ಔರಾದ್ (ಬಾ) ತಾಲೂಕಿನಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಔರಾದ್ ತಾಲೂಕಿನ ಅಂಗನವಾಡಿ ಕೇಂದ್ರ ಸೇರಿದಂತೆ ಶಾಲಾ-ಕಾಲೇಜುಗಳಿಗೆ ಇಂದು (ಆ.18) ರಂದು ಒಂದು ದಿನ ರಜೆಯನ್ನು ಘೋಷಿಸಿ ಔರಾದ್ ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ.
ತೀವ್ರವಾಗಿ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಔರಾದ್ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸದರಿ ರಜೆ ದಿನದಂದು ನಡೆಯಬೇಕಾಗಿದ್ದ ಪಾಠ ಪ್ರವಚನಗಳನ್ನು ಮುಂದಿನ ದಿನಗಳಲ್ಲಿ ನಡೆಸಿ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಎಂದು ಸೋಮವಾರ ಬೆಳಿಗ್ಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಕಮಲನಗರ ತಾಲೂಕಿನ ಶಾಲೆಗಳಿಗೆ ರಜೆ : ಬಿಇಒ
ʼಎರಡ್ಮೂರು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಿಂದ ಔರಾದ್ ತಹಸೀಲ್ದಾರ್ ಅವರು ಔರಾದ್ ತಾಲೂಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಇಂದು (ಸೋಮವಾರ) ರಜೆ ಘೋಷಿಸಿದ್ದಾರೆ. ಕಮಲನಗರ ತಾಲೂಕಿನಲ್ಲಿಯೂ ಮಳೆಯ ಪ್ರಮಾಣ ಹೆಚ್ಚಿದ್ದು, ಇಲ್ಲಿನ ಶಾಲೆಗಳಿಗೆ ರಜೆ ಘೋಷಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದೇನೆʼ ಎಂದು ಕಮಲನಗರ ತಹಸೀಲ್ದಾರ್ ಅಮಿತ್ ಕುಲಕರ್ಣಿ ಈದಿನಕ್ಕೆ ತಿಳಿಸಿದ್ದಾರೆ.
ʼಔರಾದ್-ಕಮಲನಗರ ತಾಲೂಕು ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ ಅವರು ಮಾತನಾಡಿ, ʼಔರಾದ್ ಸೇರಿದಂತೆ ಕಮಲನಗರ ತಾಲೂಕಿನ ಶಾಲೆಗಳಿಗೂ ರಜೆ ನೀಡುವಂತೆ ಈಗಾಗಲೇ ಮೌಖಿಕವಾಗಿ ಆದೇಶ ಮಾಡಲಾಗಿದೆʼ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಬೀದರ್ | ಮಳೆಗೆ ಜಮೀನು ಜಲಾವೃತ : ಬೆಳೆ ಹಾನಿ ಆತಂಕದಲ್ಲಿ ರೈತರು
ಸೋಮವಾರ ಬೆಳಿಗ್ಗೆ ಎಂದಿನಂತೆ ಶಾಲಾ-ಕಾಲೇಜುಗಳಿಗೆ ತೆರಳಿದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಬಗ್ಗೆ ತಡವಾಗಿ ಮಾಹಿತಿ ಬಂದ ಕಾರಣ ಮರಳಿ ಮನೆಗೆ ಬರಬೇಕಾಗುತ್ತಿದೆ.