ಭಾರತೀಯ ಸೇನೆಯ ಸೈನಿಕನನ್ನು ಕಂಬಕ್ಕೆ ಕಟ್ಟಿ, ಅಮಾನುಷವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನ ಟೋಲ್ ಬೂತ್‌ನಲ್ಲಿ ನಡೆದಿದೆ. ಐವರು ಟೋಲ್ ಸಿಬ್ಬಂದಿಗಳು ಸೈನಿಕನ ಮೇಲೆ ಹಲ್ಲೆ ನಡೆಸಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಸೈನಿಕನನ್ನು ಕಪಿಲ್ ಕವದ್ ಎಂದು ಹೆಸರಿಸಲಾಗಿದೆ. ಅವರು ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ರಜೆಗಾಗಿ ತಮ್ಮೂರಿಗೆ ಬಂದಿದ್ದ ಕಪಿಲ್, ಮರಳಿ ತಮ್ಮ ಸೇವಾ ಪ್ರದೇಶ ಶ್ರೀನಗರಕ್ಕೆ ಹೋಗಲು ದೆಹಲಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ವಾಹನ ದಟ್ಟಣೆಯಿಂದಾಗಿ ಭುನಿ ಟೋಲ್ ಬೂತ್‌ನಲ್ಲಿ ಸಿಲುಕಿಕೊಂಡಿದ್ದರು. ವಿಮಾನಕ್ಕೆ ತಡವಾಗುತ್ತಿದೆ ಎಂದು ಆತಂಕಗೊಂಡ ಕಪಿಲ್, ಕಾರಿನಿಂದ ಇಳಿದು ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಲು ತೆರಳಿದ್ದಾರೆ.
ಈ ವೇಳೆ, ಕಪಿಲ್ ಮತ್ತು ಟೋಲ್ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿದ್ದು, ಐದು ಮಂದಿ ಟೋಲ್ ಬೂತ್ ಸಿಬ್ಬಂದಿಗಳು ಕಪಿಲ್ ಮತ್ತು ಅವರ ಸೋದರಸಂಬಂಧಿಯನ್ನು ಥಳಿಸಿದ್ದಾರೆ. ಹಲ್ಲೆಯ ವೀಡಿಯೊದಲ್ಲಿ ವೈರಲ್ ಆಗಿದ್ದು, ಅದರಲ್ಲಿ; ಕಪಿಲ್ ಅವರನ್ನು ಕಟ್ಟಿಹಾಕಿ, ಕೋಲಿನಿಂದ ಹೊಡೆಯುವುದು ಕಂಡುಬಂದಿದೆ.
ಕಪಿಲ್ ಅವರ ಕುಟುಂಬಸ್ಥರು ಸರೂರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಲ್ವರು ಟೋಲ್ ಬೂತ್ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.
“ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊಗಳನ್ನು ಪರಿಶೀಲಿಸಿದ ಬಳಿಕ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲು ಇನ್ನೂ ಎರಡು ತಂಡಗಳು ಹುಡುಕಾಟ ಡನೆಸುತ್ತಿವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.