ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಮಹಾಭಿಯೋಗ ಪ್ರಸ್ತಾವನೆ ಮಂಡಿಸಲು ವಿಪಕ್ಷಗಳನ್ನು ಒಳಗೊಂಡ ಇಂಡಿಯಾ ಒಕ್ಕೂಟ ಸಜ್ಜಾಗಿದೆ ಎಂದು ವರದಿಯಾಗಿದೆ.
ಮತ ಕಳವು ಆರೋಪದ ಬಗ್ಗೆ ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಅಥವಾ ರಾಷ್ಟ್ರಕ್ಕೆ ಕ್ಷಮೆಯಾಚಿಸುವಂತೆ ಲೋಕಸಭಾ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ ಅವರಿಗೆ ಸಿಇಸಿ ಹೇಳಿದ ಒಂದು ದಿನದ ನಂತರ ಮಹಾಭಿಯೋಗ ಪ್ರಸ್ತಾವನೆ ಮಂಡಿಸುವ ಸುದ್ದಿ ಹೊರಬಿದ್ದಿದೆ.
ಇದನ್ನು ಓದಿದ್ದೀರಾ? ಮತಗಳವು ಆರೋಪ ಸಂವಿಧಾನಕ್ಕೆ ಮಾಡಿದ ಅಪಮಾನ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್
ರಾಜ್ಯಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿರೋಧ ಪಕ್ಷದ ನಾಯಕರ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. ಕುಮಾರ್ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ನಿರ್ಧಾರವನ್ನು ಶೀಘ್ರ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
“ಭಾರತದ ಚುನಾವಣಾ ಆಯೋಗವು (ಇಸಿಐ) ತನ್ನ ಸಾಂವಿಧಾನಿಕ ಕರ್ತವ್ಯದಿಂದ ಹಿಂದೆ ಸರಿಯಲು ಮತ್ತು ಪ್ರಶ್ನೆಗಳಿಗೆ ಉತ್ತರಿಸುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ‘ಮತದಾನದ ಹಕ್ಕು’ ಭಾರತದ ಸಂವಿಧಾನವು ನಮಗೆ ನೀಡಿರುವ ಪ್ರಮುಖ ಹಕ್ಕು. ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ಇಂಡಿಯಾ ಒಕ್ಕೂ ಪ್ರತಿಭಟಿಸುತ್ತದೆ” ಎಂದು ಖರ್ಗೆ ಹೇಳಿದ್ದಾರೆ.
ಇನ್ನು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ನಸೀರ್ ಹುಸೈನ್, “ಅಗತ್ಯ ಬಿದ್ದರೆ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ಪ್ರಸ್ತಾವನೆ ಮಂಡಿಸಲೂ ಬಹುದು” ಎಂದಿದ್ದಾರೆ.
