ಇಡೀ ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಧರ್ಮಸ್ಥಳ ಪ್ರಕರಣದಲ್ಲಿ ದಿನನಿತ್ಯ ನಾನಾ ಬೆಳವಣಿಗೆಗಳು ಘಟಿಸುತ್ತಿವೆ. ಅದರಲ್ಲಿ ತನಿಖೆ ನಡೆಯುತ್ತಿರುವ ಹಂತದ ಬೆಳವಣಿಗೆಗಳು ಒಂದು ಕಡೆಯಾದರೆ, ತನಿಖೆಯ ಹಾದಿ ತಪ್ಪಿಸಲು ನಡೆಯುತ್ತಿರುವ ಹುನ್ನಾರಗಳೂ ಮತ್ತೊಂದು ಕಡೆ ನಡೆಯುತ್ತಿವೆ. ಶನಿವಾರ, ಕೂಡ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ಬಿಜೆಪಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಧರ್ಮಸ್ಥಳ ಚಲೋ ನಡೆಸಿದ್ದಾರೆ. ಅಲ್ಲಿ ಯಾವುದೇ ರೀತಿಯ ಅನ್ಯಾಯ ಅಕ್ರಮ, ಕೊಲೆ ಅತ್ಯಾಚಾರಗಳು ನಡೆದಿಲ್ಲ. ಆಗಿರುವುದೆಲ್ಲ ಅತ್ಮಹತ್ಯೆಗಳು. ಹಾಗಾಗಿ ಅಲ್ಲಿ ಹೆಣಗಳು ಸಿಗುವುದು ಸಹಜ ಅಂತ ಬೊಬ್ಬೆ ಹಾಕ್ತಿದ್ದಾರೆ.
ಇದೆಲ್ಲದರ ನಡುವೆ, ಧರ್ಮಸ್ಥಳದ ಆನೆ ಮಾವುತ ನಾರಾಯಣ ಮತ್ತು ಅವರ ತಂಗಿ ಯಮುನಾ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ದೂರಿನ ಪ್ರತಿ ಬೆಳಕಿಗೆ ಬಂದಿದೆ. 2012ರ ನವೆಂಬರ್ 5ರಂದು ಮಾವುತ ನಾರಾಯಣ ಮತ್ತು ಯಮುನಾ ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಆ ಜೋಡಿ ಕೊಲೆಗಳನ್ನು ಚಿನ್ನ ಕದಿಯಲು ಬಂದ ದರೋಡೆಕೋರರು ಮಾಡಿದ್ದಾರೆ ಎಂದು ಎಫ್‌ಐಆರ್ ದಾಖಲಿಸಲಾಗಿತ್ತು. ಮೂರು ಕಾಸಿನ ಸಂಬಳ ತಗೊಳ್ಳುತ್ತಿದ್ದ ಮಾವುತ ನಾರಾಯಣ್ ಅವರು ದರೋಡೆಕೋರರು ದರೋಡೆ ಮಾಡುವಷ್ಟು ಚಿನ್ನ ಇಟ್ಟಿದ್ದರೇ, ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಲಿಲ್ಲ. ಕೊಲೆಯ ಹಿಂದಿನ ನಿಜವಾದ ಕಾರಣ ದರೋಡೆಯೇ ಆಗಿತ್ತಾ ಎಂದೂ ತನಿಖೆ ನಡೆಸಲಿಲ್ಲ.
ಆದಾಗ್ಯೂ, ಮಾವುತನ ಹೆಂಡತಿ ಸುಂದರಿ ಅವರು 2013ರ ನವೆಂಬರ್ 05ರಂದು ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಬರೆದಿದ್ದರು ಎನ್ನಲಾದ ಪತ್ರವನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಸಿ.ಎಸ್ ದ್ವಾರಕಾನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪತ್ರವು ನೈಜ ಪತ್ರವೆಂದು ಮಾಜಿ ಐಪಿಎಸ್ ಅಧಿಕಾರಿ, ಮಾಜಿ ಲೋಕಸಭಾ ಸದಸ್ಯ ಕೋದಂಡರಾಮಯ್ಯ ಪುಲಿ ಅವರು ಹೇಳಿದ್ದಾರೆ. ಆ ಪತ್ರವು ನಾರಾಯಣ ಮತ್ತು ಯಮುನಾ ಅವರ ಕೊಲೆ ದರೋಡೆಕೋರರಿಂದ ನಡೆದದ್ದಲ್ಲ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದೆ. ಕೊಲೆಯ ಹಿಂದಿನ ಸತ್ಯವನ್ನು ವಿವರಿಸಿದೆ. ಸುಂದರಿ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಹೀಗಿದೆ;
ನನ್ನ ಗಂಡ ಅವರ ಹಿರಿಯರ ಕಾಲದಿಂದಲೂ ಧರ್ಮಸ್ಥಳ ಗ್ರಾಮದ ಜೂರ್ಜೆ ಎಂಬಲ್ಲಿರುವ ತನ್ನ ಮನೆಯಲ್ಲಿ ತನ್ನ ಸಹೋದರಿ ಯಮುನಾ ಎಂಬರರೊಂದಿಗೆ ವಾಸವಾಗಿದ್ದರು. ನಾನು ಮತ್ತು ನನ್ನ ಮಕ್ಕಳು ನನ್ನ ಗಂಡನ ಮನೆಗೆ ಆಗಾಗ ಹೋಗಿ ಬರುತ್ತಿದ್ದೆವು.ನನ್ನ ಗಂಡ ವಾಸ ಮಾಡಿಕೊಂಡಿದ್ದ ಮನೆಯನ್ನು ತೆರವುಗೊಳಿಸುವಂತೆ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಎಂಬವರು ಕಳೆದ ಸುಮಾರು ಐದು ವರ್ಷಗಳಿಂದ ಬೆದರಿಸುತ್ತಿದ್ದರು. ಸುಮಾರು ಐದು ವರ್ಷಗಳ ಹಿಂದೆ ನನ್ನ ಗಂಡನನ್ನು ಅವರ ಮನೆಯ ಅಂಗಳದಲ್ಲೇ ಎರಡು ಸಲ ಥಳಿಸಿರುತ್ತಾರೆ. ದಿನಾಂಕ 2012-09-20ರಂದು ಸಂಜೆ ಹರ್ಷೇಂದ್ರ ಕುಮಾರ್ ಅವರು ನನ್ನ ಗಂಡ ವಾಸವಾಗಿದ್ದ ಮನೆಗೆ ಬೇಟಿ ನೀಡಿ ಮನೆಯನ್ನು ಕೂಡಲೇ ತೆರವುಗೊಳಿಸುವಂತೆಯೂ ತಪ್ಪಿದಲ್ಲಿ ಸ್ಥಿತಿ ನೆಟ್ಟಗಿರುವುದಿಲ್ಲ ಎಂದು ನನ್ನ ಗಂಡನಿಗೆ ಜೀವ ಬೆದರಿಕೆ ಹಾಕಿರುತ್ತಾರೆ.
ದಿನಾಂಕ 2012-09-21ರಂದು ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗಣೇಶೋತ್ಸವ ಪ್ರಯುಕ್ತ ನಾಟಕ ವೀಕ್ಷಿಸಿ ನನ್ನ ಗಂಡ ಮತ್ತು ಅವರ ಸಹೋದರಿ ಯಮುನಾ ಅವರು ತಮ್ಮ ಮನೆಗೆ ಸುಮಾರು 10 ಗಂಟೆಯ ಅಂದಾಜಿಗೆ ಬಂದಿರುತ್ತಾರೆ. ಮಾರನೇ ದಿನ ಮಧ್ಯಾಹ್ನ 12 ಗಂಟೆಯ ಸಮಯವಾದರೂ ಮನೆಯ ಬಾಗಿಲು ತೆರೆಯದಿರುವುದನ್ನು ಅರಿತು ಸ್ಥಳೀಯರು ಗಮನಿಸಿದಾಗ, ನನ್ನ ಗಂಡನ ತಲೆಗೆ ಸೈಜು ಕಲ್ಲು ಮತ್ತು ಅವರ ಸಹೋದರಿ ಯಮುನಾ ಅವರ ತಲೆಗೆ ರುಬ್ಬುವ ಕಲ್ಲನ್ನು ಎತ್ತು ಹಾಕಿ ಕೊಲೆ ಮಾಡಲಾಗಿರುವುದು ತಿಳಿದು ಬಂದಿರುತ್ತದೆ.

ಸದ್ರಿ ಪ್ರಕರಣವನ್ನು ಈವರೆಗೂ ಸರಿಯಾಗಿ ತನಿಖೆ ನಡೆಸಿರುವುದಿಲ್ಲ. ಜೋಡಿ ಕೊಲೆಯ ಆರೋಪಿಗಳು ಯಾರೆಂಬುದು ಈವರೆಗೂ ಪತ್ತೆಯಾಗಿರುವುದಿಲ್ಲ. ನನ್ನ ಗಂಡನ ಬಳಿ ಯಾವುದೇ ಸಂಪತ್ತು, ಹಣ, ಆಭರಣಗಳು ಇದ್ದಿರಲಿಲ್ಲ ಮತ್ತು ಇದ್ದಂತಹಾ ಅಲ್ಪ-ಸ್ವಲ್ಪ ಹಣ ಮತ್ತು ಆಭರಣಗಳನ್ನು ಸಹಾ ದೋಚಿರುವುದಿಲ್ಲ. ನನ್ನ ಗಂಡನಿಗೆ ಯಾರೂ ವಿರೋಧಿಗಳಿದ್ದರಲಿಲ್ಲ. ಕೇವಲ ನನ್ನ ಗಂಡ ವಾಸವಾಗಿದ್ದ ಮನೆ ಮತ್ತು ಅಡಿ ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ. ಆದರೆ, ಆ ಕೊಲೆ ಪ್ರಕರಣದ ತನಿಕೆಯ ಮಾಡಿರುವುದಿಲ್ಲ.
ಈ ವಿಷಯವನ್ನು ಮೂರು ದಿನಗಳ ನಂತರ ಖಾವಂದರನ್ನು (ವೀರೇಂದ್ರ ಹೆಗ್ಗಡೆ) ಖುದ್ದು ಭೇಟಿಯಾಗಿ ತಿಳಿಸಿದಾಗ, ಆಗುವುದು ಆಗಿ ಹೋಯ್ತು ಆ ವಿಷಯವನ್ನು ಬಿಟ್ಟುಬಿಡಿ ಎಂದು ತಿಳಿಸಿರುತ್ತಾರೆ. ನನ್ನ ಗಂಡನ ಮನೆಗೆ ಹರ್ಷೇಂದ್ರ ಕುಮಾರ್ ಅವರು ಬೀಗ ಜಡಿದು, ಮನೆಯಲ್ಲಿದ್ದ ಯಾವುದೇ ವಸ್ತುಗಳನ್ನು ನನಗೆ ತರಲು ಬಿಟ್ಟಿರುವುದುದಿಲ್ಲ ಮತ್ತು ಮನೆಗೆ ಪ್ರವೇಶಿಸದಂತೆ ಬೆದಿಸಿರುತ್ತಾರೆ.
ನನ್ನ ಗಂಡ ವಾಸ ಮಾಡಿಕೊಂಡಿದ್ದ ಮನೆಯ ಚಾವಿಯನ್ನು ನನಗೆ ತೆಗೆಸಿಕೊಟ್ಟು ನನಗೆ ಸದ್ರಿ ಮನೆಯಲ್ಲಿ ವಾಸ ಮಾಡಲು ಅನುವು ಮಾಡಿಕೊಟ್ಟು, ನನ್ನ ಗಂಡ ಮತ್ತು ಅವರ ಸಹೋದರಿಯ ಜೋಡಿ ಕೊಲೆಯ ಪ್ರಕರಣವನ್ನು ಕೂಡಲೇ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ ನನಗೆ ನ್ಯಾಯ ಒದಗಿಸಿಕೊಡಬೇಕಾಗಿ ಪ್ರಾರ್ಥನೆ. – ತಮ್ಮ ವಿಶ್ವಾಸಿ ಸುಂದರಿ. ಸ್ಥಳ: ಮಂಗಳೂರು. ದಿನಾಂಕ: 05-11-2013.
ಈ ಪತ್ರದ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ರದ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ.