ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಿದೆ.
ಈ ನಿರ್ಧಾರವನ್ನು ಇಂದು ಸಂಜೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷದ ಸಂಸದೀಯ ಮಂಡಳಿಯ ಸಭೆಯಲ್ಲಿ ಅಂತಿಮಗೊಳಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಿತರ ಹಿರಿಯ ನಾಯಕರು ಭಾಗವಹಿಸಿದ್ದರು.
ತಮಿಳುನಾಡಿನ ತಿರುಪ್ಪೂರಿನಲ್ಲಿ 1957ರ ಅಕ್ಟೋಬರ್ 20ರಂದು ಜನಿಸಿದ ಚಂದ್ರಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್, ಆರ್‌ಎಸ್‌ಎಸ್ ಸ್ವಯಂಸೇವಕರಾಗಿ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದರು. 1974ರಲ್ಲಿ ಭಾರತೀಯ ಜನಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ರಾಜಕೀಯಕ್ಕೆ ಕಾಲಿಟ್ಟ ಅವರು, ಕೊಯಂಬತ್ತೂರಿನಿಂದ ಎರಡು ಬಾರಿ (1998 ಮತ್ತು 1999) ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?
ಜವಳಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಸಾರ್ವಜನಿಕ ವಲಯದ ಸಮಿತಿಗಳು ಮತ್ತು ಹಣಕಾಸು ಸಮಿತಿಯ ಸದಸ್ಯರಾಗಿದ್ದರು. 2004-2007 ಅವಧಿಯಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.
ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಜುಲೈ 21, 2025ರಂದು ದಿಢೀರ್ ರಾಜೀನಾಮೆ ಸಲ್ಲಿಸಿದ ನಂತರ ಈ ಚುನಾವಣೆಗೆ ದಾರಿ ಮಾಡಿಕೊಟ್ಟಿತು. ಚುನಾವಣಾ ಆಯೋಗವು ಸೆಪ್ಟೆಂಬರ್ 9, 2025ರಂದು ಚುನಾವಣೆಯನ್ನು ಘೋಷಿಸಿದ್ದು, ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಸಂಸತ್ ಭವನದ ಮೊದಲ ಮಹಡಿಯಲ್ಲಿ ಮತದಾನ ನಡೆಯಲಿದೆ.