ಸೌಜನ್ಯ ಎಂಬ ಹೆಣ್ಣುಮಗಳು ನೆಲಕ್ಕುರುಳಿ ಲಯವಾದ ಮರವಲ್ಲ. ಕಾಂಡ ಅಳಿದರೂ ಬಿಳಲು ಬಿಟ್ಟು ಜೀವಂತವಾಗಿರುವ ಆಲದ ಮರ ಆಕೆ.
ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತಾದ ಬಳಿಕವೂ ಆತನೇ ಅತ್ಯಾಚಾರಿ ಎಂದು ನಕಲಿ ಕಥನ ಕಟ್ಟುವ ಪ್ರಯತ್ನಗಳು ನಡೆಯುತ್ತಲೇ ಇವೆ. ಪ್ರಕರಣ ಸಂಬಂಧ ಸಿಐಡಿಯಿಂದ ತನಿಖಾಧಿಕಾರಿಯಾಗಿದ್ದ ರುದ್ರಮುನಿಯವರು ಖಾಸಗಿ ಸುದ್ದಿವಾಹಿನಿಯೊಂದರೊಂದಿಗೆ ನಡೆಸಿರುವ ವಿಶೇಷ ಸಂವಾದ ಇರಬಹುದು, ರುದ್ರಮುನಿಯವರನ್ನು ಸರಿಯಾಗಿ ಪ್ರಶ್ನಿಸದ ಪತ್ರಕರ್ತರಿರಬಹುದು, ಸೌಜನ್ಯ ತಾಯಿಯ ಸಂಕಟವನ್ನು ಹೀಯಾಳಿಸುವ, ಅನುಮಾನಿಸುವ ಅಯೋಗ್ಯ ಮನಸ್ಥಿತಿಗಳಿರಬಹುದು- ಇವರೆಲ್ಲರೂ ಯಾರನ್ನು ರಕ್ಷಿಸಲು ಹೊರಟಿದ್ದಾರೆ? ಎಂಬ ಪ್ರಶ್ನೆಯನ್ನು ನಾಗರಿಕ ಸಮಾಜ ಕೇಳಿಕೊಳ್ಳುವುದು ಇಂದಿನ ತುರ್ತು.
ಖಾಸಗಿ ಸುದ್ದಿವಾಹಿನಿಯೊಂದಿಗೆ ರುದ್ರಮುನಿ ಮಾತನಾಡುತ್ತಾ, “ಸಂತೋಷ್ ರಾವ್ ಆಕೆಯನ್ನು (ಸೌಜನ್ಯಳನ್ನು) ಎಳೆದಾಡಿಕೊಂಡು ಹೋಗಿರುವುದಕ್ಕೆ ಸ್ಥಳದಲ್ಲಿ ಗುರುತುಗಳಿದ್ದವು. ಘಟನೆಯಲ್ಲಿ ಇಬ್ಬರಿದ್ದಿದ್ದರೂ ಆಕೆಯನ್ನು ಹೊತ್ತುಕೊಂಡು ಹೋಗುತ್ತಿದ್ದರು. ಹೀಗೆ ಎಳೆದಾಡುತ್ತಿರಲಿಲ್ಲ” ಎನ್ನುತ್ತಾರೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೆಣ್ಣುಮಗಳೊಬ್ಬಳು, “ಬಟ್ಟೆ ಹರಿದ ಗುರುತುಗಳಿವೆ ಎನ್ನಲಾಗುತ್ತಿದೆ. ರಕ್ತದ ಕಲೆಗಳು, ಗಾಯದ ಗುರುತುಗಳು ಇರಬೇಕಿತ್ತಲ್ಲವೇ? ಆ ಜಾಗವು ಕಲ್ಲುಗಳಿಂದ ಕೂಡಿತ್ತಲ್ಲವೇ? ಬಟ್ಟೆ ಹರಿಯದಂತೆ ಹೇಗೆ ಎಳೆದುಕೊಂಡು ಹೋಗಲಾಯಿತು?” ಎಂದು ಪ್ರಶ್ನಿಸಿದಾಗ ರುದ್ರಮುನಿ ಕೊಟ್ಟಿರುವ ಹೇಳಿಕೆಯೇ ಅವರ ಅಸಲಿ ಮುಖವನ್ನು ಬಯಲಿಗೆಳೆಯುತ್ತದೆ. “ಆತ ಸಾಕಷ್ಟು ದೂರ ಹೊತ್ತುಕೊಂಡ ಹೋದ ಬಳಿಕ ಎಳೆದಾಡಿದ್ದಾನೆ” ಎನ್ನುತ್ತಾರೆ ರುದ್ರಮುನಿ. ”ಒಬ್ಬನೇ ಹೊತ್ತುಕೊಂಡು ಹೋಗಲು ಸಾಧ್ಯವೇ ಇಲ್ಲ” ಎಂದು ಆರಂಭದಲ್ಲಿ ಹೇಳಿದರೆ, ಎರಡನೇ ಸಲ ಪ್ರತಿಕ್ರಿಯಿಸುವಾಗ, ”ಹೊತ್ತುಕೊಂಡು ಹೋದ ಬಳಿಕ ಎಳೆದಾಡಿದ್ದಾನೆ” ಎನ್ನುತ್ತಾರೆ. ರುದ್ರಮುನಿಯವರ ಹೇಳಿಕೆಗಳು ಗೊಂದಲಕಾರಿಯಾಗಿ ಕಂಡು ಬರುತ್ತವೆ. ಸಂತೋಷ್ ರಾವ್ ಅವರೇ ಕೊಲೆ ಮತ್ತು ಅತ್ಯಾಚಾರ ಮಾಡಿದ್ದಾನೆಂದು ನಿರೂಪಿಸಲು ಯತ್ನಿಸುವುದು ಇಂಥವರ ಉದ್ದೇಶವಾಗಿರುವುದು ಸ್ಪಷ್ಟವಾಗುತ್ತಿದೆ. ”ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಸಂತೋಷ್ ರಾವ್ ಖುಲಾಸೆಯಾಗಿದ್ದಾನೆ” ಎನ್ನುವ ರುದ್ರಮುನಿಯವರನ್ನು ಎದುರಿಗಿದ್ದ ಪತ್ರಕರ್ತ ಪ್ರಶ್ನಿಸುವುದಿಲ್ಲ. ”ಸೌಜನ್ಯ ಪ್ರಕರಣವನ್ನು ಸಂಪೂರ್ಣ ಅಧ್ಯಯನ ಮಾಡಿದ್ದೇನೆ” ಎಂದು ಹೇಳಿಕೊಳ್ಳುತ್ತಿದ್ದ ಆ ಪತ್ರಕರ್ತನಿಗೆ ತೀರ್ಪಿನಲ್ಲಿ ಉಲ್ಲೇಖಗೊಂಡಿರುವ ವಿಷಯಗಳನ್ನು ಪ್ರಸ್ತಾಪಿಸಬೇಕು ಅನಿಸಲಿಲ್ಲ. “ಹಾಗಾದರೆ, ಸಿಬಿಐ ಕೋರ್ಟಿನ ತೀರ್ಪಿನಲ್ಲಿ ಸಂತೋಷ್ ಅವರಿಗೂ ಈ ಪ್ರಕರಣಕ್ಕೂ ಸಂಪೂರ್ಣವಾಗಿ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದೇಕೆ? ಸೌಜನ್ಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯ ತಾಳಿದ್ದೇಕೆ? ಒಬ್ಬನೇ ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲ ಎನ್ನುವುದಾದರೆ ಉಳಿದವರು ಯಾರು?”- ಈ ಪ್ರಶ್ನೆಗಳನ್ನು ಎದುರಿದ್ದ ಪತ್ರಕರ್ತ ಕೇಳದಿದ್ದರೂ ಈ ರಾಜ್ಯದ ಜನ ಪ್ರಶ್ನಿಸಲೇಬೇಕಾಗುತ್ತದೆ.
”ಸೌಜನ್ಯ ಪವಿತ್ರವಾಗಿ ಸತ್ತಳು” ಎಂದೂ, ”ಆಕೆಯ ತಾಯಿ ಹಣಕ್ಕಾಗಿ ಮಗಳ ಸಾವನ್ನೇ ಬಳಸಿಕೊಳ್ಳುತ್ತಿದ್ದಾಳೆ, ಮಗಳ ಮೇಲೆ ಸಾಮೂಹಿಕ ಅತ್ಯಾಚಾರವಾಯಿತು ಎಂದು ಸುಳ್ಳು ಹೇಳುತ್ತಿದ್ದಾಳೆ” ಎಂದೂ ಎಲುಬಿಲ್ಲದ ನಾಲಿಗೆಗಳು ಬೇಕಾಬಿಟ್ಟಿ ಹೊರಳುತ್ತಿವೆ. ಆದರೆ ತಾಯಿ ಹೃದಯದ ಸಂಕಟಗಳು ಈ ದುಷ್ಟರಿಗೆ ಅರ್ಥವಾಗುವುದಿಲ್ಲ. ಹೀಗೆ ವಾದಿಸುವವರಿಗೂ ಅತ್ಯಾಚಾರಿಗಳಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಸೌಜನ್ಯ ಮೇಲೆ ಬಲವಂತದ ಸಂಭೋಗವಾಗಿದೆ ಎಂದು ತನಿಖೆಯಲ್ಲಿ ಕಂಡುಬಂದಿದೆ. ಹೀಗಿರುವಾಗ ಆಕೆಯ ಸಾವು ಪವಿತ್ರವಾಗಿತ್ತು ಎನ್ನುವ ದುಷ್ಟ ಮನಸ್ಥಿತಿಗಳ ಹುನ್ನಾರವಾದರೂ ಏನು? ಯಾರ ಹಿತಾಸಕ್ತಿಗಾಗಿ ಇಂತಹ ನಕಲಿ ನರೇಟಿವ್‌ಗಳೆಲ್ಲ ಹುಟ್ಟಿಕೊಂಡಿವೆ ಎಂದು ಕೇಳಲೇಬೇಕಾಗುತ್ತದೆ.
ಇದನ್ನೂ ಓದಿರಿ: ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ
ಸೌಜನ್ಯ ಪ್ರಕರಣದಲ್ಲಿ ಅಧಿಕಾರಿಗಳು ಸಾಕ್ಷ್ಯಾನಾಶ ಮಾಡಿರುವುದನ್ನು, ತನಿಖೆಯ ಹಳ್ಳ ಹಿಡಿಸಿರುವುದನ್ನು ಸಿಬಿಐ ಕೋರ್ಟ್ ಗಮನಿಸಿದೆ. ಹೀಗಾಗಿ ಕೋರ್ಟ್‌ನ ಆದೇಶದಂತೆ ಅಕ್ವಿಟಲ್ ಕಮಿಟಿ ರಚನೆಯಾಗಿ, ತಪ್ಪಿತಸ್ಥ ಅಧಿಕಾರಿಗಳ ವಿಚಾರಣೆ ನಡೆಯಬೇಕಾಗುತ್ತದೆ. ಅದಾವುದೂ ಇಲ್ಲಿ ಕಂಡು ಬರುತ್ತಿಲ್ಲ. ಅಕ್ವಿಟಲ್ ಸಮಿತಿ ರಚಿಸಬೇಕೆಂದು ಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಹೋರಾಟಗಾರರು ಒತ್ತಾಯಿಸುತ್ತಲೇ ಬಂದಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಕಾಳಜಿ ಇದ್ದಂತೆ ತೋರುತ್ತಿಲ್ಲ. ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕೆಂಬ ಆಗ್ರಹಗಳಿದ್ದರೂ ಸರ್ಕಾರ ಕಿವಿಮುಚ್ಚಿ ಕುಳಿತಿದೆ. ಸೌಜನ್ಯ ಕೊಲೆ ಮತ್ತು ಅತ್ಯಾಚಾರದ ಹಿಂದೆ ಪ್ರಭಾವಿಗಳಿದ್ದಾರೆ ಎಂದು ಅನುಮಾನಿಸಲು ಈ ಎಲ್ಲ ಬೆಳವಣಿಗೆಗಳು ಕಾರಣವಾಗುತ್ತಿವೆ.
ಆದರೆ ಒಂದಂತೂ ಸತ್ಯ. ಸೌಜನ್ಯ ಎಂಬ ಹೆಸರು ಎಲ್ಲರ ಅಂತರಾಳವನ್ನು ಕೊರೆಯುತ್ತಲೇ ಇರುತ್ತದೆ, ಪ್ರತಿಯೊಂದರಲ್ಲೂ ಕೋಮು ಆಯಾಮ ಹುಡುಕುವವರ ಮೌನವನ್ನು ಪ್ರಶ್ನಿಸುತ್ತಲೇ ಇರುತ್ತದೆ. ಸೌಜನ್ಯ ಎಂಬ ಹೆಣ್ಣುಮಗಳು ನೆಲಕ್ಕುರುಳಿ ಲಯವಾದ ಮರವಲ್ಲ. ಕಾಂಡ ಅಳಿದರೂ ಬಿಳಲು ಬಿಟ್ಟು ಜೀವಂತವಾಗಿರುವ ಆಲದ ಮರ ಆಕೆ. ಆ ಮುಗ್ಧ ಹೆಣ್ಣುಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಮುಚ್ಚಿಹಾಕಲು ಎಷ್ಟೇ ಯತ್ನಿಸಿದರೂ ಆಕೆ ಮತ್ತೊಂದು ಬಿಳಲಾಗಿ, ಚಿಗುರೊಡೆದು ನ್ಯಾಯ ಕೇಳುತ್ತಲೇ ಇರುತ್ತಾಳೆ. ಹೀಗಾಗಿಯೇ ಪ್ರಕರಣದ ಸುತ್ತ ನೂರಾರು ಸುಳ್ಳುಗಳನ್ನು ಹಬ್ಬಿಸುವ ಪಿತೂರಿಗಳು ನಡೆಯುತ್ತಲೇ ಇವೆ. ಜನತಾ ನ್ಯಾಯದಲ್ಲಿ ಗೆದ್ದಿರುವ ಸೌಜನ್ಯಳಿಗೆ, ಕಾನೂನಿನ ಅಡಿಯಲ್ಲಿಯೂ ನ್ಯಾಯ ದೊರಕಬೇಕಾಗಿದೆ.
