ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಮಹಾದೇವ ಕೋಟೆಯವರು ‘ ಉಳುಮೆ ಪ್ರತಿಷ್ಠಾನ ‘ದ ಮೂಲಕ ಮೈಸೂರಿನ ಗದ್ದಿಗೆ ಮುಖ್ಯ ರಸ್ತೆಗೆ ಹತ್ತಿರವಿರುವ ಬನವಾಸಿ ತೋಟದಲ್ಲಿ ದಿನಾಂಕ-24-08-2025 ರಂದು ‘ ಪ್ರೂನಿಂಗ್ ಮತ್ತು ಗ್ರಾಫ್ಟಿಂಗ್ ‘ ಕುರಿತಾಗಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
” ಮರಗಿಡಗಳಿಗೆ ಕಸಿ ಕಟ್ಟುವುದು ಒಂದು ಅದ್ಭುತವಾದ ಕಲೆ. ಇದನ್ನು, ಪ್ರತಿಯೊಬ್ಬ ರೈತನು ತನ್ನದಾಗಿಸಿಕೊಳ್ಳಬೇಕು. ಆಗ ಮಾತ್ರ ಇಳುವರಿ ಹಾಗೂ ಪೌಷ್ಠಿಕವಾದ ಹಣ್ಣುಗಳನ್ನು ಬೆಳೆಯಲು ಸಾಧ್ಯ. ಏಕೆಂದರೆ, 40 ವರ್ಷ ಆಯುಸ್ಸುಳ್ಳ ಮರದಿಂದ ಆಯ್ಕೆ ಮಾಡಿದ ಬೀಜದಿಂದ ಮಾತ್ರ ಸರಾಸರಿ ಇಳುವರಿ ಹಾಗೂ ಪೌಷ್ಠಿಕಯುಕ್ತ ಹಣ್ಣುಗಳನ್ನು ಪಡೆಯಲು ಸಾಧ್ಯ. ಆದರೆ, ಇಂದು 40 ವರ್ಷ ಆಯುಸ್ಸುಳ್ಳ ಮಾವಿನ ಮರಗಳು ಎಲ್ಲಿವೆ?. ಹಾಗಾಗಿ, ಹೆಚ್ಚು ರುಚಿಯುಳ್ಳ ಮರವನ್ನು ಆಯ್ಕೆ ಮಾಡಿಕೊಂಡು ಸುಲಭವಾಗಿ ದೊರೆಯುವ ಮಾವಿನ ಬೀಜವನ್ನು ಪಡೆದು ಕಸಿ ಮಾಡುವುದಾದರೆ ಇಳುವರಿಯ ಜೊತೆ ರುಚಿಯಾದ ಹಣ್ಣುಗಳನ್ನು ಪಡೆಯಲು ಸಾಧ್ಯ. ಇದೇ ರೀತಿ ಪಪ್ಪಾಯ, ಸೀತಾಫಲ, ಹನುಮಾನ್ ಫಲ, ಸೀಬೆ, ಸೇಬು ಮುಂತಾದ ಮರಗಿಡಗಳಿಗೂ ಕಸಿ ಕಟ್ಟುವ ವಿಧಾನದಿಂದ ಸಂಪದ್ಭರಿತವಾದ ಇಳುವರಿಯನ್ನು ಪಡೆಯಲು ಸಾಧ್ಯ ” ಎಂದು ಹೇಳಿದರು.
” ಇನ್ನು ಪ್ರೂನಿಂಗ್ ಸಸ್ಯಗಳ ಎಲೆಗಳಿಗೆ ಸರಿ ಪ್ರಮಾಣದ ಸೂರ್ಯನ ಕಿರಣಗಳು ದೊರೆತಾಗ ಮಾತ್ರ ದ್ಯುತಿ ಸಂಶ್ಲೇಷಣಾ ಕ್ರಿಯೆಯು ಸರಾಗವಾಗಿ ನಡೆಯುತ್ತಾ ಇಳುವರಿಯೂ ಹೆಚ್ಚಾಗುತ್ತದೆ. ಈಗ ಎಲ್ಲಾ ಎಲೆಗಳಿಗೂ ಸರಿಪ್ರಮಾಣದ ಸೂರ್ಯನ ಕಿರಣಗಳನ್ನು ಒದಗುವಂತೆ ಮಾಡಲು ಪ್ರೂನಿಂಗ್ ವಿಧಾನ ಸಹಕಾರಿಯಾಗುತ್ತದೆ. ಈ ವಿಧಾನದಿಂದ ಭತ್ತದ ಇಳುವರಿಯನ್ನು ಹೆಚ್ಚಿಸಬಹುದು. ಈ ಎಲ್ಲಾ ಮಾಹಿತಿಗಳನ್ನೊಳಗೊಂಡ ಒಂದು ದಿನದ ಕಾರ್ಯಗಾರ ನಡೆಯಲಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ” ಎಂದು ತಿಳಿಸಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಲೇಖಕ ಹಾಗೂ ಕೃಷಿ ತಜ್ಞ ಟಿ. ಜಿ. ಎಸ್. ಅವಿನಾಶ್ ” ಈ ಕಾರ್ಯಾಗಾರದಲ್ಲಿ ಕೃಷಿಕರು ಹಾಗೂ ಲೇಖಕರಾದ ಸುರೇಶ್ ದೇಸಾಯಿ, ಕೃಷಿಕರು ಹಾಗೂ ಲೇಖಕರಾದ ಟಿ. ಜಿ. ಎಸ್. ಅವಿನಾಶ್ ಹಾಗೂ ಕುಮಾರ್ ಮಾರುತಿ ಮುಗಳಿಯವರು ಭಾಗವಹಿಸಲಿದ್ದು, ಪ್ರೂನಿಂಗ್ ಮತ್ತು ಗ್ರಾಫ್ಟಿಂಗ್ ವಿಧಾನದ ಮೂಲಕ ಯಾವ ಮರ ಗಿಡಗಳಿಗೆ ಹೇಗೆ ಕಸಿ ಕಟ್ಟಬಹುದು, ಕಸಿ ಕಟ್ಟಲು ಸಹಕರಿಸುವ ಬೀಜಗಳ ಆಯ್ಕೆಯ ಬಗ್ಗೆ, ಸಸ್ಯಗಳ ಆಯ್ಕೆಯ ಬಗ್ಗೆ, ಯಾವ ರೆಂಬೆ ಕೊಂಬೆಗಳಿಗೆ ಕಸಿ ಕಟ್ಟಬಹುದು, ಯಾವ ಎಲೆಗಳು ಅಥವಾ ರೆಂಬೆಕೊಂಬೆಗಳನ್ನು ಪ್ರೂನಿಂಗ್ ಗೆ ಒಳಪಡಿಸಬಹುದು ಎನ್ನುವ ಹಲವಾರು ವಿಷಯಗಳನ್ನು ತಿಳಿಸಿಕೊಡಲಿದ್ದಾರೆ ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ?ಕೊಡಗು | ಕೆಎಸ್ಆರ್ಟಿಸಿ ಹೊಸ ಬಸ್, ಮಾರ್ಗಗಳಿಗೆ ಶಾಸಕ ಎ ಎಸ್ ಪೊನ್ನಣ್ಣ ಚಾಲನೆ
ಈ ಕಾರ್ಯಾಗಾರದಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅವಿನಾಶ್ ಟಿ ಜಿ ಎಸ್ – 8197856132.