*2 ಕೋಟಿ ವೆಚ್ಚದಲ್ಲಿ ಆರಂಭಗೊಂಡ ಆಸ್ಪತ್ರೆಯಲ್ಲಿ ಖಾಯಂ ವೈದ್ಯರೇ ಇಲ್ಲ!*
ಚಿಕ್ಕಬಳ್ಳಾಪುರದ ಪುಣ್ಯಕ್ಷೇತ್ರ ಚಿಂತಾಮಣಿಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೊಚ್ಚ ಹೊಸ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದೆ ವಾರಕ್ಕೆ ಒಂದು ದಿನ ಮಾತ್ರ ಚಿಕಿತ್ಸೆ ಸಿಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ ಬಾವಾಜಾನ್ ದರ್ಗಾ ಸಮೀಪವೆ ಒಂದು ವರ್ಷದ ಹಿಂದೆ ದವಾ – ದುವಾ ಎಂಬ ಆಸ್ಪತ್ರೆ ನಿರ್ಮಾಣವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ ಸಿ ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿದಂತೆ ಹಲವು ನಾಯಕರು ಉದ್ಘಾಟನೆ ಮಾಡಿದ್ದರು. ಆದರೆ ಈ ಆಸ್ಪತ್ರೆಯಲ್ಲಿ ವಾರಕ್ಕೆ ಒಂದೇ ದಿನ ಚಿಕಿತ್ಸೆ ಭಾಗ್ಯ ಲಭ್ಯವಾಗುವುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಸದರಿ ಗ್ರಾಮದ ದರ್ಗಾಗೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದಲ್ಲದೆ ಮಾನಸಿಕ ಅಸ್ವಸ್ಥರ ಸಂಖ್ಯೆಯೂ ಸಹ ಇಲ್ಲಿ ಹೆಚ್ಚಾಗಿದೆ. ಅವರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕೆಂಬುದು ಸರ್ಕಾರದ ಉದ್ದೇಶವಾಗಿತ್ತು ಆದರೆ ಸರ್ಕಾರದ ಉದ್ದೇಶ ನೀರು ಪಾಲಾಗಿದೆ. ಸುಮಾರು ಎರಡು ಕೋಟಿ ಹಣ ಖರ್ಚು ಮಾಡಿ ಆಸ್ಪತ್ರೆ ಆರಂಭ ಮಾಡಲಾಗಿದ್ದು ಆಸ್ಪತ್ರೆಯಲ್ಲಿ ಖಾಯಂ ವೈದ್ಯರನ್ನೇ ಇದುವರೆಗೂ ಸರ್ಕಾರ ನೇಮಕ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ. ಆಸ್ಪತ್ರೆ ವಾರಕ್ಕೆ ಒಂದೇ ದಿನ ಅದು ಬುದುವಾರ ಮಾತ್ರ ಓಪನ್ ಮಾಡಲಾಗುತ್ತದೆ, ಸದರಿ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯರೇ ಅಲ್ಲಿ ನಿರ್ವಹಣೆ ಮಾಡುತ್ತಾರೆ ಆದರೆ ಚೀಟಿಯಲ್ಲಿ ರೋಗಿಯ ಹೆಸರನ್ನು ಬರೆದು ಬೇರೆಡೆಗೆ ರೆಫರ್ ಮಾಡುವುದು ಇವರ ಕೆಲಸ ಅಷ್ಟೇ.
ಇದನ್ನೂ ಓದಿ: ಚಿಂತಾಮಣಿ | ಬಡ್ಡಿ ಹಣದ ವಿಚಾರಕ್ಕೆ ಹಲ್ಲೆ: ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ; ಆಸ್ಪತ್ರೆಗೆ ದಾಖಲು
ಆಸ್ಪತ್ರೆಯ ಒಳಗೆ ಇರುವ ಬೆಡ್ ಮತ್ತು ಇತರೆ ಯಂತ್ರೋಪಕರಣಗಳ ಕವರ್ ಸಹ ಇದುವವರೆಗೂ ತೆಗೆದೆ ಇಲ್ಲ, ಇಲ್ಲಿ ಮಾನಸಿಕ ಅಸ್ವಸ್ತರು ಭೇಟಿ ನೀಡಿದರೆ ಈ ದರ್ಗಾದಲ್ಲಿ ಗುಣಪಡುತ್ತದೆ ಎಂಬ ನಂಬಿಕೆ ಇರುವ ಕಾರಣ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಮಾನಸಿಕ ಅಸ್ವಸ್ಥರು ಸಹ ಬರುತ್ತಿರುತ್ತಾರೆ. ಈ ಕೂಡಲೇ ಸರ್ಕಾರ ಗಮನವಹಿಸಿ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಿ ಆಸ್ಪತ್ರೆಯ ನಿರ್ವಹಣೆ ಮಾಡಬೇಕೆಂದು ದರ್ಗಾಗೆ ಬರುವ ಭಕ್ತರು ಮನವಿ ಮಾಡುತ್ತಾರೆ.