ಸರಕಾರದ ಆದೇಶದಂತೆ ಕನಿಷ್ಟ ವೇತನ ಪಾವತಿಸಲು ಮತ್ತು ಬೀದರ ಮಾದರಿಯಂತೆ ಸೊಸೈಟಿ ಪ್ರಾರಂಭಿಸುವುದು ಹಾಗೂ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಸೋಮವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವುದರ ಮೂಲಕ ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘಟನೆಯ ರಾಜ್ಯ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಮಾತನಾಡಿ, ʼಕಲಬುರಗಿ ಜಿಲ್ಲೆಯಲ್ಲಿರುವ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು 2025 ಫೆಬ್ರುವರಿ ತಿಂಗಳಲ್ಲಿ 27 ದಿನಗಳ ಕಾಲ ನಿರಂತರ ಹೋರಾಟ ನಡೆಸಿದಾಗ ಸರಕಾರ ಕನಿಷ್ಟ ವೇತನ 25,714 ರೂಪಾಯಿ ಕೊಡುವುದಾಗಿ ಘೋಷಿಸಿತು. ಅಲ್ಲದೆ ಪವಾರ್ ಏಜೆನ್ಸಿಗಳ ಶೋಷಣೆ ತಪ್ಪಿಸಲು ಇಡೀ ರಾಜ್ಯದಲ್ಲಿ ಬೀದರ ಮಾದರಿಯಲ್ಲಿ ಸೊಸೈಯಿಟಿ ಪ್ರಾರಂಭಿಸಲಾಗುವುದೆಂದು ಸರಕಾರ ಒಪ್ಪಿಕೊಡಿತು. ಆದರೆ, ಐದು ತಿಂಗಳು ಕಳೆದರೂ ಯಾವುದೇ ಪ್ರಕ್ರಿಯೆ ಮಾಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕೂಡಲೇ ಒಪ್ಪಿಕೊಂಡ ಬೇಡಿಕೆ ಈಡೇರಿಸಬೇಕುʼ ಎಂದು ಒತ್ತಾಯಿಸಿಸಿದರು.
“ಸಮಾಜ ಕಲ್ಯಾಣ ಇಲಾಖೆ ಬಿಸಿಎಂ ಇಲಾಖೆ ನೌರರಿಗೆ ಜುಲೈ ತಿಂಗಳವರೆಗೆ ವೇತನ ಪಾವತಿಸಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೌಕರರಿಗೆ 2-3 ತಿಂಗಳ ವೇತನ ಪಾವತಿಯಾಗಿಲ್ಲ. ಅಲ್ಲದೆ ಈ ಶಾರ್ಪ್ ಏಜೆನ್ಸಿಯು ಇಪಿಎಫ್ ಮತ್ತು ಇಎಸ್ಐ ಪ್ರತಿ ತಿಂಗಳು ನೌಕರರ ಹೆಸರಿಗೆ ತುಂಬದೆ ಮೋಸ ಮಾಡಲಾಗುತ್ತಿದೆ. ಇದೇ ಮೈಸೂರಿನ ಶಾರ್ಪ್ ಏಜೆನ್ಸಿಯು ಸಮಾಜ ಕಲ್ಯಾಣ ಇಲಾಖೆ ನೌಕರರರಿಗೆ ಈ ಹಿಂದೆ 2025 ಜನವರಿವರೆಗೆ ನಾಲ್ಕು ವರ್ಷಗಳ ವೇತನ ಪಾವತಿಸಿದ್ದು 3-4 ತಿಂಗಳ ಬಾಕಿ ವೇತನ ಪಾವತಿಸಿರುವುದಿಲ್ಲ. ನೌಕರರು ಬಾಕಿ ವೇತನ ಕೇಳಿದರೆ ಇಲ್ಲವೆಂದು ಹೇಳುತ್ತಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಶಾರ್ಪ್ ಏಜೆನ್ಸಿಯು ಮೋರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ, ವಸತಿ ನಿಲಯಗಳ ನೌಕರರಿಗೆ ಅನುದಾನವಿದ್ದರೂ ಸಮಯಕ್ಕೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ. ಇಪಿಎಫ್, ಇಎಸ್ಐ ಸರಿಯಾಗಿ ಸವಲತ್ತುಗಳನ್ನು ಕೊಡದೆ ಅನ್ಯಾಯ ಮಾಡುತ್ತಿದ್ದಾರೆʼ ಎಂದು ಆರೋಪಿಸಿದರು.
ʼಈ ಹಿಂದೆ ನೇರ ನೇಮಕಾತಿಯಿಂದ ಜಿಲ್ಲೆಯಲ್ಲಿ ಕೆಲಸ ಕಳೆದುಕೊಂಡ 75 ಜನ ನೌಕರರು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಆದರೆ ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಲಂಚ ಪಡೆದಿ ಹೊಸಬರನ್ನು ನೇಮಕ ಮಾಡಿಕೊಳ್ಳುವುದನ್ನು ತಡೆಗಟ್ಟಬೇಕುʼ ಎಂದು ಮನವಿ ಸಲ್ಲಿಸಿದರು.
ಇದನ್ನೂ ಓದಿ : ರಾಜ್ಯದಲ್ಲಿ ಅಧಿಕ ಮಳೆ : 4 ತಿಂಗಳಲ್ಲಿ 101 ಜನ, 843 ಜಾನುವಾರು ಸಾವು; 15 ಸಾವಿರ ಹೆಕ್ಟೇರ್ ಬೆಳೆ ಹಾನಿ
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಪರಶುರಾಮ ಹಡಲಗಿ, ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಬಂಡಿ, ಜೇವರ್ಗಿ ತಾಲೂಕು ಅಧ್ಯಕ್ಷ ಕಲ್ಯಾಣಿ ಪೂಜಾರಿ, ಅಫಜಲಪೂರ ಅಧ್ಯಕ್ಷ ಬಾಬು ಹೊಸಮನಿ, ಆಳಂದ ತಾಲೂಕು ಅಧ್ಯಕ್ಷೆ ನಾಗರತ್ನ ಮದನಕರ, ಸಂದಿಪ್ಪ ಯಗನೂರ, ಜಿಲ್ಲಾ ಉಪಾಧ್ಯಕ್ಷೆ ಮೆಘರಾಜ ಕಠಾರೆ, ಚಿತ್ತಾಪೂರ ತಾಲೂಕು ಅಧ್ಯಕ್ಷ ರವಿಚಂದ್ರ ಯರಗೋಳಿ, ಸುನಿಲ ಹಾಗರಗಿ, ಸೇಡಂ ತಾಲೂಕು ಅಧ್ಯಕ್ಷೆ ನರಸಮ್ಮ ಕೊರಿಡಂಪಳ್ಳಿ ಇನ್ನಿತರರು ಭಾಗವಹಿಸಿದರು.
https://shorturl.fm/KzbDe