ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಎನ್‌ಟಿಪಿಸಿ ಕೂಡಗಿಯಲ್ಲಿ ಕನ್ನಡಿಗರಿಗೆ ಶೇ.70ರಷ್ಟು ಉದ್ಯೋಗ ನೀಡುವುದು ಮತ್ತು ಬಾಧಿತವಾದ ಗ್ರಾಮಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರವೇ(ಪ್ರವೀಣಶೆಟ್ಟಿ ಬಣ)ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕೂಡಗಿ ಎನ್‌ಟಿಪಿಸಿ ದ್ವಾರದ ಬಳಿ ತಹಶೀಲ್ದಾರ್ ಎಸ್ ಎಂ ಮ್ಯಾಗೇರಿ ಹಾಗೂ ಎನ್‌ಟಿಪಿಸಿ ಎಸ್ ಆರ್ ಕಾಲಿಯ ಮೂರ್ತಿ ಅವರಿಗೆ ಜಿಲ್ಲಾ ಅಧ್ಯಕ್ಷ ಬಸವರಾಜ ತಾಳಿಕೋಟಿ ಮತ್ತು ರವಿ ಗೊಳಸಂಗಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟಿ ಮಾತನಾಡಿ, “ಎನ್‌ಟಿಪಿಸಿ ಕೂಡಗಿಯಲ್ಲಿ ಕನ್ನಡಿಗರಿಗೆ ಶೇ.70ರಷ್ಟು ಉದ್ಯೋಗ ನೀಡಿ, ಈ ಭಾಗದ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು. ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು” ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ರವಿ ಗೋಳಸಂಗಿ ಮಾತನಾಡಿ, “ಕೂಡಗಿ ಎನ್‌ಟಿಪಿಸಿಯಿಂದ ಬಾಧಿತ ಗ್ರಾಮಗಳಾದ ಕೂಡಗಿ, ಮಸೂತಿ, ತೆಲಗಿ, ಗೋಳಸಂಗಿ ಹಾಗೂ ಮುತ್ತಗಿ ಈ ಎಲ್ಲ ಗ್ರಾಮಗಳಿಂದ ಭೂಮಿಯನ್ನು ಪಡೆದುಕೊಂಡಿದ್ದು, ಸದರಿ ಜಮೀನು ಪಡೆಯುವಾಗ ಮಾಡಿಕೊಂಡ ಒಪ್ಪಂದ ಪ್ರಕಾರ ಸಂತ್ರಸ್ತರಿಗಾಗಿ ಹಲವು ಅವಕಾಶಗಳನ್ನು ಮುಂದಿಟ್ಟಿದ್ದು, ಅದರಲ್ಲಿ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ನ್ಯಾಯ ಒದಗಿಸಿಕೊಡಲು ಈ ಹೋರಾಟ ಅನಿವಾರ್ಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರಾಜ್ಯ ಸರ್ಕಾರ ಆ.19ರೊಳಗೆ ಒಳಮೀಸಲಾತಿ ಜಾರಿ ಮಾಡಬೇಕು: ಸಂಸದ ಗೋವಿಂದ ಕಾರಜೋಳ
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಶ್ರೀಕಾಂತ ರಾಠೋಡ, ನಿಡಗುಂದಿ ತಾಲೂಕು ಅಧ್ಯಕ್ಷ ಆನಂದ ಹಡಗಲಿ, ಉಪಾಧ್ಯಕ್ಷರಾದ ರಾಜೂಗೌಡ ಬಿರಾದಾರ, ಭೀಮನಗೌಡ ಬಿರಾದಾರ ಹಾಗೂ ಮುತ್ತು ಪೂಜಾರಿ, ಶ್ರೀಧರ ಬಳಿಗಾರ ಜಿಲ್ಲೆಯ ಕರೆವೇ ಕಾರ್ಯಕರ್ತರು ಇದ್ದರು.