ಮೈಸೂರಿನ ಕನ್ನಡ ಪರ ಹೋರಾಟಗಾರ ಹಾಗೂ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯ ಸ್ಥಾಪಕರಲ್ಲೊಬ್ಬರಾದ ಸ. ರ. ಸುದರ್ಶನ (73) ಭಾನುವಾರ ಬೆಳಿಗ್ಗೆ ಹೃದಯಾಘಾತದಿಂದ ವಿಜಯನಗರದ ತಮ್ಮ ನಿವಾಸದಲ್ಲಿ ನಿಧನರಾದರು.
ಐವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಕನ್ನಡ ಚಳವಳಿಯಲ್ಲಿ ಸುದರ್ಶನ ಪಾಲ್ಗೊಂಡರು. ಅಂದಿನಿಂದ ಇಂದಿನವರೆಗೆ ಸತತವಾಗಿ ಕನ್ನಡ ಚಳವಳಿಯಲ್ಲಿ ಭಾಗಿ. ಎಂಬತ್ತರ ರ ದಶಕದಲ್ಲಿ ಪ್ರಾರಂಭವಾದ ಗೋಕಾಕ್ ಚಳವಳಿಯಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಆರಂಭದಿಂದಲೂ ಭಾಗಿ. ಮೂರು ದಿನಗಳ ಬಂಧನ. ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಂದು ಆಯ್ಕೆಯಾಗಿ, ಇಂದಿನವರೆಗೂ ಮುಂದುವರಿಕೆಯಲ್ಲಿದ್ದರು.
ಸರಕಾರದ ವತಿಯಿಂದ ಕನ್ನಡಕ್ಕೆ ಕುತ್ತು ಬಂದ ಬಹುತೇಕ ಸಂದರ್ಭಗಳಲ್ಲಿ ಹೋರಾಟ. ಹಲವಾರು ಧರಣಿಗಳು, ಪ್ರತಿಭಟನೆಗಳು ಮತ್ತಿತರ ವಿಧಾನಗಳು. ಹಲವು ಬಾರಿ ಬಂಧನ, ಬಿಡುಗಡೆ. ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಗೆಳೆಯರು ಆರಂಭಿಸಿದ ಚೇತನ ಕನ್ನಡ ಸಂಘದ ಕಾರ್ಯದರ್ಶಿ. ಒಂದು ದಶಕಗಳಿಗೂ ಹೆಚ್ಚು ಕಾಲ ವಿಶಿಷ್ಟವಾದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಎಪ್ಪತ್ತರ ದಶಕದಲ್ಲಿ ಮೈಸೂರಿನಲ್ಲಿ ಮನೆ ಮಾತಾಗಿದ್ದ ಸಂಘ. ನಾಟಕ, ಚಳವಳಿ, ಪುಸ್ತಕ ಯಾತ್ರೆ, ಸಮೀಕ್ಷೆಗಳಂತಹ ಕಾರ್ಯಕ್ರಮಗಳ ಮೂಲಕ ಹೊಸ ಛಾಪನ್ನು ಮೂಡಿಸಿದ ವ್ಯಕ್ತಿ.
ಮೈಸೂರು ವಿಶ್ವವಿದ್ಯಾನಿಲಯದ ಭೂ ವಿಜ್ಞಾನ ಸ್ನಾತಕೋತ್ತರ ಪದವಿ (ಎಂ ಎಸ್ ಸಿ ಭೂ ವಿಜ್ಞಾನ) ಪಡೆದ ಅವರು, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೂ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರಿಸಿ ಮೂರನೇ ರ್‍ಯಾಂಕ್ ಪಡೆ ದಿದ್ದರು. 40 ವರ್ಷಗಳ ಹಿಂದೆಯೇ ಪ್ರಸಿದ್ಧ ವಿಜ್ಞಾನ ಲೇಖಕ ಟಿ. ಆರ್. ಅನಂತರಾಮು ಅವರ ಜೊತೆಗೂಡಿ ಪದವಿ ಮಟ್ಟದ ವಿದ್ಯಾರ್ಥಿಗಳಿಗಾಗಿ ‘ಬದಲಾಗುತ್ತಿರುವ ಭೂಮಿ` ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಪ್ರಸಿದ್ಧ ಭೂ ವಿಜ್ಞಾನ ಲೇಖಕರು ಹಾಗೂ ಪ್ರಾಧ್ಯಾಪಕರು ಆಗಿದ್ದ ದಿವಂಗತ ಡಾ. ಬಿ. ವಿ. ಗೋವಿಂದರಾಜುಲು ಅವರೊಂದಿಗೆ ಅನುವಾದಿಸಿದ “ಭೂ ಸ್ವರೂಪ ವಿಜ್ಞಾನ’ ಎಂಬ ಸ್ನಾತಕೋತ್ತರ ಮಟ್ಟದ ಕೃತಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟಣೆಗೊಂಡಿಟ್ಟು. ಪ್ರಸ್ತುತ ‘ಭೂ ವಿಜ್ಞಾನ ವಿಷಯ ವಿಶ್ವಕೋಶ’ದ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಎಲ್‌ಎಲ್‌ಬಿ ಪರೀಕ್ಷೆಯಲ್ಲೂ ಕನ್ನಡದಲ್ಲಿ ಉತ್ತರಿಸಿದವರು. ಅವರು ಸಂಕಲಿಸಿದ ‘ಕಾನೂನು ಪದಕೋಶ’ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಪ್ರಕಟವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಯೋಜನೆ ಅಡಿಯಲ್ಲಿ ಗೌರವ ಸಂಪಾದಕರಾಗಿ ನಾಲ್ಕು ಸಂಪುಟಗಳ ಇಂಗ್ಲಿಷ್ ಕನ್ನಡ ನಿಘಂಟನ್ನು ಸಂಕ್ಷಿಪ್ತಗೊಳಿಸಿ, 25000 ಪದಗಳಿರುವ ‘ ಸಂಕ್ಷಿಪ್ತ ಇಂಗ್ಲಿಷ್ ಕನ್ನಡ ನಿಘಂಟು’ ಸಿದ್ಧಪಡಿಸಿದ್ದು, ಅಚ್ಚಿನಲ್ಲಿದೆ. ಪ್ರಾರಂಭದಲ್ಲಿ ಸ್ವತಃ ಪ್ರಕಟಿಸಿದ ‘ಶಾಲಾ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ಕನ್ನಡ ನಿಘಂಟು’ ನಂತರ ವಿವಿಧ ಪ್ರಕಾಶಕರಿಂದ 15ನೇ ಮುದ್ರಣವನ್ನು ಕಂಡಿದೆ.
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಇಂಗ್ಲಿಷ್ ಕನ್ನಡ ನಿಘಂಟಿನ ಸಹಾಯಕ ಸಂಪಾದಕರಾಗಿ ಮೊದಲ ನೇಮಕ. 14 ವರ್ಷಗಳ ಅನುಭವ. ನಂತರ, ಅದೇ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಬಡ್ತಿ. ಉಪನಿರ್ದೇಶಕನಾಗಿ 2014ರಲ್ಲಿ ನಿವೃತ್ತಿ. ಮೈಸೂರಿನ ಅರಸರು ಸ್ಥಾಪಿಸಿದ, ಕನ್ನಡ ನಾಡಿನ ಮೊಟ್ಟ ಮೊದಲ ಸರಕಾರಿ ಬಾಲಕಿಯರ ಶಾಲೆಯಾದ ಮಹಾರಾಣಿ ಮಾದರಿ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮದವರು ವಿವೇಕಾನಂದ ಸ್ಮಾರಕಕ್ಕಾಗಿ ಸರ್ಕಾರದಿಂದ ಪಡೆದುಕೊಂಡಾಗ ಶಾಲೆಯನ್ನು ಉಳಿಸಲು ಸುಮಾರು ಒಂದು ದಶಕಗಳ ಕಾಲ ನಡೆದ ಹೋರಾಟದ ಮುಂಚೂಣಿಯಲ್ಲಿ ಭಾಗಿ.
ಹಲವು ಸಾರಿ ಪ್ರತಿಭಟನೆ, ಬಂಧನ, ಬಿಡುಗಡೆ. ಗೋಕಾಕ್ ಚಳವಳಿಯ ನಂತರ ಕನ್ನಡಕ್ಕಾಗಿ ಒಂದು ಸೃಜನಾತ್ಮಕ ಕಾರ್ಯವನ್ನು ಕೈಗೊಳ್ಳಬೇಕೆಂಬ ಹಿರಿಯರು ಮತ್ತು ಗೆಳೆಯರ ಆಶಯದಂತೆ ಸ್ಥಾಪಿತವಾದ ನೃಪತುಂಗ ಕನ್ನಡ ಶಾಲೆಯ ಸ್ಥಾಪಕ ಧರ್ಮದರ್ಶಿಗಳಲ್ಲೊಬ್ಬರು. ನೃಪತುಂಗ ಕನ್ನಡ ಶಾಲೆ ಮೈಸೂರಿನ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 1991ರಲ್ಲಿ ಪ್ರಾರಂಭವಾದ ಶಾಲೆ. ಸಂಪೂರ್ಣ ಕನ್ನಡ ಮಾಧ್ಯಮ ಶಾಲೆ. ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಹತ್ತಿಪ್ಪತ್ತು ಮಕ್ಕಳು ಕಡಿಮೆಯಾಗುತ್ತಿದ್ದರೆ, ಸದರಿ ಶಾಲೆಯಲ್ಲಿ ಹತ್ತಿಪ್ಪತ್ತು ಮಕ್ಕಳು ಹೆಚ್ಚಾಗುತ್ತಿದ್ದಾರೆ. ಸ್ವಂತ ಕಟ್ಟಡ, ತನ್ನದೇ ಆದ ರಂಗ ಮಂದಿರ ಹೊಂದಿದೆ. ಸುಮಾರು ಎರಡು ದಶಕಗಳಿಂದ ಇದೇ ಸಂಸ್ಥೆಯ ಕಾರ್ಯದರ್ಶಿ, ಪ್ರಸ್ತುತ ಉಪಾಧ್ಯಕ್ಷ.
ಈವರೆಗೆ ನವಸಾಕ್ಷರರು ಹಾಗೂ ಮಕ್ಕಳಿಗಾಗಿ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಮೂರು ವರ್ಷಗಳ ಕಾಲ ರಾಜ್ಯ ಸರ್ಕಾರದ ಕರ್ನಾಟಕ ವಿಜ್ಞಾನ ಅಕಾಡೆಮಿಯಲ್ಲಿ ಸದಸ್ಯನಾಗಿ ಕಾರ್ಯ ನಿರ್ವಹಣೆ. ಅಕಾಡೆಮಿ ವತಿಯಿಂದ ಪ್ರತಿ ವರ್ಷ ಕನ್ನಡ ವಿಜ್ಞಾನ ಸಮ್ಮೇಳನ ಮತ್ತು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಬದುಕಾಗಿ ಅಳವಡಿಸಿಕೊಂಡು ಲೇಖನ ಕೃಷಿ ಮಾಡಿದ ವಿಜ್ಞಾನ ಲೇಖಕರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಇಂಗ್ಲಿಷ್ ಕನ್ನಡ ವಿಜ್ಞಾನ ನಿಘಂಟು ಮೊದಲಾದವುಗಳ ಪ್ರಸ್ತಾವನೆ ಮಂಡಿಸಿ, ಪ್ರೇರಕನ ಪಾತ್ರ ನಿರ್ವಹಣೆ. ಗೋಕಾಕ್ ಚಳವಳಿ ಕುರಿತು ಬರೆದಿರುವ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಣೆಗೊಂಡಿದೆ.
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ನೀಡಬೇಕೆಂಬ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಭಾಗಿ. ಅದನ್ನು ಮೈಸೂರಿನಲ್ಲಿ ಉಳಿಸಬೇಕೆಂದು ನಡೆಯುತ್ತಿರುವ ಆಂದೋಲನದಲ್ಲಿ ಮುಂದಾಳತ್ವ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರಚಿತವಾಗಿದ್ದ ಜಿಲ್ಲಾ ಕನ್ನಡ ಕಾವಲು ಸಮಿತಿ ಸದಸ್ಯತ್ವ. ಸಮಿತಿ ಸರಿಯಾಗಿ ಕಾರ್ಯ ನಡೆಸಲಿಲ್ಲವೆಂದು ಪ್ರತಿಭಟಿಸಿ ರಾಜೀನಾಮೆ. ಅಧಿಕಾರಿಗಳ ಮನವಿಯ ಮೇರೆಗೆ ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಂಡು ನಂತರ ಹಲವಾರು ಕಚೇರಿಗಳಿಗೆ ಸಮಿತಿಯ ಸದಸ್ಯರೊಡನೆ ಭೇಟಿ, ತಪಾಸಣೆ. ಮೈಸೂರಿನಲ್ಲಿ ದಶಕಗಳಿಂದ ನಡೆಯುತ್ತಿರುವ ಕನ್ನಡ ನಾಮಫಲಕ ಚಳವಳಿಯಲ್ಲಿ ಮುಂದಾಳತ್ವ.
ಒಂದು ದಶಕದ ಹಿಂದೆ ರಾಜ್ಯದಲ್ಲಿ ಒಂದರಿಂದ ಏಳನೇ ತರಗತಿವರೆಗೆ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಬೇಕೆಂದು ಉಚ್ಚ ನ್ಯಾಯಾಲಯದಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಪ್ರಧಾನ ಕಾರ್ಯದರ್ಶಿಯಾಗಿ ಅರ್ಜಿದಾರನಾಗಿ ರಿಟ್ ಆಫ್ ಮ್ಯಾಂಡಮಸ್ ಸಲ್ಲಿಕೆ. ಶಿಕ್ಷಣ ಮಾಧ್ಯಮದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ದಾವೆಯಲ್ಲಿ ಮಧ್ಯಪ್ರವೇಶ ಅರ್ಜಿದಾರರಲ್ಲೊಬ್ಬರು ಇದಿಷ್ಟು ಸ. ರ. ಸುದರ್ಶನ ಅವರು ನಡೆದು ಬಂದ ದಾರಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಭ್ರಮದ ಜನಸ್ವಾತಂತ್ರ್ಯೋತ್ಸವ; ಸಂವಿಧಾನ ಸಂರಕ್ಷಣಾ ಪಡೆಗೆ ಚಾಲನೆ
ಮೈಸೂರಿನ ಚಿಂತಕರ ಚಾವಡಿ ಹಿರಿಯ ಚೇತನರೊಬ್ಬರನ್ನು ಕಳೆದುಕೊಂಡು ದುಃಖತಪ್ತವಾಗಿದೆ. ಕನ್ನಡ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಇವರ ಹೋರಾಟದ ಮಾದರಿ ಎಂದಿಗೂ ಯುವಕರಿಗೆ ಸ್ಮರಣಿಯವಾದದ್ದು.