ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆರೋಪಿಸಿದ್ದಾರೆ ಎಂಬ ತಿರುಚಿದ ವಿಡಿಯೋ ವೈರಲ್ ಆಗುತ್ತಿರುವ ನಡುವೆ ತಿಮರೋಡಿ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದು ತಿಮರೋಡಿ ಹೇಳಿರುವಂತಹ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯ ಬಳಿಕ ವಿಪಕ್ಷ ನಾಯಕ ಆರ್ ಅಶೋಕ್ ಅವರು ಈ ವಿಡಿಯೋ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಹೈಕೋರ್ಟ್ ಆದೇಶ ವದಂತಿ; ‘ಮಾಹಿತಿ ಇಲ್ಲ’ ಎಂದ ದ.ಕ. ಎಸ್‌ಪಿ
ಧರ್ಮಸ್ಥಳ ವಿರುದ್ಧ ನಿರಂತರ ಅಪಪ್ರಚಾರ ಮಾಡುವ ವ್ಯಕ್ತಿಯೇ ಸಿದ್ಧರಾಮಯ್ಯ ವಿರುದ್ಧ ಕೊಲೆ ಆರೋ ಮಾಡಿ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೇ ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚಿಸಿದ ಸರ್ಕಾರ ಸಿದ್ಧರಾಮಯ್ಯ ವಿರುದ್ಧದ ಆರೋಪಕ್ಕೂ ಎಸ್‌ಐಟಿ ರಚಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಸದನದಲ್ಲಿ ಅವರ ಹೆಸರು ಹೇಳಿ ಹಿರೋ ಮಾಡುವುದು ಬೇಡ. ಆತ ಸಿಎಂ ಮಾತ್ರವಲ್ಲದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಗ್ಗೆಯೂ ಹೇಳಿದ್ದಾರೆ. ಸರ್ಕಾರ ಎಲ್ಲವನ್ನೂ ಗಮನಿಸುತ್ತಿದೆ. ಗೃಹ ಇಲಾಖೆ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಪರಮೇಶ್ವರ್ ಅವರು, “ಈಗಾಗಲೇ ತಿಮರೋಡಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಹೇಳಿಕೆ ಸಂಬಂಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಲು ಸೂಚನೆ ನೀಡಲಾಗಿದೆ ಎಂದರು.
ಆದರೆ ನಿಜವಾಗಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋ ತಿರುಚಿದ ವಿಡಿಯೋ ಆಗಿದ್ದು, ಅದರ ಬಗ್ಗೆಯೇ ಸದನದಲ್ಲಿ ಚರ್ಚೆ ನಡೆದಿದೆ. ನಿಜವಾಗಿ 2023ರ ವಿಡಿಯೋ ಇದಾಗಿದ್ದು, ಬಿಜೆಪಿ ಶಾಸಕ ಹರೀಶ್ ಪೂಂಜಾ ನೀಡಿದ್ದ ಹೇಳಿಕೆಯನ್ನು ತಿಮರೋಡಿ ಪ್ರಸ್ತಾಪಿಸಿದ್ದರು ಮತ್ತು ನಮ್ಮ ಪ್ರತಿನಿಧಿ ಹೇಳಿದ ಮೇಲೆ ನಾವು ನಂಬಬೇಕಾಗುತ್ತದೆ. ಈ ಆರೋಪವನ್ನು ಒಪ್ಪಿಕೊಳ್ಳಬೇಕು ಅಥವಾ ಸಿದ್ದರಾಮಯ್ಯ ತಾವು ಕೊಲೆ ಮಾಡಿಲ್ಲ ಎಂದು ಸಾಬೀತು ಪಡಿಸಿ ಸುಳ್ಳು ಹೇಳಿದ ಹರೀಶ್ ಪೂಂಜಾ ಅವರನ್ನು ಜೈಲಿಗೆ ಹಾಕಬೇಕು ಎಂದು ಹೇಳಿದ್ದರು.
