ಹಿಟ್ ಆ್ಯಂಡ್ ರನ್ ಪ್ರಕರಣವನ್ನು 36 ಗಂಟೆಗಳಲ್ಲಿ ಭೇದಿಸಲು ಕೃತಕ ಬುದ್ಧಿಮತ್ತೆ ಅಥವಾ AI ಮಹಾರಾಷ್ಟ್ರ ಪೊಲೀಸರಿಗೆ ಸಹಾಯ ಮಾಡಿದೆ. ನಾಗ್ಪುರದಲ್ಲಿ ನಡೆದ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದು, ತನ್ನ ಪತ್ನಿ ಮೇಲೆ ಹರಿದ ಟ್ರಕ್ ಮೇಲೆ ಇದ್ದ ಕೆಂಪು ಗುರುತು ಬಿಟ್ಟು ಬೇರೆ ಯಾವ ನೆನೆಪೂ ಪತಿಗೆ ಇರಲಿಲ್ಲ. ಇಂತಹ ಸಂದರ್ಭದಲ್ಲೂ 36 ಗಂಟೆಗಳಲ್ಲೇ ಪ್ರಕರಣ ಭೇದಿಸಲು AI ಸಹಾಯ ಮಾಡಿದೆ.
ಆಗಸ್ಟ್ 9ರಂದು ನಾಗ್ಪುರದಲ್ಲಿ ಟ್ರಕ್ ಒಂದು ಬೈಕ್‌ಗೆ ಡಿಕ್ಕಿ ಹೊಡೆದು ಸಾಗಿತ್ತು. ಈ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದು, ತನ್ನ ಪತ್ನಿಯ ಮೃತದೇಹವನ್ನು ಪತಿ ಬೈಕ್‌ಗೆ ಕಟ್ಟಿ ಮಧ್ಯಪ್ರದೇಶಕ್ಕೆ ಸಾಗಿದ ಹೃದಯವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆಘಾತಕ್ಕೆ ಒಳಗಾಗಿದ್ದ ವ್ಯಕ್ತಿಗೆ ಅಪಘಾತದ ಕನಿಷ್ಠ ಮಾಹಿತಿಯನ್ನೂ ನೀಡಲು ಸಾಧ್ಯವಾಗಿಲ್ಲ. ಆದರೂ AI ಸಹಾಯದಿಂದ ನಾವು ಆರೋಪಿಯ ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ನಾಗ್ಪುರ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹರ್ಷ್ ಪೊದ್ದಾರ್ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಹಿಟ್ ಆ್ಯಂಡ್ ರನ್ ಪ್ರಕರಣ | ಜ.17 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಲಾರಿ ಮಾಲೀಕರ ಸಂಘ ಕರೆ
“ಪರಸ್ಪರ 15-20 ಕಿ.ಮೀ ದೂರದಲ್ಲಿರುವ ಮೂರು ಪ್ರತ್ಯೇಕ ಟೋಟ್‌ಗಳ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಎರಡು AI ಅಲ್ಗಾರಿದಮ್‌ಗಳನ್ನು ಬಳಸಿ ವಿಶ್ಲೇಷಿಸಿದೆವು. ಇವೆರಡೂ ಕಂಪ್ಯೂಟರ್ ವಿಷುಯಲ್ ಎಂಬ ತಂತ್ರಜ್ಞಾನವನ್ನು ಆಧರಿಸಿವೆ. ಮೊದಲ ಅಲ್ಗಾರಿದಮ್ ಮೂಲಕ ಕೆಂಪು ಗುರುತುಗಳನ್ನು ಹೊಂದಿರುವ ಟ್ರಕ್‌ಗಳನ್ನು ಗುರುತಿಸಲಾಗಿದೆ. ಹಾಗೆಯೇ ಎರಡನೆಯದು ಈ ಎಲ್ಲಾ ಟ್ರಕ್‌ಗಳ ಸರಾಸರಿ ವೇಗವನ್ನು ವಿಶ್ಲೇಷಿಸಿ ಯಾವ ಟ್ರಕ್ ಭಾಗಿಯಾಗಿರಬಹುದು ಎಂಬುದರ ಕುರಿತು ನಮಗೆ ಎಚ್ಚರಿಕೆ ನೀಡಲು ಸಾಧ್ಯವಾಗುವಂತೆ ಮಾಡಿದೆ” ಎಂದು ತಿಳಿಸಿದ್ದಾರೆ.
“ಇದರ ಆಧಾರದ ಮೇಲೆ ಒಂದು ಟ್ರಕ್ ಅನ್ನು ಗುರುತಿಸಿದ್ದು ನಾಗ್ಪುರ ಗ್ರಾಮೀಣ ಪೊಲೀಸರ ತಂಡವು ಆರೋಪಿಗಳನ್ನು ಬಂಧಿಸಿದೆ. ನಾಗ್ಪುರದಿಂದ ಸುಮಾರು 700 ಕಿ.ಮೀ ದೂರದಲ್ಲಿರುವ ಗ್ವಾಲಿಯರ್-ಕಾನ್ಪುರ್ ಹೆದ್ದಾರಿಯಲ್ಲಿ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ನಾವು ಈಗ ಆರೋಪಿಗಳನ್ನು ಬಂಧಿಸಿದ್ದೇವೆ. AI ಬಳಸಿ 36 ಗಂಟೆಗಳಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣವನ್ನು ಭೇದಿಸಲಾಗಿದೆ” ಎಂದು ವಿವರಿಸಿದ್ದಾರೆ.
