ಹುಲಸೂರ ತಾಲೂಕಿನ ಮಿರಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಾಂಜರವಾಡಿ ಗ್ರಾಮದಲ್ಲಿ ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಶಾಂತಾ ತ್ರಿಮುಖ ಹಾಗೂ ಚಂದ್ರಕಲಾ ತ್ರಿಮುಖ ಎಂಬ ಅಂಗವಿಕಲ ಸಹೋದರಿಯರಿಗೆ ಕರ್ನಾಟಕ ಲೇಬರ್ ಎಜ್ಯೂಕೇಶನ್ ಸೊಸೈಟಿಯ ನಿರ್ದೇಶಕಿ ಕ್ರಾಂತಿ ಬಸಪ್ಪಾ ಕಲವಾಡಿಕರ್ ಅವರು ಭಾನುವಾರ ಮನೆಗೆ ಭೇಟಿ ನೀಡಿ ಆಹಾರ ಸಾಮಾಗ್ರಿ ಹಾಗೂ ವೈಯಕ್ತಿಕ ಧನ ಸಹಾಯ ಮಾಡಿದರು.
ಈ ಕುರಿತು ʼಈದಿನ.ಕಾಮ್ʼ ನಲ್ಲಿ (ಆ.12) ರಂದು ʼಸರ್ಕಾರಿ ಸೌಲಭ್ಯದಿಂದ ವಂಚಿತರಾದ ಅಂಗವಿಕಲ ಸಹೋದರಿಯರಿಗೆ ಬೇಕಿದೆ ಸಹಾಯಹಸ್ತʼ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ವರದಿಗೆ ಸ್ಪಂದಿಸಿದ ಅವರು ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಕುಟುಂಬಕ್ಕೆ ಕೈಲಾದಷ್ಟು ಸಹಕಾರ ಮಾಡಬೇಕೆಂದು ಮನೆಗೆ ಭೇಟಿ ನೀಡಿ ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಎಣ್ಣೆ ಸೇರಿದಂತೆ ಇತರೆ ಅವಶ್ಯ ಆಹಾರ ಸಾಮಾಗ್ರಿಗಳು ವಿತರಿಸಿ ಕುಟುಂಬಸ್ಥರ ಸಮಸ್ಯೆ ಆಲಿಸಿದರು.
ಒಂದೇ ಕುಟುಂಬದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ ನಿರ್ಗತಿಕರಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಹುಲಸೂರ ತಾಲೂಕು ಪಂಚಾಯತಿ ಇಒ ಮಹಾದೇವ ಜಮ್ಮು ಅವರೊಂದಿಗೆ ಮಾತನಾಡಿ ಅಂಗವಿಕಲ ಸಹೋದರಿಯರಿಗೆ ಸರ್ಕಾರದಿಂದ ಸಿಗಬೇಕಾದ ಸೌಕರ್ಯ ಒದಗಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಕ್ರಾಂತಿ ಕಲವಾಡಿಕರ್ ಅವರು ಮಾತನಾಡಿ, ʼಶೈಕ್ಷಣಿಕ ಕ್ಷೇತ್ರದ ಸೇವಾ ಕಾರ್ಯದ ಜೊತೆಗೆ ಬಡವರು, ನಿರ್ಗತಿಕರು, ಶೋಷಿತರ ಪರ ಧ್ವನಿಯಾಗಿ ಕೆಲಸ ಮಾಡುವ ಉದ್ದೇಶದಿಂದ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಇಚ್ಛಾಶಕ್ತಿ ಹೊಂದಿರುವೆ, ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯ ವಂಚಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು ʼ ಎಂದು ತಿಳಿಸಿದರು.

ʼನಮಗೆ ಒಟ್ಟು ಆರು ಜನ ಹೆಣ್ಣು ಮಕ್ಕಳು, ಅವರಲ್ಲಿ ಇಬ್ಬರು ಹುಟ್ಟು ಅಂಗವಿಕಲರು. ಆದರೆ ಇಲ್ಲಿಯವರೆಗೆ ಅವರಿಗೆ ಮಾಸಾಶನ ಬರುತ್ತಿಲ್ಲ. ಒಬ್ಬರಿಗೆ ಮಾಸಿಕ ₹800 ಬರುತ್ತಿತ್ತು, ಈಗ ಅದೂ ಸ್ಥಗಿತವಾಗಿದೆ. ಇದರಿಂದ ಉಪಜೀವನ ನಡೆಸಲು ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರ ನಮ್ಮ ಇಬ್ಬರು ಅಂಗವಿಕಲ ಹೆಣ್ಣು ಮಕ್ಕಳಿಗೆ ಮಾಸಿಕ ₹1,400 ಮಾಸಾಶನ ಮಂಜೂರು ಮಾಡಿಸಲು ಪೋಷಕರು ಸಹಕಾರ ಕೋರಿದರು.
ಇದನ್ನೂ ಓದಿ : ಬೀದರ್ | ಈದಿನ ಫಲಶೃತಿ: ವಿಕಲಚೇತನ ಸಹೋದರಿಯರ ಮನೆಗೆ ದೌಡಾಯಿಸಿದ ಅಧಿಕಾರಿಗಳು; ಮಾಸಾಶನದ ಭರವಸೆ
ಈ ಸಂದರ್ಭದಲ್ಲಿ ಕಲವಾಡಿಯ ಮಹಾತ್ಮ ಗಾಂಧಿ ಪ್ರೌಢ ಶಾಲೆ ಮುಖ್ಯಗುರು ಕಿರಣ ಭಾಟಸಾಂಗವಿ, ನಿವೃತ್ತ ಶಿಕ್ಷಕ ಜಯರಾಜ ದಾಬಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ನಂದಾದೀಪ ಬೊರಾಳೆ, ಆಕಾಶ ಸಿಂಧೆ ನಾಗರಾಳ, ನಿರ್ಮಲ ಕುಮಾರ್, ಪತ್ರಕರ್ತ ಬಾಲಾಜಿ ಕುಂಬಾರ್, ಸ್ಥಳೀಯರಾದ ಗಣೇಶ ಪಾಟೀಲ್, ಗುರುಪ್ರಸಾದ ಎಮ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.