ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗವು ಏಳು ದಿನಗಳ ಒಳಗೆ ಅಫಿಡವಿಟ್ ಸಲ್ಲಿಸುವಂತೆ ಅಥವಾ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚನೆ ನೀಡಿದೆ.
ರಾಹುಲ್ ಗಾಂಧಿಯವರ ಮತ ಕಳ್ಳತನ ಮತ್ತು ಎರಡು ಮತದಾನದ ಆರೋಪಗಳಿಗೆ ಸಂಬಂಧಿಸಿದಂತೆ ಈ ಆದೇಶವನ್ನು ಆಯೋಗವು ಹೊರಡಿಸಿದೆ.
ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, “ರಾಹುಲ್ ಗಾಂಧಿಯವರು ತಮ್ಮ ಆರೋಪಗಳಿಗೆ ಪುರಾವೆಗಳೊಂದಿಗೆ ಏಳು ದಿನಗಳ ಒಳಗೆ ಅಫಿಡವಿಟ್ ಸಲ್ಲಿಸಬೇಕು. ಇಲ್ಲವಾದರೆ, ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ಈ ಎರಡೂ ಆಯ್ಕೆಗಳನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಅಫಿಡವಿಟ್ ಸಲ್ಲಿಕೆಯಾಗದಿದ್ದರೆ, ಈ ಆರೋಪಗಳನ್ನು ಆಧಾರರಹಿತ ಎಂದು ಪರಿಗಣಿಸಲಾಗುವುದು,” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?
ರಾಹುಲ್ ಗಾಂಧಿಯವರ ಹೇಳಿಕೆಗಳನ್ನು “ಪ್ರಜಾಪ್ರಭುತ್ವದ ಸಂಸ್ಥೆಗಳಿಗೆ ಅವಮಾನ” ಎಂದು ಕರೆದ ಆಯುಕ್ತರು, ಇಂತಹ ಆರೋಪಗಳು ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ಕೆಡಿಸುತ್ತವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. “ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವನ್ನು ಪಾರದರ್ಶಕವಾಗಿ ನಡೆಸಲು ಎಲ್ಲರೂ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಇಂತಹ ಆಧಾರರಹಿತ ಆರೋಪಗಳು ಚುನಾವಣಾ ಪ್ರಕ್ರಿಯೆಯ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸುತ್ತವೆ,” ಎಂದು ಅವರು ಹೇಳಿದರು.
ಮತ ಕಳ್ಳತನ ಮತ್ತು ಎರಡು ಮತದಾನದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ ಜ್ಞಾನೇಶ್ ಕುಮಾರ್, “ಈ ಆರೋಪಗಳಿಗೆ ಇದುವರೆಗೆ ಯಾವುದೇ ದೃಢವಾದ ಪುರಾವೆಗಳು ಸಿಕ್ಕಿಲ್ಲ. ಚುನಾವಣಾ ಆಯೋಗವು ಎಲ್ಲ ವರ್ಗದ ಮತದಾರರಿಗೆ ತಾರತಮ್ಯವಿಲ್ಲದೆ ಸೇವೆ ಸಲ್ಲಿಸುತ್ತಿದೆ. ಇಂತಹ ಆರೋಪಗಳಿಂದ ಆಯೋಗವೂ ಭಾರತದ ಮತದಾರರೂ ಭಯಪಡುವುದಿಲ್ಲ,” ಎಂದು ಒತ್ತಿ ಹೇಳಿದರು.
“ಚುನಾವಣಾ ಆಯೋಗವನ್ನು ರಾಜಕೀಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನಗಳನ್ನು ಸಹಿಸಲಾಗದು. ಆಯೋಗವು ತನ್ನ ಕರ್ತವ್ಯವನ್ನು ಸಮರ್ಥವಾಗಿ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತದೆ,” ಎಂದು ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದರು.
