ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

Date:

Advertisements
ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ. ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ರಚಿಸುವಾಗ ಸಂವಿಧಾನದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು, ಸಮಾನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಇರಬೇಕು ಎಂಬುದನ್ನು ಪ್ರತಿಪಾದಿಸಿದ್ದೇವೆ

ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಒಟ್ಟು 97 ಶಿಫಾರಸುಗಳನ್ನು ಮಾಡಿದೆ.

ರಾಜ್ಯ ಸರ್ಕಾರವು ರಾಜ್ಯ ಶಿಕ್ಷಣ ನೀತಿ ಆಯೋಗವನ್ನು 2023 ಅಕ್ಟೋಬರ್​ 11ರಂದು ಆದೇಶ ಹೊರಡಿಸಿ ರಾಜ್ಯಕ್ಕೆ ಶಿಕ್ಷಣ ನೀತಿಯನ್ನು ರೂಪಿಸಲು ನೇಮಿಸಿತ್ತು. ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ 17 ಸದಸ್ಯರು, 6 ವಿಷಯ ತಜ್ಞರು/ಸಲಹೆಗಾರರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿಯೊಂದಿಗೆ ಈ ಆಯೋಗ ವರದಿ ಸಿದ್ದ ಮಾಡಿದೆ.

ಆಯೋಗವು ನವೆಂಬರ್ 1, 2023 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿ, ಶಾಲಾ ಶಿಕ್ಷಣಕ್ಕಾಗಿ 16, ಉನ್ನತ ಶಿಕ್ಷಣಕ್ಕಾಗಿ 16 ಹಾಗೂ ವೃತ್ತಿಪರ ಶಿಕ್ಷಣಕ್ಕಾಗಿ 3 ಹೀಗೆ ಒಟ್ಟು 35 ಕಾರ್ಯಪಡೆಗಳನ್ನು ರಚಿಸಿಕೊಂಡು ವರದಿ ಸಿದ್ಧಪಡಿಸಿದೆ. ಒಟ್ಟು 379 ತಜ್ಞರು 35 ಕಾರ್ಯಪಡೆಗಳಲ್ಲಿ ಸಕ್ರಿಯ ಸದಸ್ಯರಾಗಿ ಭಾಗವಹಿಸಿದ್ದರು. ಇವರಲ್ಲಿ ಶಾಲಾ ವಲಯದಲ್ಲಿ 166, ಉನ್ನತ ಶಿಕ್ಷಣದಲ್ಲಿ 170 ಮತ್ತು ವೃತ್ತಿಪರ ಶಿಕ್ಷಣದಲ್ಲಿ ಸುಮಾರು 43 ತಜ್ಞರು ಇದ್ದರು. ಕಾಲಕ್ರಮೇಣ, ಆಯೋಗವು 42 ಸಭೆಗಳನ್ನು ನಡೆಸಿತು ಮತ್ತು ಕಾರ್ಯಪಡೆಗಳು 132 ಸಭೆಗಳನ್ನು ನಡೆಸಿದೆ. ಇದು ಸುಮಾರು 2,775 ಮಾನವ ದಿನಗಳ ಕೆಲಸಕ್ಕೆ ಸಮನಾಗಿದೆ.

Advertisements

ಆಯೋಗವು ವಿವಿಧ ಪಾಲುದಾರರೊಂದಿಗೆ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ 59 ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ 73 ಸಂವಾದಗಳನ್ನು ನಡೆಸಿ ಅಯೋಗವು ತನ್ನ ಮಧ್ಯಂತರ ವರದಿಯನ್ನು ಮಾರ್ಚ್ 2024 ರಲ್ಲಿ ಸಲ್ಲಿಸಿತ್ತು. ಮಾಹಿತಿ ಸಂಗ್ರಹಿಸಲು ಸಮಯಾವಕಾಶ ನೀಡುವಂತೆ ಆಯೋಗ ಅದೇ ವೇಳೆ ಮನವಿ ಮಾಡಿತ್ತು. ಸರ್ಕಾರ ಅವಧಿ ವಿತರಿಸಿದ ಮೇಲೆ ಆ.8ರಂದು ಅಂತಿಮ ವರದಿಯನ್ನು ಸುಖ್‌ದೇವ್ ಥೋರಟ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಆಯೋಗದ ಅಂತಿಮ ವರದಿ ಮೂರು ಸಂಪುಟಗಳಲ್ಲಿ ಕ್ರೋಡೀಕರಿಸಲಾಗಿದೆ. ಸಂಪುಟ 1A ಮತ್ತು 18 ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ್ದು, ಪ್ರತಿಯೊಂದೂ ಸುಮಾರು 580 ಪುಟಗಳನ್ನು ಹೊಂದಿದೆ. ಸಂಪುಟ 2A ಮತ್ತು 2B ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ್ದು, ಪ್ರತಿಯೊಂದೂ ಸುಮಾರು 455 ಪುಟಗಳನ್ನು ಹೊಂದಿದೆ. ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದ ಸಂಪುಟ 3 ಸುಮಾರು 450 ಪುಟಗಳನ್ನು ಹೊಂದಿದೆ. ಈ ವರದಿಯು ಒಟ್ಟು 2197 ಪುಟಗಳನ್ನು ಒಳಗೊಂಡಿದೆ.

ಆಯೋಗದ ಶಿಫಾರಸುಗಳನ್ನು ವಾಸ್ತವ ಪರಿಸ್ಥಿತಿಯ ಸಮಗ್ರ ತಿಳಿವಳಿಕೆಯ ಆಧಾರದ ಮೇಲೆ ರೂಪಿಸಲಾಗಿದೆ. ಲಭ್ಯವಿರುವ ಎಲ್ಲಾ ಅಧಿಕೃತ ದತ್ತಾಂಶಗಳು ಮತ್ತು ವಿವಿಧ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಗಳ ಆಧಾರದ ಮೇಲೆ ಕರ್ನಾಟಕದ ಶಾಲಾ ಮತ್ತು ಉನ್ನತ ಶಿಕ್ಷಣ ವಲಯಗಳು ಇಂತಹ ನಿಕಟ ಪರಿಶೀಲನೆಗೆ ಒಳಪಟ್ಟಿರುವುದು ಇದೇ ಮೊದಲ ಬಾರಿಗೆ ಎನ್ನಬಹುದು. ಆದ್ದರಿಂದ, ಶಿಫಾರಸುಗಳು ಅಪಾರವಾದ ಪ್ರಾಯೋಗಿಕ ದತ್ತಾಂಶ, ಮಾಹಿತಿ, ಮತ್ತು ದಶಕಗಳಿಂದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಶಿಕ್ಷಣದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರ ಅನುಭವಗಳ ಆಧಾರದ ಮೇಲೆ ರಚಿತವಾಗಿವೆ.

ಶಾಲಾ ಶಿಕ್ಷಣ ರಾಜ್ಯ ಶಿಕ್ಷಣ ನೀತಿ ಆಯೋಗ ಹೇಳಿದ್ದೇನು?

ಶಾಲಾ ಶಿಕ್ಷಣ ರಾಜ್ಯ ಶಿಕ್ಷಣ ನೀತಿ ಆಯೋಗ ಒಟ್ಟು 26 ಶಿಫಾರಸ್ಸುಗಳನ್ನು ಮಾಡಿದೆ. ಇದರಲ್ಲಿ ಮುಖ್ಯವಾಗಿ ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವುದು, ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸುವುದು(ಕನ್ನಡ/ಮಾತೃಭಾಷೆ – ಇಂಗ್ಲಿಷ್) ಹಾಗೂ ಪ್ರತ್ಯೇಕ ನಿಯಂತ್ರಣ ಚೌಕಟ್ಟಿನ ಮೂಲಕ ಖಾಸಗಿ ಪೂರ್ವ-ಪ್ರಾಥಮಿಕ ಶಾಲೆಗಳನ್ನು ನಿಯಂತ್ರಿಸಲು ಸೂಚಿಸಲಾಗಿದೆ.

ಶಾಲಾ ಶಿಕ್ಷಣ ಕುರಿತ ಶಿಫಾರಸುಗಳನ್ನು ಬಹುತೇಕ ಫೈನಲ್‌ ಮಾಡಿದ ಶಿಕ್ಷಣತಜ್ಞ ವಿ.ಪಿ ನಿರಂಜನಾರಾಧ್ಯ ಅವರು ಈ ದಿನ.ಕಾಂ ಜೊತೆ ಮಾತನಾಡಿ, “ಈವರೆಗೂ ರಾಜ್ಯದಲ್ಲಿ ಪ್ರತ್ಯೇಕ ಶಿಕ್ಷಣ ನೀತಿ ಇರಲಿಲ್ಲ. ಇದೇ ಮೊದಲು. ಶಿಕ್ಷಣ ನೀತಿ ಹೇಗಿರಬೇಕು ಎಂಬುದನ್ನು ಬಹಳಷ್ಟು ಅಧ್ಯಯನ ಮಾಡಿ ರಚಿಸಿದ್ದೇವೆ. ಮುಖ್ಯವಾಗಿ ನಾವು ಪಿಯು ಶಿಕ್ಷಣ ಪರಿಕಲ್ಪನೆ ರಾಜ್ಯದಲ್ಲಿ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಹೀಗಾಗಿ ಹೊಸ ರಚನೆ 2+8+4 ಅಳವಡಿಸಿಕೊಳ್ಳಲು ಸೂಚಿಸಿದ್ದೇವೆ. ಅಂದರೆ, ಎರಡು ವರ್ಷ ಪೂರ್ವ ಪ್ರಾಥಮಿಕ, 8 ವರ್ಷ ಪ್ರಾಥಮಿಕ ಹಾಗೂ 4 ವರ್ಷ ಮಾಧ್ಯಮಿಕ (ಪ್ರೌಢ) ಶಿಕ್ಷಣ ಇರಬೇಕು ಎಂದು ಶಿಫಾರಸು ಮಾಡಿದ್ದೇವೆ” ಎಂದು ಹೇಳಿದರು.

“ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ. ಇದರ ಹಿಂದೆ ಒಂದು ಅಜೆಂಡಾ ಇದೆ. ಶಿಕ್ಷಣ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಹುನ್ನಾರವಿದೆ. ನಾವು ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಹೀಗಾಗಿ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ರಚಿಸುವಾಗ ಸಂವಿಧಾನದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು, ಸಮಾನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಇರಬೇಕು ಎಂಬುದನ್ನು ಪ್ರತಿಪಾದಿಸಿದ್ದೇವೆ” ಎಂದು ತಿಳಿಸಿದರು.

“ಮಗು ಮಾತೃಭಾಷೆಯನ್ನು ಸರಿಯಾಗಿ ಕಲಿಯದಿದ್ದರೆ ಬೇರೆ ಭಾಷೆಗಳನ್ನು ಕಲಿಯಲು ಆಗುವುದಿಲ್ಲ. ಹೀಗಾಗಿ ಬೋಧನೆ ಮಾಧ್ಯಮ ವಿಚಾರದಲ್ಲಿ 5ನೇ ತರಗತಿವರೆಗೂ ಕನ್ನಡ/ಮಾತೃಭಾಷೆಯಲ್ಲೇ ಶಿಕ್ಷಣ ಇರಬೇಕು ಎಂಬುದು ನಮ್ಮ ನಿಲುವು. ಜೊತೆಗೆ ದ್ವಿಭಾಷಾ ನೀತಿ (ಕನ್ನಡ-ಇಂಗ್ಲಿಷ್‌) ಬಗ್ಗೆಯೂ ನಾವು ಹೇಳಿದ್ದೇವೆ. ಸರ್ಕಾರಿ ಶಾಲೆಯ ಗುಣಮಟ್ಟವನ್ನು ಕೇಂದ್ರೀಯ ವಿದ್ಯಾಲಯಗಳಿಗೆ ಸಮಾನಾಂತರವಾಗಿ ಹೆಚ್ಚಿಸುವಲ್ಲಿ ಸೂಚಿಸಿದ್ದೇವೆ. ಅಂತಿಮವಾಗಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಕಾದು ನೋಡಬೇಕು” ಎಂದರು.

ಶಿಕ್ಷಣ ತಜ್ಞ ಬಿ ಶ್ರೀಪಾದಭಟ್ ಅವರು ಮಾತನಾಡಿ, “ರಾಜ್ಯ ಶಿಕ್ಷಣ ನೀತಿ ಆಯೋಗ ಸಲ್ಲಿಸಿರುವ ವರದಿಯಲ್ಲಿ ನನಗೆ ಹೊಸ ವಿಷಯಗಳು ಅಂತ ಯಾವುದು ಕಾಣುತ್ತಿಲ್ಲ. ಹಿಂದೆ ವ್ಯಕ್ತಪಡಿಸಿದ್ದ ಆಶಯಗಳೇ ಇವೆ. ಒಂದು ಹೊಸ ವಿಷಯ ಗಮನ ಸೆಳೆದಿರುವುದು ಹಂತ ಹಂತವಾಗಿ ಆರ್‌ಟಿಇ ವ್ಯಾಪ್ತಿಯನ್ನು 4-18 ವರ್ಷಕ್ಕೆ ವಿಸ್ತರಿಸುವುದು. ಹಿಂದೆ 6-14 ಇತ್ತು. ಇದು ಹೊಸ ಸಂಗತಿ. ಅದನ್ನು ಬಿಟ್ಟರೆ ಖಾಸಗಿ ಶಾಲೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆ ರಚಿಸಲು ಸೂಚಿಸಿದೆ. ಇದು ಒಳ್ಳೆಯ ಕ್ರಮ. ಬಜೆಟ್‌ ನಲ್ಲಿ ಶೇ.30 ರಷ್ಟು ಎತ್ತಿಡಲು ಹೇಳಲಾಗಿದೆ. ಇದು ಸಾಧ್ಯವೇ? ಇವು ಮೇಲ್ನೋಟಕ್ಕೆ ಕಾಣುವ ಸಂಗತಿಗಳು. ವರದಿ ಪೂರ್ತಿ ಕೈಗೆ ಸಿಕ್ಕ ಮೇಲೆ ಪೂರ್ಣ ಅಭಿಪ್ರಾಯವನ್ನು ಹೇಳಬಹುದು” ಎಂದು ತಿಳಿಸಿದರು.

ಶಾಲಾ ಶಿಕ್ಷಣ ಕುರಿತ ಶಿಫಾರಸು

  1. 2+8+4 ರಚನೆಯನ್ನು ಅಳವಡಿಸಿಕೊಳ್ಳಲು ಸೂಚಿಸಿದೆ(2 ವರ್ಷ ಪೂರ್ವ-ಪ್ರಾಥಮಿಕ, 8 ವರ್ಷ ಪ್ರಾಥಮಿಕ ಹಾಗೂ 4 ವರ್ಷ ಮಾಧ್ಯಮಿಕ ಶಿಕ್ಷಣ.
  2. ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಸ್ಥಾಪಿಸುವುದು.
  3. ರಾಜ್ಯದಾದ್ಯಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವುದು.
  4. ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವುದು.
  5. ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸುವುದು(ಕನ್ನಡ/ಮಾತೃಭಾಷೆ – ಇಂಗ್ಲಿಷ್)
  6. ಎರಡು ವರ್ಷಗಳ ಪೂರ್ವ-ಪ್ರಾಥಮಿಕ ಕಾರ್ಯಕ್ರಮಗಳನ್ನು ಪ್ರಾಥಮಿಕ ಶಾಲೆಗಳಿಗೆ ಲಗತ್ತಿಸುವುದು.
  7. ಪ್ರತ್ಯೇಕ ನಿಯಂತ್ರಣ ಚೌಕಟ್ಟಿನ ಮೂಲಕ ಖಾಸಗಿ ಪೂರ್ವ-ಪ್ರಾಥಮಿಕ ಶಾಲೆಗಳನ್ನು ನಿಯಂತ್ರಿಸುವುದು.
  8. ಹಂತ ಹಂತವಾಗಿ RTE ವ್ಯಾಪ್ತಿಯನ್ನು 4-18 ವಯಸ್ಸಿನವರಿಗೆ ವಿಸ್ತರಿಸುವುದು.
  9. ಸರ್ಕಾರಿ ಶಾಲಾ ಗುಣಮಟ್ಟವನ್ನು ಕೇಂದ್ರೀಯ ವಿದ್ಯಾಲಯಗಳಿಗೆ ಸಮನಾಗಿ ಹೆಚ್ಚಿಸುವುದು.
  10. ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಪಠ್ಯಕ್ರಮವನ್ನು (CCSE) ಅಭಿವೃದ್ಧಿಪಡಿಸುವುದು.
  11. NCERT ಪಠ್ಯಪುಸ್ತಕಗಳ ಅವಲಂಬನೆಯನ್ನು ಕೊನೆಗೊಳಿಸಿ; ವಿಷಯಗಳನ್ನು ಸ್ಥಳೀಯಗೊಳಿಸುವುದು.
  12. ಗುತ್ತಿಗೆ/ಅತಿಥಿ ಶಿಕ್ಷಕರ ನೇಮಕಾತಿಗಳನ್ನು ನಿಲ್ಲಿಸುವುದು.
  13. ಹೆಚ್ಚಿನ ಖಾಸಗೀಕರಣವನ್ನು ತಡೆಗಟ್ಟುವುದು.
  14. ಖಾಸಗಿ ಶಾಲೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆಯನ್ನು ರಚಿಸುವುದು.
  15. ಶೈಕ್ಷಣಿಕ ಪರಿಣಾಮಕ್ಕಾಗಿ ಬ್ಲಾಕ್ ಶಿಕ್ಷಣ ಕಚೇರಿಗಳಿಗೆ ಅಧಿಕಾರ ನೀಡುವುದು.
  16. ಭಾರತೀಯ ಜ್ಞಾನ ವ್ಯವಸ್ಥೆ ಕೋರ್ಸ್ ರಚನೆಗೆ ಒಂದು ಅಲಾಯದ ರಾಜ್ಯ ಸಮಿತಿ ರಚಿಸುವುದು.
  17. ಸಮಾನಾಂತರ ಏಜೆನ್ಸಿಗಳನ್ನು ಸಮಗ್ರ ಆಯುಕ್ತಾಲಯಕ್ಕೆ ವಿಲೀನಗೊಳಿಸುವುದು.
  18. DSERT ಅನ್ನು R&D ಗಾಗಿ ಸ್ವಾಯತ್ತ SCERT ಆಗಿ ಪರಿವರ್ತಿಸುವುದು.
  19. ಜೀವಮಾನ ಕಲಿಕೆ ನಿರ್ದೇಶನಾಲಯವನ್ನು ಪುನರುಜ್ಜೀವನಗೊಳಿಸುವುದು.
  20. ಸಂವಿಧಾನ ಮತ್ತು ವೈಜ್ಞಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಸಾರ್ವಜನಿಕ ಗ್ರಂಥಾಲಯಗಳನ್ನು ಬಳಸಿಕೊಳ್ಳುವ ಕುರಿತು ಪರಿಶೀಲಿಸುವುದು.
  21. ರಾಜ್ಯದ ಒಟ್ಟು ವೆಚ್ಚದಲ್ಲಿ ಶಿಕ್ಷಣದ ಪಾಲನ್ನು 30% ಕ್ಕೆ ಹೆಚ್ಚಿಸುವುದು.
  22. ಪ್ರತಿ ವಿದ್ಯಾರ್ಥಿಗೆ ವಾರ್ಷಿಕವಾಗಿ 5-10% ರಷ್ಟು ವೆಚ್ಚ ಹೆಚ್ಚಳವನ್ನು ಖಚಿತಪಡಿಸುವುದು.
  23. ಸಮಾನತೆ, ಗುಣಮಟ್ಟ ಮತ್ತು ತರಬೇತಿಗಾಗಿ ಮೀಸಲು ಬಜೆಟ್ ಹಂಚಿಕೆ ಮಾಡುವುದು.
  24. ರಾಜ್ಯದ ಜವಾಬ್ದಾರಿಗಳನ್ನು ಬದಲಿಸದೆ, ರಾಜ್ಯೇತರ ಸಂಸ್ಥೆಗಳಿಂದ ಹೆಚ್ಚುವರಿ ನಿಧಿಯನ್ನು ಸಂಗ್ರಹಿಸುವುದು.
  25. ‘ಸಾಂವಿಧಾನಿಕ ಮೌಲ್ಯ ಶಿಕ್ಷಣ’ವನ್ನು ಕಡ್ಡಾಯ ವಿಷಯವನ್ನಾಗಿ ಮಾಡುವುದು.
  26. ಕರ್ನಾಟಕ ರಾಜ್ಯ ಮುಕ್ತ ಶಾಲಾ ವ್ಯವಸ್ಥೆಯನ್ನು ಸ್ಥಾಪಿಸುವುದು.

(ಮುಂದುವರಿಯವುದು…)

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

2 COMMENTS

  1. ಅತ್ಯುತ್ತಮವಾದ ಲೇಖನವಾಗಿದೆ ಶರಣು ಚಕ್ರಸಾಲಿ ಅವರಿಗೆ ಧನ್ಯವಾದಗಳು

  2. ವರದಿ ಉತ್ತಮ ಮಾಹಿತಿಯನ್ನು ನೀಡಿದೆ. ಧನ್ಯವಾದಗಳು.

    ಆದರೆ ಈ ವರದಿಯನ್ನು ಕುರಿತ ವಿಮರ್ಶಾತ್ಮಕ ನೋಟಗಳು ಹೆಚ್ಚು ಉಪಯುಕ್ತ. ಇದರ ದೂರಗಾಮಿ ಪರಿಣಾಮಗಳೇನು? ಪ್ರಸ್ತುತ ಇರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಯಾವ ಬದಲಾವಣೆ ತರಬಹುದು ಇತ್ಯಾದಿ ಒಳನೋಟಗಳಿರುವ ಲೇಖನವನ್ನು ಈದಿನ.ಕಾಂ ನ ಓದುಗರು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X