ಸಿದ್ದಾಪುರ ತಾಲ್ಲೂಕಿನ ಹುಲ್ಕುತ್ರಿಯ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಈ ಬಾರಿ ಸಹ ತಮ್ಮ ಕೃಷಿ ಅಧ್ಯಯನಕ್ಕೆ ಪ್ರಾಯೋಗಿಕ ರೂಪ ನೀಡಿದ್ದು, ಪರಿಸರ ಸ್ನೇಹಿ ಚಟುವಟಿಕೆಗಳನ್ನು ಉತ್ತೇಜಿಸುವ ಇಕೋ ಕ್ಲಬ್ ಅಡಿಯಲ್ಲಿ ಭತ್ತದ ಸಸಿ ನಾಟಿ ಕೈಗೊಂಡಿದ್ದಾರೆ. ಭಾನುವಾರದ ರಜಾದಿನದಲ್ಲಿಯೇ ಶಾಲೆಯ 11 ಮಂದಿ ವಿದ್ಯಾರ್ಥಿಗಳು ಹೆಮಜೆನಿ ಗ್ರಾಮದ ರೈತ ಲೋಕೇಶ ಪದ್ಮನಾಭ ಗೌಡ ಅವರ ಹೊಲದಲ್ಲಿ ಉತ್ಸಾಹದಿಂದ ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಎಸ್ಡಿಎಂಸಿ ಪಾಧ್ಯಕ್ಷೆ ವಾಣಿ ನಿತ್ಯಾನಂದ ಗೌಡ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಹಾಗೂ ಗಂಗೆ ಮಾಬ್ಲ ಗೌಡ ವಿದ್ಯಾರ್ಥಿಗಳಿಗೆ ನಾಟಿ ವಿಧಾನ, ಅಂತರದ ಮಹತ್ವ ಹಾಗೂ ಭತ್ತದ ಬೆಳೆಯ ಆರೈಕೆ ಬಗ್ಗೆ ಮಾರ್ಗದರ್ಶನ ನೀಡಿದರು.
ಈ ಬಾರಿ ವಿದ್ಯಾರ್ಥಿಗಳು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ‘ಕೊಡಗಿನ ಕೆ.ಎಚ್.ಬಿ-11’ ಎಂಬ ಹೊಸ ತಳಿಯ ಸಸಿಗಳನ್ನು ನೆಟ್ಟಿದ್ದಾರೆ. ಸಣ್ಣಕ್ಕಿ ಸ್ವರೂಪದ ಈ ತಳಿ ಎತ್ತರವಾಗಿ ಬೆಳೆದು ಉತ್ತಮ ಇಳುವರಿ ನೀಡುವುದು ಮಾತ್ರವಲ್ಲದೆ ಮಲೆನಾಡಿನ ಮಣ್ಣಿಗೆ ಸೂಕ್ತವಾಗಿದೆ. ಉತ್ತಮ ಗುಣಮಟ್ಟದ ಅನ್ನ ನೀಡುವ ಈ ತಳಿಯನ್ನು ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಅನುಭವಿಸುತ್ತಿದ್ದಾರೆ.

ಈ ಕಾರ್ಯಕ್ಕೆ ವಂದಾನೆಯ ಪ್ರಗತಿಪರ ರೈತ ನಾಗರಾಜ ಶ್ರೀನಿವಾಸ ಶಾನಭಾಗ ಬಿತ್ತನೆ ಬೀಜಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿದ್ದಾರೆ. ಬಿಳಗಿಯ ಮತ್ತೊಬ್ಬ ಪ್ರಗತಿಪರ ರೈತ ರವಿಲೋಚನಾ ಮಡಗಾಂವಕರ ಮಾರ್ಗದರ್ಶನ ಒದಗಿಸಿದ್ದಾರೆ. ಸುಮಾರು 4 ಗುಂಟೆ ಪ್ರದೇಶದಲ್ಲಿ ವಿದ್ಯಾರ್ಥಿಗಳು ಸ್ವತಃ ನಾಟಿ ಪೂರ್ಣಗೊಳಿಸಿದ್ದು, ತಮ್ಮ ಕೃಷಿ ಸಾಮರ್ಥ್ಯ ಹಾಗೂ ಶ್ರಮವನ್ನು ತೋರಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, “ಕೃಷಿಯ ಕಷ್ಟ-ಸುಖಗಳನ್ನು ನೇರವಾಗಿ ತಿಳಿದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಪುಸ್ತಕದಲ್ಲಿ ಓದಿದ ಪಾಠಕ್ಕಿಂತ ಹೊಲದಲ್ಲಿ ಕಲಿತ ಪಾಠವೇ ಹೆಚ್ಚು ನೆನಪಾಗುತ್ತದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರಾಗಿ ಪಿ ಶ್ರವಣ್ ಕುಮಾರ್ ನೇಮಕ
ಈ ಸಂದರ್ಭದಲ್ಲಿ ವಾಣಿ ನಿತ್ಯಾನಂದ ಗೌಡ, ಲೋಕೇಶ ಪದ್ಮನಾಭ ಗೌಡ, ಜಗದೀಶ ಪದ್ಮನಾಭ ಗೌಡ, ಗಂಗೆ ಮಾಬ್ಲ ಗೌಡ ಹಾಗೂ ಶಾಲಾ ಮುಖ್ಯೋಪಾಧ್ಯಾಯ ದರ್ಶನ ಹರಿಕಾಂತ ಉಪಸ್ಥಿತರಿದ್ದರು.