಂಡರ ಬಂಧನ
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹನುಮಂತಪ್ಪ, ಎಕೆ ಪ್ರಕಾಶ್, ಮಂಜಣ್ಣ, ಕರಿಬಸಪ್ಪ, ತಾಲೂಕು ಸಂಚಾಲಕ ಆರ್ ಶ್ರೀನಿವಾಸ್, ಪಕ್ಕೀರೇಶ್ ಯಾದವ್,ಎ.ಕೆ. ನಾಗಪ್ಪ, ಪ್ರವೀಣ, ಕೊಟ್ರೇಶ್, ತಿಪ್ಪೇಶ್, ದೇವರೆಡ್ಡಿ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.