ರಾಯಚೂರು ವಿಧಾನಸಭಾ ಕ್ಷೇತ್ರದ ಕುರುಬದೊಡ್ಡಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ತರಗತಿ ಕೊಠಡಿಗಳು, ಆಟದ ಮೈದಾನ, ಸಿಸಿ ರಸ್ತೆ ಹಾಗೂ ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ಭರವಸೆ ನೀಡಿದರು.
ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ಎಂಎಲ್‌ಸಿ ವಸಂತಕುಮಾರರಿಗೆ ಗ್ರಾಮದ ಮುಖಂಡರು ಮನವಿ ಪತ್ರ ಸಲ್ಲಿಸಿ, ಹಲವು ವರ್ಷಗಳಿಂದ ಸರಕಾರದ ಮನೆಗಳು ಮಂಜೂರಾಗಿಲ್ಲದ ಕಾರಣ ಬಡ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ ಎಂದು ತಿಳಿಸಿದರು. ಜೊತೆಗೆ ಮೂಲಭೂತ ಸೌಕರ್ಯಗಳ ಕೊರತೆ ಪರಿಹರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಸಂತಕುಮಾರ, ಗ್ರಾಮದಲ್ಲಿ ಅಗತ್ಯವಾದ ಕಾಮಗಾರಿಗಳಿಗೆ ಸಂಬಂಧಪಟ್ಟ ಇಂಜಿನಿಯರ್‌ರಿಗೆ ಅಂದಾಜು ಪಟ್ಟಿ ತಯಾರಿಸಲು ಸೂಚನೆ ನೀಡಿದ್ದು, ಇದೇ ವರ್ಷ ಕಾಮಗಾರಿ ಪ್ರಾರಂಭವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಮನೆಗಳ ಕುರಿತು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅತ್ಯಾಚಾರ ಪ್ರಕರಣ : ಅಪರಾಧಿಗೆ ಜೀವಾವಧಿ ಶಿಕ್ಷೆ
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ, ಕೆ.ಅಸ್ಲಾಂ ಪಾಶಾ, ಮಹ್ಮದ ಉಸ್ಮಾನ, ಆಂಜನೇಯ, ಬಸವರಾಜ, ಮಹೇಶ, ಭೀಮರೆಡ್ಡಿ, ಹನುಮಂತ, ಟೈಲರ್ ನರಸಪ್ಪ, ಜನಾರ್ಧನಗೌಡ, ಆನಂದ, ಶಿವರಾಜ ಹಾಗೂ ಇತರರು ಉಪಸ್ಥಿತರಿದ್ದರು.
