ಕರ್ನಾಟಕದಾದ್ಯಂತ ಆಗಸ್ಟ್ 17ರಿಂದ 21ರವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಘೋಷಿಸಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 17 ಮತ್ತು 18ರಂದು ತೀವ್ರ ಮಳೆಯ ಸಾಧ್ಯತೆಯಿಂದ ರೆಡ್ ಅಲರ್ಟ್ ಜಾರಿಯಲ್ಲಿದೆ. ಆಗಸ್ಟ್ 19 ಮತ್ತು 20ರಂದು ಈ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಮತ್ತು ಕೊಡಗು ಜಿಲ್ಲೆಗಳಿಗೆ ಆಗಸ್ಟ್ 17-18ರಂದು ರೆಡ್ ಅಲರ್ಟ್ ಜಾರಿಯಿದ್ದು, ಆಗಸ್ಟ್ 19-20ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಮತ್ತು ಹಾಸನ ಜಿಲ್ಲೆಗಳಿಗೆ ಆಗಸ್ಟ್ 17ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಆಗಸ್ಟ್ 19ರಂದು ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ರೆಡ್ ಅಲರ್ಟ್, ಜೊತೆಗೆ ಕೊಡಗು, ಹಾಸನ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿಗೆ ಆರೆಂಜ್ ಅಲರ್ಟ್ ಜಾರಿಯಾಗಲಿದೆ. ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಿಗೆ ಆಗಸ್ಟ್ 17-19ರವರೆಗೆ ಆರೆಂಜ್ ಅಲರ್ಟ್ ಮತ್ತು ಆಗಸ್ಟ್ 20ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?
ಮೈಸೂರು ಮತ್ತು ಚಾಮರಾಜನಗರದಲ್ಲಿ ಆಗಸ್ಟ್ 17ರಂದು ಯೆಲ್ಲೋ ಅಲರ್ಟ್ ಜಾರಿಯಿದೆ. ಬೆಂಗಳೂರಿನಲ್ಲಿ ಆಗಸ್ಟ್ 21ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದ ಈ ಭಾರೀ ಮಳೆಯ ಸಾಧ್ಯತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ಆಗುಂಬೆಯಲ್ಲಿ 14 ಸೆಂ.ಮೀ, ಕಮ್ಮರಡಿ, ಗೇರುಸೊಪ್ಪ, ಶೃಂಗೇರಿಯಲ್ಲಿ ತಲಾ 10 ಸೆಂ.ಮೀ, ಸಿದ್ದಾಪುರ, ಕೊಪ್ಪ, ಧರ್ಮಸ್ಥಳ ಮತ್ತು ಭಾಗಮಂಡಲದಲ್ಲಿ ತಲಾ 7 ಸೆಂ.ಮೀ ಮಳೆಯಾಗಿದೆ.