ಪೈಲಟ್‌ಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಮತ್ತು ನಿರ್ವಹಣಾ ಸಮಸ್ಯೆಯಿಂದಾಗಿ ಭಾನುವಾರ ಎರಡು ಏರ್ ಇಂಡಿಯಾ ವಿಮಾನಗಳನ್ನು ಟೇಕಾಫ್‌ಗೂ ಮುನ್ನ ರದ್ದು ಮಾಡಲಾಗಿದೆ. ದಿಢೀರ್ ವಿಮಾನ ರದ್ದಾದ ಕಾರಣ ಪ್ರಯಾಣಿಕರಿಗೆ ಸಮಸ್ಯೆ ಉಂಟಾಯಿತು.
ದೆಹಲಿ-ಲೇಹ್ ಮತ್ತು ಮುಂಬೈ-ಅಹಮದಾಬಾದ್ ವಿಮಾನಗಳನ್ನು ರದ್ದು ಮಾಡಲಾಗಿದ್ದು, ಕ್ರಮವಾಗಿ ನಾಲ್ಕು ಮತ್ತು ಆರು ಗಂಟೆಗಳ ವಿಳಂಬದ ನಂತರ ಪ್ರಯಾಣಿಕರು ಬದಲಿ ವಿಮಾನದಲ್ಲಿ ಹಾರಾಟ ನಡೆಸಿದರು.
ಇದನ್ನು ಓದಿದ್ದೀರಾ? ಏರ್ ಇಂಡಿಯಾ ವಿಮಾನದಲ್ಲಿ ಸೋರಿದ ನೀರು: ವೈರಲ್ ಆದ ವಿಡಿಯೋ
ಮೊದಲು 100ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಬೆಳಿಗ್ಗೆ 4:55 ಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲೇಹ್‌ಗೆ ಹಾರಾಟ ನಡೆಸಬೇಕಿದ್ದ AI 2479 ವಿಮಾನವನ್ನು ರದ್ದು ಮಾಡಲಾಗಿದೆ. ಪೈಲಟ್ ತಾಂತ್ರಿಕ ದೋಷ ಇರುವುದಾಗಿ ತಿಳಿಸಿದ ಬಳಿಕ ದಿಢೀರ್ ಆಗಿ ಹಾರಾಟ ರದ್ದು ಮಾಡಲಾಗಿದೆ. ನಂತರ ಪ್ರಯಾಣಿಕರನ್ನು ಮತ್ತೊಂದು ವಿಮಾನ ವ್ಯವಸ್ಥೆ ಮಾಡಲಾಗಿದ್ದು, ಅದು ಬೆಳಿಗ್ಗೆ 8:05ಕ್ಕೆ ಹಾರಾಟ ನಡೆಸಿದೆ.
ಇನ್ನು ಮುಂಬೈನಿಂದ ಅಹಮದಾಬಾದ್‌ಗೆ ಬೆಳಿಗ್ಗೆ 5:30ಕ್ಕೆ ನಿಗದಿಯಾಗಿದ್ದ AI 613 ವಿಮಾನವನ್ನು ನಿರ್ವಹಣಾ ಸಮಸ್ಯೆಗಳಿಂದಾಗಿ ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ರದ್ದುಗೊಳಿಸಲಾಯಿತು. ಫ್ಲೈಟ್-ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್‌ಅವೇರ್ ಪ್ರಕಾರ, ವಿಮಾನ ಬೆಳಿಗ್ಗೆ 11:21ಕ್ಕೆ ಹೊರಟಿದೆ.
ಇನ್ನು ದಿಢೀರ್ ಆಗಿ ದೆಹಲಿ-ಲೇಹ್ ವಿಮಾನ ರದ್ಧು ಮಾಡಿದ್ದರಿಂದ ಉಂಟಾದ ಸಮಸ್ಯೆ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪ್ರಯಾಣಿಕರೊಬ್ಬರು, “ನಮಗೆ ಮೊದಲು ಗೇಟ್ 30ರಿಂದ ಗೇಟ್ 36ಕ್ಕೆ ಧಾವಿಸುವಂತೆ ಹೇಳಲಾಯಿತು. ವಿಮಾನ ಹತ್ತಿದ ನಂತರ, ವಿಮಾನವು ರನ್‌ವೇ ತಲುಪಿತು. ಆದರೆ ಕ್ಯಾಪ್ಟನ್ ವಿಮಾನ ರದ್ಧು ಮಾಡಲಾಗಿದೆ ಎಂದು ಘೋಷಿಸಿದರು. ಅದಕ್ಕೂ ಮುನ್ನ ಐದು ನಿಮಿಷ ರನ್‌ವೇಯಲ್ಲೇ ವಿಮಾನ ನಿಂತಿತ್ತು. ಅಲ್ಲಿಂದ ಕೆಳಗಿಳಿಸಿ ಟರ್ಮಿನಲ್‌ಗೆ ಕರೆತರಲಾಯಿತು. ಬೆಳಿಗ್ಗೆ 6 ಗಂಟೆಗೆ, ವಿಮಾನದೊಳಗೆ ಇರುವಾಗ, ನಮ್ಮ ವಿಮಾನವನ್ನು ಬೆಳಿಗ್ಗೆ 7:30ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ನಮಗೆ ಇಮೇಲ್ ಬಂದಿದೆ” ಎಂದು ಹೇಳಿದ್ದಾರೆ.
“ವಿಮಾನದಿಂದ ಇಳಿದ ಬಳಿಕ ನಾವು ಮತ್ತೆ ಭದ್ರತಾ ತಪಾಸಣೆಗೆ ಒಳಗಾಗಬೇಕಾಯಿತು. ಬೆಳಿಗ್ಗೆ 6:40ಕ್ಕೆ ಆಹಾರ ಕೂಪನ್‌ಗಳನ್ನು ನೀಡಲಾಗಿತ್ತು. ಆದರೆ ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ನಾವು ಬೋರ್ಡಿಂಗ್ ಗೇಟ್‌ಗೆ ಹಿಂತಿರುಗಬೇಕಾಯಿತು. ಅನೇಕರು ಉಪಾಹಾರ ಮಾಡಲು ಸಾಧ್ಯವಾಗಲಿಲ್ಲ ಅಥವಾ ಆತುರದಿಂದ ಊಟವನ್ನು ಮಧ್ಯದಲ್ಲಿಯೇ ಬಿಡಬೇಕಾಯಿತು. ಬೆಳಿಗ್ಗೆ 7:20ಕ್ಕೆ ಬೋರ್ಡಿಂಗ್ ಪ್ರಾರಂಭವಾಯಿತು. ಅಂತಿಮವಾಗಿ ವಿಮಾನವು ಬೆಳಿಗ್ಗೆ 8:05ಕ್ಕೆ ಹೊರಟಿತು” ಎಂದು ಪ್ರಯಾಣಿಕರು ತಿಳಿಸಿದ್ದಾರೆ.
